
ಬಿಜೆಪಿಯ 18 ಶಾಸಕರ ಅಮಾನತು ಪ್ರಕರಣದಲ್ಲಿ ಶಾಸಕರ ಅಮಾನತು ಆದೇಶ ಹಿಂಪಡೆಯುವಂತೆ ಮನವಿ ಸಲ್ಲಿಸಲಾಗಿದೆ. ಸ್ಪೀಕರ್ ಯು.ಟಿ ಖಾದರ್ ಕಚೇರಿಗೆ ಆಗಮಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದ ನಿಯೋಗ ಮನವಿ ಕೊಟ್ಟಿದ್ದು ಶಾಸಕರ ಅಮಾನತು ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.

ಅಶೋಕ್ ನೇತೃತ್ವದ ನಿಯೋಗದಲ್ಲಿ ಶಾಸಕರಾದ ಅಶ್ವಥ್ ನಾರಾಯಣ್, ಸಿ.ಕೆ ರಾಮಮೂರ್ತಿ, ಎಸ್.ಆರ್ ವಿಶ್ವನಾಥ್, ಮುನಿರತ್ನ, ಬೈರತಿ ಬಸವರಾಜು ಹಾಜರಿದ್ದರು. ವಿಧಾನಸೌಧದ ಸ್ಪೀಕರ್ ಅವರ ಕೊಠಡಿಗೆ ಆಗಮಿಸಿದ ಶಾಸಕರ ನಿಯೋಗ, ಅಮಾನತು ಆದೇಶ ಹಿಂಪಡೆಯುವಂತೆ ಸ್ಪೀಕರ್ ಯು. ಟಿ ಖಾದರ್ಗೆ ಶಾಸಕರು ಮನವಿ ಮಾಡಿದ್ದಾರೆ.

ಸ್ಪೀಕರ್ ಭೇಟಿ ಬಳಿಕ ಶಾಸಕ ಬೈರತಿ ಬಸವರಾಜು ಮಾತನಾಡಿ, ಸ್ಪೀಕರ್ ಖಾದರ್ ಅವರಿಗೆ ಎಲ್ಲವನ್ನೂ ಹೇಳಿದ್ದೇವೆ. ಅಮಾನತು ವಾಪಸ್ ಪಡೆಯಲು ಹೇಳಿದ್ದೇವೆ. ವಿಧಾನಸಭಾ ಕಾರ್ಯದರ್ಶಿ ಅವರ ಜತೆ ಚರ್ಚಿಸ್ತೇನೆ ಅಂತ ಸ್ಪೀಕರ್ ಹೇಳಿದ್ದಾರೆ. ಅಮಾನತು ಆದೇಶ ವಾಪಸ್ ಪಡೆಯುವ ನಿರೀಕ್ಷೆ ಇದೆ. ಒಂದು ವೇಳೆ ವಾಪಸ್ ಪಡೆಯದಿದ್ದಲ್ಲಿ ಮುಂದಿನ ನಡೆ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಸ್ಪೀಕರ್ ಭೇಟಿ ಬಳಿಕ ಶಾಸಕ ಮುನಿರತ್ನ ಮಾತನಾಡಿ, ಸ್ಪೀಕರ್ ಅವರ ಜತೆ ಮಾತಾಡಿದ್ದೇವೆ. ಆರು ತಿಂಗಳು ಅಮಾನತ್ತು ಮಾಡಿದ್ರಿಂದ ಬಹಳ ಸಮಸ್ತೆ ಆಗ್ತಿದೆ. ಕಮಿಟಿ ಸಭೆಗಳಿಗೆ ಹೋಗಲು ಆಗ್ತಿಲ್ಲ. ಅಮಾನತು ಆದೇಶ ವಾಪಸ್ ಪಡೆಯಿರಿ ಅಂದಿದ್ದೇವೆ. ಅತ್ಯಾಚಾರ ಆರೋಪ ಕೇಸ್‌ನಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸ್ಪೀಕರ್ ಅನುಮತಿ ವಿಚಾರದ ಬಗ್ಗೆ ಕೇಳಿದಾಗ ನನ್ನ ವಿರುದ್ಧ ಕೇಸ್ ಇತ್ತು, ಅದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಸ್ಪೀಕರ್ ಅನುಮತಿ ಕೊಟ್ಟಿದ್ದಾರೆ. ಸ್ಪೀಕರ್ ತಮ್ಮ ಅಧಿಕಾರವನ್ನು ಕಾನೂನು ಪ್ರಕಾರ ಚಲಾಯಿಸಿದ್ದಾರೆ. ಮುಂದೆ ಕಾನೂನು ಪ್ರಕಾರ ಅದನ್ನು ನಾನು ಎದುರಿಸ್ತೇನೆ. ಈಗ ಪ್ರಾಸಿಕ್ಯೂಷನ್ ಬಗ್ಗೆ ನಾನು ಸ್ಪೀಕರ್ ಜೊತೆ ಚರ್ಚೆ ಮಾಡಿಲ್ಲ. ನನ್ನ ವೈಯಕ್ತಿಕ ವಿಚಾರ ಸ್ಪೀಕರ್ ಜೊತೆ ಚರ್ಚೆ ಮಾಡಿಲ್ಲ, ಮಾಡಲ್ಲ ಎಂದಿದ್ದಾರೆ.

ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಸ್ಪೀಕರ್ ಭೇಟಿ ಮಾಡಿದ್ದೇವೆ. ಕಮಿಟಿ ಸಭೆಗೆ ಹೋಗಲಾಗ್ತಿಲ್ಲ. ಆರು ತಿಂಗಳ ಸಸ್ಪೆಂಡ್ ಸರಿಯಲ್ಲ. ಹಿಂದೆ ಈ ರೀತಿಯ ಅನೇಕ ಘಟನೆ ನಡೆದಿದೆ. ಪಕ್ಷದಿಂದ ರಾಜಣ್ಣ ಅವರ ಹನಿಟ್ರಾಪ್ ಬಗ್ಗೆ ಮಾತಾಡಬೇಕಿತ್ತು ಮಾತಾಡಿದ್ದೇವೆ. ಅದು ಬಿಟ್ಟರೆ ಸ್ಪೀಕರ್ ಕುರ್ಚಿ ಮೇಲೆ ನಾವು ಅಗೌರವ ತೋರಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದು, ಪರಿಶೀಲನೆ ಮಾಡೋದಾಗಿ ಹೇಳಿದ್ದಾರೆ. ವಿಧಾನಸಭೆ ಒಳಗೆ ಆಗಿರೋದು, ಹಾಗಾಗಿ ಸರ್ಕಾರದ ಜೊತೆ ಚರ್ಚೆ ಮಾಡಿ ಮಾಡೋದಾಗಿ ಹೇಳಿದ್ದಾರೆ ಎಂದಿದ್ದಾರೆ. ಸ್ಪೀಕರ್ ಯಾವ ನಿರ್ಧಾರ ಮಾಡ್ತಾರೆ ಅನ್ನೋ ಕುತೂಹಲ ಬಿಜೆಪಿ ವಲಯದಲ್ಲಿದೆ.













