ಬಿಜೆಪಿ ರಾಷ್ಟ್ರೀಯ ನಾಯಕರ ಗಮನಕ್ಕೆ ಎಲ್ಲವೂ ಇದೆ. ನಾವೊಂದು ತೀರ್ಮಾನ ಮಾಡಿದೀವಿ, ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳೀಬೇಕು. ಮುಂದಿನ ರಾಜ್ಯಾಧ್ಯಕ್ಷರು ಯಾರಾದ್ರೂ ಆಗಲಿ, ಯಾರೇ ಆದರೂ ನಮ್ಮ ಬೆಂಬಲ ಇದೆ. ನಮ್ಮ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ನಾಳೆ ನಾವೆಲ್ಲ ದೆಹಲಿಯಲ್ಲಿ ಸೇರಿ ಸಭೆ ಮಾಡ್ತೇವೆ ಎಂದಿದ್ದಾರೆ ಶಾಸಕ ಬಿ.ಪಿ ಹರೀಶ್.
ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ ಹೌದು, ಆದ್ರೆ ಅವರ ಭ್ರಷ್ಟಾಚಾರವೂ ಪಕ್ಷ ಅಧೋಗತಿಗೆ ಹೋಗಲು ಕಾರಣವಾಗಿದೆ. ಇದೆಲ್ಲವೂ ರಾಷ್ಟ್ರೀಯ ನಾಯಕರ ಗಮನಕ್ಕಿದೆ. ನಮಗೆ ನೂರಕ್ಕೆ ನೂರು ವಿಶ್ವಾಸ ಇದೆ, ಒಳ್ಳೇ ಕಾಲ ಬರುತ್ತದೆ. ವಿಜಯೇಂದ್ರ ಕೈಯಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ, ಸರಿದೂಗಿಸುವ ಶಕ್ತಿ ಇಲ್ಲ. ನಮ್ಮ ಬೇಡಿಕೆ ಇರೋದು ವಿಜಯೇಂದ್ರ ಬದಲಾಗಬೇಕು ಅನ್ನೋದು ಎಂದಿದ್ದಾರೆ.
ಕೋರ್ ಕಮಿಟಿಯಲ್ಲಿ ಅಥವಾ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಕೊಟ್ಟು ವಿಜಯೇಂದ್ರ ಮುಂದುವರೆಸ್ತೇವೆ ಅಂತ ಹೈಕಮಾಂಡ್ ಹೇಳಿದರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಶಾಸಕ ಬಿಪಿ ಹರೀಶ್, ನಾವು ಒಪ್ಪಲ್ಲ, ಯಾವುದೇ ಕಾರಣಕ್ಕೂ ವಿಜಯೇಂದ್ರನ ಬದಲಾವಣೆ ಆಗಲೇ ಬೇಕು. ಯಡಿಯೂರಪ್ಪ ಸಿಎಂ ಆಗಿದ್ದಾಗ ಅತಿ ಹೆಚ್ಚು ಭ್ರಷ್ಟಾಚಾರ ಆಗಿದ್ದು ವಿಜಯೇಂದ್ರನ ಮೂಲಕ. ಯಡಿಯೂರಪ್ಪ ಕಾಲದಲ್ಲಿ ಏನಾಗಿದೆ ಗೊತ್ತಿದೆ. ನಮಗೆ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗೋದು ಬೇಡ ಎಂದಿದ್ದಾರೆ.
ನಮಗೆ ಅಶೋಕ್, ಬಸವರಾಜ ಬೊಮ್ಮಾಯಿ, ಸುನೀಲ್ ಕುಮಾರ್, ಯತ್ನಾಳ್, ಲಿಂಬಾವಳಿ, ಕುಮಾರ್ ಬಂಗಾರಪ್ಪ, ನಿರಾಣಿ ಇವರಲ್ಲಿ ಯಾರು ಬೇಕಾದರೂ ರಾಜ್ಯಾಧ್ಯಕ್ಷ ಆಗಲಿ. ನಮ್ಮ ಹೈಕಮಾಂಡ್ ಅವರು ಸರಿಯಾದ ಸಮಯಕ್ಕೆ ಸರಿಯಾದ ಕ್ರಮ ತೆಗೆದು ಕೊಳ್ಳುತ್ತಾರೆ. ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಸೋಮಣ್ಣ ಆದ್ರೂ, ಬೊಮ್ಮಾಯಿ ಆದರೂ ಸಂತೋಷ. ಹಿಂದುಳಿದ ವರ್ಗದ ಸುನೀಲ್ ಕುಮಾರ್, ಕುಮಾರ್ ಬಂಗಾರಪ್ಪ, ಆದರೂ ಸರಿ. ನೂತನ ಅಧ್ಯಕ್ಷ ಆಗಿ ಹೊಸ ಹೆಸರು ಘೋಷಣೆ ಮಾಡಲಿ ಎಂದಿದ್ದಾರೆ.
ಮುರುಗೇಶ ನಿರಾಣಿ ರಾಜ್ಯಾಧ್ಯಕ್ಷ ಆದರೂ ನಾವು ಒಪ್ಕೋತೇವೆ, ಆದರೆ ವಿಜಯೇಂದ್ರ ಬೇಡ ಎಂದಿರುವ ಬಿ.ಪಿ ಹರೀಶ್, ಭಿನ್ನಮತಿಯರ ವರ್ತನೆ ಕಾರ್ಯಕರ್ತರಿಗೆ ನೋವಾಗಿದೆ, ಎಲ್ಲವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಅನ್ನೋ ವಿಜಯೇಂದ್ರ ಹೇಳಿಕೆಗೆ ಬಹಳಷ್ಟು ಕಾರ್ಯಕರ್ತರಿಗೆ ನೋವು ತಂದವರು ಯಾರು..? ಯಡಿಯೂರಪ್ಪ ನಡೆ, ಮ್ಯಾಚ್ ಫಿಕ್ಸಿಂಗ್ ಇದರ ಬಗ್ಗೆ ನಾವು ಧ್ವನಿ ಎತ್ತಿರೋದು. ಹೊಂದಾಣಿಕೆ ಭ್ರಷ್ಟಾಚಾರ ಮಾಡಿರೋರು ಇವರು. ಇದೆಲ್ಲವೂ ರಾಷ್ಟ್ರೀಯ ನಾಯಕರುಗೆ ಗೊತ್ತಿದೆ. ಆದರೂ ಕೂಡ ಒಂದು ಅವಕಾಶ ಕೊಟ್ಟಿದ್ದೇವೆ ನೋಡೊಣ ಎಂದು ರಾಷ್ಟ್ರೀಯ ನಾಯಕರು ಕಾಯ್ತಿದ್ದಾರೆ. ರಾಷ್ಟ್ರೀಯ ನಾಯಕರು ಭೀನ್ನಮತಿಯರ ವಿರೋಧವಾಗಿಲ್ಲ ಎಂದಿದ್ದಾರೆ.