: ಸಾಲ ಮರುಪಾವತಿಸಿಲ್ಲ ಎನ್ನುವ ಕಾರಣಕ್ಕೆ ಬಾಣಂತಿ ಸೇರಿದಂತೆ ಕುಟುಂಬದವರನ್ನೆಲ್ಲ ಹೊರ ಹಾಕಿ ಬೀಗ ಹಾಕಲಾಗಿದ್ದ ಪ್ರಕರಣಕ್ಕೆ ತ್ವರಿತವಾಗಿ ಸ್ಪಂದಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ತಮ್ಮ ಮನೆಯ ಬೀಗ ತೆರವುಗೊಳಿಸಿ ಕುಟುಂಬದವರನ್ನು ಮನೆಗೆ ಸೇರಿಸಿದ್ದಾರೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಮಾಧುರಿ ಲೋಹಾರ್ ಎನ್ನುವ ಬಾಣಂತಿ ಮತ್ತು ಅವರ ಕುಟುಂಬದವರು ಸಾಲ ತೀರಿಸಿಲ್ಲ ಎಂದು ಆರೋಪಿಸಿ ಖಾಸಗಿ ಹಣಕಾಸು ಸಂಸ್ಥೆಯವರು ಹಸಿ ಬಾಣಂತಿ ಸೇರಿದಂತೆ ಕುಟುಂಬಸ್ಥರನ್ನು ಮನೆಯಿಂದ ಹೊರಹಾಕಿ ಸೀಜ್ ಮಾಡಿದ್ದರು.
ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಸುದ್ದಿ ತಿಳಿದ ತಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ತಮ್ಮ ಆಪ್ತ ಸಹಾಯಕರನ್ನು ಸ್ಥಳಕ್ಕೆ ಕಳಿಸಿ ಕುಟುಂಬಕ್ಕೆ ಆಹಾರ, ಧಾನ್ಯಗಳನ್ನು ಮತ್ತು ಸ್ವಲ್ಪಮಟ್ಟಿಗೆ ಆರ್ಥಿಕ ನೆರವನ್ನು ಒದಗಿಸಿದರು.
ನಂತರ ಹಣಕಾಸು ಸಂಸ್ಥೆಯ ಪ್ರತಿನಿಧಿಗಳ ಜೊತೆ ಮಾತನಾಡಿ, ಸಾಲ ಮರುಪಾವತಿಸಲು ಸಮಯಾವಕಾಶ ಕೊಡಿಸಿದ್ದಲ್ಲದೆ, ಮನೆಯ ಬೀಗ ತೆರವು ಮಾಡಿಸಿ ಕುಟುಂಬಸ್ಥರನ್ನು ಮನೆಯೊಳಗೆ ಸೇರಿಸಿದರು. ಕುಟುಂಬಸ್ಥರು ಕೇವಲ ಸಾಲದ ಅಸಲನ್ನಷ್ಟೆ ತುಂಬಲಿದ್ದು, ಅದಕ್ಕೂ ಕಾಲಾವಕಾಶ ನೀಡಬೇಕು ಎನ್ನುವ ತಾಕೀತನ್ನು ಸಚಿವರು ಮಾಡಿದ್ದಾರೆ.
ತಾವು ಆಸ್ಪತ್ರೆಯಲ್ಲಿದ್ದರೂ, ತುರ್ತಾಗಿ ಸ್ಪಂದಿಸಿ, ಮಾನವೀಯತೆ ತೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರ್ಯಕ್ರಮ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದರು.