ಬೆಂಗಳೂರು:- ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಚಾರವಾಗಿ ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ನಾನು ಯಾವ ಕಾರಣಕ್ಕೆ ರಾಜೀನಾಮೆಯನ್ನ ನೀಡಬೇಕು? ಯಾವ ಆಧಾರದ ಮೇಲೆ ನೀಡಬೇಕು? ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆಯನ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯಪಾಲರ ನಿರ್ಧಾರಕ್ಕೆ ಕಾನೂನಿನ ಬಲ ಇಲ್ಲ. ಸಂವಿಧಾನದ ಪ್ರತಿನಿಧಿಗಳಾಗಿ ಅವರು ಕೆಲಸ ಮಾಡಬೇಕೇ ಹೊರತು ಬಿಜೆಪಿ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ನನ್ನ ಮೇಲೆ ಯಾಕೆ ರಾಜ್ಯಪಾಲರನ್ನ ಬಳಸಿಕೊಳ್ಳುತ್ತಿದ್ದಾರೆ? ರಾಜ್ಯಪಾಲರ ನಿರ್ಧಾರ ವಿರುದ್ಧ ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ರಾಜ್ಯಪಾಲರು ಕಾನೂನು ಬಾಹಿರವಾಗಿ ಅನುಮತಿಸಿದ್ದಾರೆ. ಅವರು ಅನುಮತಿ ನೀಡಿದ್ದು ಕೂಡ ನಿಯಮದಲ್ಲಿ ಇಲ್ಲ. ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಾಗ ಕೇಂದ್ರ ಸರ್ಕಾರದ ಎಸ್ಓಪಿ ಪಾಲಿಸಿಲ್ಲ. ನಮ್ಮ ಸರ್ಕಾರ ಬಡವರ ಪರ ಇರುವಂತಹ ಸರ್ಕಾರ. ಬಿಜೆಪಿಯವರು ಗ್ಯಾರಂಟಿಗಳ ವಿರುದ್ಧವಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ, ಬಡವರ ಪರ ಕೆಲಸ ಮಾಡುತ್ತಿದ್ದೇವೆ. ನನ್ನ ರಾಜಕೀಯವಾಗಿ ತೇಜೋವಧೆ ಮಾಡಲು ಅವರ ಈ ಪ್ರಯತ್ನ ಯಶಸ್ವಿಯಾಗಲ್ಲ. ನನ್ನ ತೇಜೋವಧೆ ಮಾಡುವುದು ಬಿಜೆಪಿಯವರ ಭ್ರಮೆ. ನಮ್ಮ ಅಭೂತಪೂರ್ವ ಗೆಲುವು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ನಾವು ಬಡವರ ಪರ ಇದ್ದೇವೆಂದು ಟಾರ್ಗೆಟ್ ಮಾಡುತ್ತಿದ್ದಾರೆ.ರಾಜ್ಯಪಾಲರು ಈ ರೀತಿ ಮಾಡುತ್ತಾರೆಂದು ನಮಗೆ ಗೊತ್ತಿತ್ತು. ಇದರಿಂದ ನಾವು ಇನ್ನೂ ಗಟ್ಟಿಯಾಗುತ್ತಿದ್ದೇವೆ. ಇದರಿಂದ ಬಿಜೆಪಿ-ಜೆಡಿಎಸ್ನವರು ಬಯಲಿಗೆ ಬರುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಟಿಬಿ ಅಬ್ರಹಾಂ ದೂರು ನೀಡಿದ ಕೆಲ ಗಂಟೆಗಳಲ್ಲೇ ನನಗೆ ರಾಜ್ಯಪಾಲರ ಕಚೇರಿಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.ಲೋಕಾಯುಕ್ತದವರು ಹೆಚ್ಡಿ ಕುಮಾರಸ್ವಾಮಿ, ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ಕೋರಿದ್ದರು. ಹೆಚ್ಡಿಕೆ ವಿರುದ್ಧ ಪ್ರಾಥಮಿಕ ತನಿಖೆಯಲ್ಲಿ ಸಾಬೀತು ಎಂದು ಮನವಿ ಮಾಡಿದ್ದರು. ಆದರೆ ಮುಡಾ ಕೇಸ್ನಲ್ಲಿ ನನ್ನ ತನಿಖೆಯೇ ನಡೆದಿಲ್ಲ ಎಂದರು.