ಮಹಾರಾಷ್ಟ್ರ(ನಾಸಿಕ್:)ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂ ಸಂಘಟನೆಯು ಆಯೋಜಿಸಿದ್ದ ಪ್ರತಿಭಟನೆ ವೇಳೆ ಗುಂಪು ಘರ್ಷಣೆ ಮತ್ತು ಕಲ್ಲು ತೂರಾಟ ನಡೆದಿದ್ದು, ಮಹಾರಾಷ್ಟ್ರದ ಜಲಗಾಂವ್ ಮತ್ತು ನಾಸಿಕ್ ನಗರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಸಿಕ್ನಲ್ಲಿ ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಿ ಸಕಲ ಹಿಂದೂ ಸಮಾಜವು ಬಂದ್ಗೆ ಕರೆ ನೀಡಿತ್ತು. ಆದರೆ, ಭದ್ರಕಾಳಿ ಪ್ರದೇಶದಲ್ಲಿ ಎರಡು ಗುಂಪುಗಳು ನಡುವೆ ಘರ್ಷಣೆ ನಡೆದಿದ್ದು, ಉದ್ವಿಗ್ನತೆಗೆ ಕಾರಣವಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
‘ಹಿಂದೂ ಸಮಾಜದ ಸದಸ್ಯರು ಮೋಟಾರು ಬೈಕ್ ರ್ಯಾಲಿಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಇದೇ ವೇಳೆ ಬಂದ್ ವಿರೋಧಿಸಿ ಕೆಲವರು ಅಂಗಡಿಗಳನ್ನು ತೆರೆದಿದ್ದರು. ಅಂಗಡಿಗಳನ್ನು ಮುಚ್ಚುವಂತೆ ಪ್ರತಿಭಟನಾಕಾರರು ಒತ್ತಾಯಿಸಿದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಇದು ಘರ್ಷಣೆಗೆ ತಿರುಗಿ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.
#WATCH | Maharashtra: Violence broke out in Nashik, earlier today, during the protest march over the Bangladesh issue. pic.twitter.com/oFJSu4WOKw
— ANI (@ANI) August 16, 2024
‘ಜಲಗಾಂವ್ ಮತ್ತು ನಾಸಿಕ್ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಆದರೆ, ನಿಯಂತ್ರಣದಲ್ಲಿದೆ. ಗುಂಪನ್ನು ಚದುರಿಸಲು ಆರು ಅಶ್ರುವಾಯು ಶೆಲ್ ಮತ್ತು ಒಂದು ರಬ್ಬರ್ ಬುಲೆಟ್ ಅನ್ನು ಹಾರಿಸಲಾಯಿತು. ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದಾರೆ. ರಾಜ್ಯ ಮೀಸಲು ಪೊಲೀಸ್ ಪಡೆ (ಎಸ್ಆರ್ಪಿಎಫ್) ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ನಾಸಿಕ್ ಪೊಲೀಸ್ ಕಮಿಷನರ್ ಸಂದೀಪ್ ಕಾರ್ಣಿಕ್ ಹೇಳಿದ್ದಾರೆ.
ಭದ್ರಕಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ ಎರಡು ಗುಂಪುಗಳ ನಡುವೆ ಘರ್ಷಣೆ ವರದಿಯಾಗಿದೆ. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ನಾಗರಿಕರು ವದಂತಿಗಳಿಗೆ ಕಿವಿಕೊಡಬಾರದು. ಶಾಂತಿ ಕಾಪಾಡಿಕೊಳ್ಳಬೇಕು ಎಲ್ಲರೂ ಸಹಕರಿಸಬೇಕು ಎಂದು ನಾಸಿಕ್ ಪೊಲೀಸರು ಮನವಿ ಮಾಡಿದ್ದಾರೆ.