ಕೋಲ್ಕತ್ತ: ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ಬುಧವಾರ ಮಧ್ಯರಾತ್ರಿಯ ಬಳಿಕ ನುಗ್ಗಿದ ದುಷ್ಕರ್ಮಿಗಳು, ಆಸ್ಪತ್ರೆಯ ಕಟ್ಟಡ, ವೈದ್ಯಕೀಯ ಯಂತ್ರೋಪಕರಣ, ಪೀಠೋಪಕರಣ, ಔಷಧ ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಧ್ವಂಸಗೊಳಿಸಿದರು.
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಸುಮಾರು 40 ಜನರ ಗುಂಪು ಪ್ರತಿಭಟನಕಾರರ ಸೋಗಿನಲ್ಲಿ ಏಕಾಏಕಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿದರು. ಅವರು ಆಸ್ಪತ್ರೆಯ ಕೌಂಟರ್ಗಳ ಗಾಜುಗಳನ್ನು ಪುಡಿಗಟ್ಟಿದರು. ತುರ್ತು ವಿಭಾಗ ಸೇರಿದಂತೆ ಕೆಲ ವಾರ್ಡ್ಗಳಿಗೆ ನುಗ್ಗಿ ಯಂತ್ರೋಪಕರಣಗಳಿಗೆ ಹಾನಿ ಮಾಡಿ, ಹಾಸಿಗೆಗಳನ್ನು ನಾಶಪಡಿಸಿದರು. ಔಷಧ ಕೇಂದ್ರ, ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದರು, ಒಟ್ಟಾರೆ ಆಸ್ಪತ್ರೆಯ ಆಸ್ತಿಗೆ ಹಾನಿ ಮಾಡಿದರು.
ಆಗಸ್ಟ್ 9ರಿಂದ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಕಿರಿಯ ವೈದ್ಯರ ಪ್ರತಿಭಟನಾ ಸ್ಥಳವನ್ನೂ ದುಷ್ಕರ್ಮಿಗಳು ನಾಶಮಾಡಿದರು.
ಅಲ್ಲದೆ ಪೊಲೀಸರ ವಿರುದ್ಧ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಗುಂಪು ಚದುರಿಸಿದರು.ಈ ಘಟನೆಯಲ್ಲಿ ಕೆಲ ಪೊಲೀಸರಿಗೆ ಗಾಯಗಳಾಗಿವೆ. ಪೊಲೀಸರ ಒಂದು ವಾಹನ ಮತ್ತು ಸ್ಥಳದಲ್ಲಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ವಿವರಿಸಿದರು.ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೇಲೆ ಬುಧವಾರ ಮಧ್ಯರಾತ್ರಿಯ ಬಳಿಕ ದಾಳಿ ನಡೆಸಿದ ದುಷ್ಕರ್ಮಿಗಳು ವಿವಿಧ ವಾರ್ಡ್ಗಳನ್ನು ಧ್ವಂಸಗೊಳಿಸಿರುವುದು.
ಟಿಎಂಸಿ ಗೂಂಡಾಗಳಿಂದ ಕೃತ್ಯ- ಬಿಜೆಪಿ ಆರೋಪ:
ಆಸ್ಪತ್ರೆ ಮೇಲಿನ ದಾಳಿಯನ್ನು ಖಂಡಿಸಿರುವ ಬಿಜೆಪಿ ಮುಖಂಡ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ‘ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಕಳುಹಿಸಿದ ಟಿಎಂಸಿ ಗೂಂಡಾಗಳು ಈ ದುಷ್ಕೃತ್ಯ ಎಸಗಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.ಮಮತಾ ಅವರು ತಮ್ಮ ಈ ಕುತಂತ್ರ ಯೋಜನೆ ಜನರಿಗೆ ತಿಳಿಯುವುದಿಲ್ಲ ಎಂದು ಕೊಂಡಿದ್ದಾರೆ’ ಎಂದು ಅವರು ‘ಎಕ್ಸ್’ನಲ್ಲಿ ಟೀಕಿಸಿದ್ದಾರೆ.
‘ಈ ದುಷ್ಕರ್ಮಿಗಳಿಗೆ ಪೊಲೀಸರೇ ಸುರಕ್ಷಿತ ಮಾರ್ಗವನ್ನು ಕಲ್ಪಿಸಿದ್ದಾರೆ. ಇದರಿಂದಾಗಿ ಅವರು ಆಸ್ಪತ್ರೆಯೊಳಗೆ ನುಗ್ಗಿ ಸಲಕರಣೆಗಳನ್ನು ನಾಶಪಡಿಸಿ, ಪರಾರಿಯಾಗಿದ್ದಾರೆ. ಈ ಮೂಲಕ ಸಿಬಿಐಗೆ ನಿರ್ಣಾಯಕ ಸಾಕ್ಷ್ಯಗಳು ದೊರೆಯದಂತೆ ಕೃತ್ಯ ಎಸಗಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.