ಬೆಂಗಳೂರಿನ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಎರಡನೇ ವರ್ಷದ ಬಿಬಿಎ ಓದುತ್ತಿದ್ದ ಪ್ರಭುದ್ಯಾ ಎಂಬಾಕೆ ಸಾವಾಗಿದ್ದು, ಮನೆಯ ಬಾತ್ ರೂಮ್ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸುಬ್ರಮಣ್ಯಪುರದ ಬೃಂದಾವನ ಲೇಔಟ್ನಲ್ಲಿ ಸಹೋದರ ಹಾಗು ತಾಯಿ ಜೊತೆಗೆ ವಾಸವಾಗಿದ್ದ ಪ್ರಭುದ್ಯಾ ಮಧ್ಯಾಹ್ನ 3.30ರ ಸುಮಾರಿಗೆ ಸ್ನೇಹಿತರ ಜೊತೆಗೆ ಹೋಗಿ ಪಾನಿಪೂರಿ ತಿಂದುಕೊಂಡು ಬಂದಿದ್ದಾಳೆ. ಈ ಬಗ್ಗೆ ತನ್ನ ತಾಯಿಗೆ ಮಾಹಿತಿ ಕೊಟ್ಟಿರುವ ಪ್ರಭುದ್ಯಾ, ಆ ಬಳಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳಾ ಅನ್ನೋ ಅನುಮಾನ ಕಾಡುತ್ತಿದೆ.
ಕೇವಲ 21 ವರ್ಷದ ಪ್ರಭುದ್ಯಾ ಎಡಗೈ ಮೇಲೆ ಹಾಗು ಕುತ್ತಿಗೆ ಬಲ ಭಾಗದಲ್ಲಿ ಹರಿತವಾದ ಆಯುಧದಿಂದ ಕೊಯ್ದಿರುವ ಗುರುತು ಪತ್ತೆಯಾಗಿದೆ. ತೀವ್ರ ರಕ್ತಸ್ರಾವದಿಂದ ಪ್ರಭುದ್ಯಾ ಸಾವನ್ನಪ್ಪಿದ್ದಾಳೆ. ಆದರೆ ಕೊಲೆಯೋ..? ಆತ್ಮಹತ್ಯೆಯೋ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಮನೆಯಲ್ಲಿ ಮೂರು ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅಮ್ಮಾ ಸಾರಿ ಎಂದು ಬರೆಯಲಾಗಿದೆ ಎನ್ನಲಾಗಿದೆ. ಆದರೆ ಪ್ರಭುದ್ಯಾ ಹಸ್ತಾಕ್ಷರಕ್ಕೂ ಡೆತ್ನೋಟ್ ಹಸ್ತಾಕ್ಷರಕ್ಕೂ ತಾಳೆ ಆಗ್ತಿಲ್ಲ ಅನ್ನೋ ಮಾಹಿತಿ ಕೂಡ ಇದೆ. ಹಾಗಿದ್ದರೆ ಕೊಂದಿದ್ದು ಯಾರು..?

ಮನೆಯಲ್ಲಿ ಪ್ರಭುದ್ಯಾ ಹಾಗು ಆಕೆಯ ಸಹೋದರ ಇಬ್ಬರೂ ಇದ್ದರು. ಆದರೆ ಸಂಜೆ 4:30ರ ಸುಮಾರಿಗೆ ಪ್ರಭುದ್ಯಾ ಸಹೋದರ ಜಿಮ್ಗೆ ಹೋಗಿದ್ದಾನೆ. ಆ ಬಳಿಕ ಸಂಜೆ 7.30ಕ್ಕೆ ತಾಯಿ ಮನೆಗೆ ಬಂದಾಗ ಮಗಳು ಸತ್ತು ಬಿದ್ದಿರುವುದು ಗೊತ್ತಾಗಿದೆ. ಮನೆಯ ಹಿಂದಿನ ಡೋರ್ ಓಪನ್ ಆಗಿದ್ದು, ಕೊಲೆ ನಡೆದಿದೆ ಎನ್ನುವುದಕ್ಕೆ ಪ್ರಮುಖ ಕಾರಣವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹ ಹಸ್ತಾಂತರ ಮಾಡಲಾಗಿದೆ.

ಕನಕಪುರ ಮೂಲಕ ಪ್ರಭುದ್ಯಾ ಕುಟುಂಬ ಬೆಂಗಳೂರಿನಲ್ಲೇ ವಾಸವಾಗಿತ್ತು. ಕೌಟುಂಬಿಕ ಕಲಹದಿಂದ ತಂದೆ ಕುಟುಂಬದಿಂದ ದೂರವಾಗಿದ್ದರು ಎನ್ನಲಾಗಿದೆ. ತಾಯಿ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಕೆಲಸ ಮಾಡ್ತಿದ್ರು ಎನ್ನಲಾಗಿದ್ದು, ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ತಮಗೆ ತಾವೇ ಕೊಯ್ದುಕೊಂಡರೆ ಅಷ್ಟೊಂದು ಆಳಕ್ಕೆ ಗಾಯ ಆಗುವುದಿಲ್ಲ ಎನ್ನುವುದು ಪೊಲೀಸರ ಅನುಮಾನಕ್ಕೂ ಕಾರಣವಾಗಿದೆ. ಇನ್ನು ಕೊಲೆ ಬಳಿಕ ಕೊಲೆಗಾರ ಡೆತ್ನೋಟ್ ಬರೆದಿಟ್ಟು ಹೋಗುವಷ್ಟು ತಾಳ್ಮೆ ಇತ್ತಾ..? ಪ್ರೀತಿ ಪ್ರೇಮ ವಿಚಾರದಲ್ಲಿ ಗೊತ್ತಿದ್ದವನೇ ಕೊಲೆ ಮಾಡಿರುವ ಸಾಧ್ಯತೆ ಇದೆಯಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.






