ನಗರದ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು ಜೈಲಿನಲ್ಲಿ ದೊರೆತ ಚಾಕು, ನಗದು, ಮೊಬೈಲ್ ಚಾರ್ಜರ್‌ಗಳನ್ನು ವಶಕ್ಕೆ ಪಡೆದು, ಮುಂದಿನ ಕ್ರಮಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮೈಸೂರು ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಮೈಸೂರು ನಗರ ಪೊಲೀಸರು, ಜೈಲುವಾಸಿಗಳ ಬ್ಯಾರಕ್‌ಗಳು ಮತ್ತು ಕಾರಾಗೃಹದ ಒಳಭಾಗದಲ್ಲಿ ತಪಾಸಣೆ ನಡೆಸಿದರು.

ಈ ವೇಳೆ ಜೈಲಿನಲ್ಲಿ ದೊರೆತ ವೇಳೆ ಚಾಕು, ನಗದು ಹಣ, ಮೊಬೈಲ್ ಚಾರ್ಜರ್ ಗಳು ಪತ್ತೆಯಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮವಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ದಾಳಿಯಿಂದಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳು ಕೆಲವು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವುದು ಗೊತ್ತಾಗಿದೆ.

ಈ ತಪಾಸಣಾ ಕಾರ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ. ಮುತ್ತುರಾಜು, ಐಪಿಎಸ್ ಹಾಗೂ ಕೇಂದ್ರ ಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಸೇರಿದಂತೆ ಎಸಿಪಿ, ವಿವಿಧ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್‌ಗಳು ಹಾಗೂ ಇತರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಕಮಾಂಡೋ ಪಡೆ ಮತ್ತು ಶ್ವಾನದಳ ಸಿಬ್ಬಂದಿ ಪಾಲ್ಗೊಂಡಿದ್ದರು.
#Police #Mysore #CentralJail #DCP #ACP #Karnataka






