ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಹಾಗೂ ಸೀಟು ಹಂಚಿಕೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಇನ್ನೂ ಮಾತನಾಡಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ, ಸೀಟು ಹಂಚಿಕೆ ಕುರಿತು ಪ್ರಧಾನಿ ಅವರೊಂದಿಗಿನ ಇನ್ನೂ ಮಾತುಕತೆ ನಡೆದಿಲ್ಲ. ಆದರೆ ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿ, ಕರ್ನಾಟಕದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೇನೆ. ಪಕ್ಷದ ಸಭೆಗಳಲ್ಲಿ ಏನಾಯಿತು ಮತ್ತು ಏನಾಗುತ್ತಿದೆ ಎಂಬುದರ ಕುರಿತು ವಿವರಿಸಿದ್ದೇವೆ. ನಮ್ಮ ಪಕ್ಷ ಯಾವುದೇ ಸಮುದಾಯವನ್ನು ನಿರಾಸೆಗೊಳಿಸಿಲ್ಲ ಎಂದು ಹೇಳಿದರು.
ನಾನು ಬಿಜೆಪಿ ಜೊತೆಗಿನ ಮೈತ್ರಿಗೆ ಒಪ್ಪಿ ಅನುಮತಿ ನೀಡಿದ್ದೇನೆ. ನಮ್ಮ ಪಕ್ಷದ ಎಲ್ಲಾ 19 ಶಾಸಕರು ಮತ್ತು ಎಂಟು ಎಂಎಲ್ಸಿಗಳ ಒಪ್ಪಿಗೆಯೊಂದಿಗೆ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದೂ ದೂಷಿಸಿದರು.
2019 ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅವರು ಉರುಳಿಸಿದರು. “17 ಶಾಸಕರನ್ನು ಮುಂಬೈಗೆ ಕಳುಹಿಸಿದ್ದು ಯಾರು?…ಬಿಜೆಪಿ ಜೊತೆಗೆ ಮೈತ್ರಿ ಯಾವ ಕಾರಣಕ್ಕೆ ಮಾಡಿಕೊಂಡೆವು ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಹಲವಾರೂ ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಆದರೆ. ನಮ್ಮ ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಇದು ಅವಕಾಶವಾದಿ ರಾಜಕಾರಣವಲ್ಲ, ಆದರೆ. ನಾವು ಪಕ್ಷವನ್ನು ಉಳಿಸಲು ಹೋರಾಡುತ್ತಿದ್ದೇವೆ ಎಂದು ತಿಳಿಸಿದರು.






