ರಾಜ್ಯಾದ್ಯಂತ ಮಳೆ ಕೊರತೆ ಮುಂದುವರೆದಿದ್ದು, ಎರಡನೇ ಹಂತದ ಸಮೀಕ್ಷಾ ವರದಿ ಬಂದ ಕೂಡಲೇ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ಘೋಷಣೆ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಶನಿವಾರ (ಸೆಪ್ಟೆಂಬರ್ 9) ಏರ್ಪಡಿಸಿರುವ ಕೃಷಿ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪಾಲ್ಗೊಂಡು ಸಚಿವರು ಮಾತನಾಡಿದರು.
ಈಗಾಗಲೇ 62 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಖಾತರಿಯಾಗಿದೆ ಎರಡನೆ ಹಂತದಲ್ಲಿ 183 ತಾಲ್ಲೂಕುಗಳ ವರದಿ ನಿರೀಕ್ಷಿಸಲಾಗುತ್ತಿದೆ. ಅದನ್ನು ಪರಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಬರ ಘೋಷಣೆಗೆ ಸಂಬಂಧಿಸಿದಂತೆ ನಿಯಮಾವಳಿ ಸಡಿಲಿಕೆಗೆ ಮುಖ್ಯ ಮಂತ್ರಿಯವರು ಹಿಂದೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪೂರಕ ಸ್ಪಂದನೆ ದೊರೆತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ನೆಟೆ ರೋಗದಿಂದ ತೊಗರಿ ಬೆಳೆ ಹಾನಿ ಅನುಭವಿಸಿದ್ದ ರೈತರಿಗೆ ಎರಡನೇ ಕಂತಿನಲ್ಲಿ 74 ಕೋಟಿ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಮೂರನೇ ಕಂತಿನ ಬಾಕಿ ಹಣ ಬಿಡುಗಡೆ ಮಾಡಲಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಮರ್ಪಣೆ ಮಡುವುದಾಗಿ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಧಾರವಾಡ ಕೃಷಿ ವಿಶ್ವ ವಿಶ್ವವಿದ್ಯಾಲಯ ರಾಷ್ಟ್ರದ 10 ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲೋಂದು ಎಂದು ವಿವಿಯ ಶೈಕ್ಷಣಿಕ ಸಾಧನೆ ಪ್ರಶಂಸಿಸಿದ ಸಚಿವರು ಮುಂದೆಯೂ ಕೃಷಿಗೆ ಪೂರಕ ಸಂಶೋಧನೆ ನಡೆಸಿ ರೈತರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಈ ವರ್ಷ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಕೃಷಿ ಇಲಾಖೆ ಸಿರಿಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ . ಬಡವರು, ಶೋಷಿತರು , ರೈತರ ಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸೋ ಮೂಲಕ ಜನಪರ ಆಡಳಿತ ನಡೆಸುತ್ತಿದೆ ಎಂದು ಚಲುವರಾಯಸ್ವಾಮಿ ಅವರು ಹೇಳಿದರು.
ಧಾರವಾಡದ ಹೆಮ್ಮೆಯ ಚೇತನಗಾಳಾದ ದ.ರಾ ಬೇಂದ್ರೆ, ಗಿರೀಶ್ ಕಾರ್ನಾಡ್, ವಿ.ಕೃ ಗೋಕಾಕ್, ಗಂಗೂಬಾಯಿ ಹಾನಗಲ್ ಈ ರಾಜ್ಯಕ್ಕೆ ಗೌರವ ತಂದು ಕೊಟ್ಟಿದ್ದಾರೆ ಎಂದು ಸಚಿವರು ಸ್ಮರಿಸಿದರು.
ಸಭೆಯಲ್ಲಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮುಂದಿನ ಕ್ಯಾಬಿನೆಟ್ ನಲ್ಲಿ ಬರ ಘೋಷಣೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ದೇಶದಲ್ಲಿ ಶಿಕ್ಷಕ ,ಕೃಷಿಕ ಹಾಗೂ ಸೈನಿಕ ಮೂವರ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.