ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ ಮತ್ತು ರಾಜ್ಯ ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ. ಬಿಜೆಪಿ ನಾಯಕರು ಮಾತ್ರವಲ್ಲದೆ ಪ್ರತಿಪಕ್ಷ ಮೈತ್ರಿಕೂಟಗಳ ಕೆಲವು ನಾಯಕರು ಕೂಡಾ ಸನಾತನ ಧರ್ಮದ ಬಗ್ಗೆ ಉದಯನಿಧಿ ನೀಡಿರುವ ಹೇಳಿಕೆಯನ್ನು ವಿರೋಧಿಸಿದ್ದಾರೆ.
ಈ ನಡುವೆ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಉದಯನಿಧಿ ಹೇಳಿಕೆನ್ನು ತಿರುಚಿದ್ದಾರೆ ಎಂದು ತಮಿಳುನಾಡು ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಅವರು, “ಅಸಮಾನತೆಯನ್ನು ಪ್ರತಿಪಾದಿಸುವ, ಸಾಮಾಜಿಕ ನ್ಯಾಯವನ್ನು ವಿರೋಧಿಸುವ ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ, ಕೊರೋನಾ ಇದ್ದಂತೆ, ಅದನ್ನು ನಿರ್ಮೂಲನೆ ಮಾಡಬೇಕು” ಎಂದು ಭಾಷಣ ಮಾಡಿದ್ದರು.
ಈ ಭಾಷಣವನ್ನು ತಿರುಚಿರುವ ಬಿಜೆಪಿ ನಾಯಕರು ವಿಪಕ್ಷ ಮೈತ್ರಿಕೂಟದ ನಾಯಕ ಸ್ಟಾಲಿನ್ ಪುತ್ರ ಹಿಂದೂಗಳ ನರಮೇಧಕ್ಕೆ ಕರೆ ನೀಡಿದ್ದಾರೆ. ವಿಪಕ್ಷಗಳ ಒಕ್ಕೂಟ ಹಿಂದೂಗಳನ್ನು ದ್ವೇಷಿಸುತ್ತಿದೆ ಎಂದು ಪ್ರಚಾರ ಮಾಡಿದ್ದರು.
ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಉದಯನಿಧಿ ಅವರು, ನಾನು ಸನಾತನ ಧರ್ಮವನ್ನು ಪಾಲಿಸುವವರನ್ನು ಕೊಲ್ಲಲು ಕರೆ ಕೊಟ್ಟಿಲ್ಲ. ಅಸಮಾನತೆಯನ್ನು ಪ್ರತಿಪಾದಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದಷ್ಟೇ ಹೇಳಿದ್ದೇನೆ ಎಂದು ತಿಳಿಸಿದ್ದರು.
ಅದಾಗ್ಯೂ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್ (ಟ್ವಿಟ್ಟರ್) ನಲ್ಲಿ,”ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದಾರೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ಸನಾತನ ಧರ್ಮದಲ್ಲಿ ನಂಬಿಕೆಯಿಟ್ಟಿರುವ ಭಾರತದ 80 ಪ್ರತಿಶತ ಜನಸಂಖ್ಯೆಯ ನರಮೇಧಕ್ಕಾಗಿ ಅವರು ಕರೆ ನೀಡುತ್ತಿದ್ದಾರೆ. ವಿಪಕ್ಷ ಮೈತ್ರಿಕೂಟಗಳ ಪ್ರಮುಖ ಸದಸ್ಯ ಡಿಎಂಕೆ ಮತ್ತು ಕಾಂಗ್ರೆಸ್‌ನ ದೀರ್ಘಕಾಲೀನ ಮಿತ್ರ ಪಕ್ಷವಾಗಿದೆ. ಮುಂಬೈ ಸಭೆಯಲ್ಲಿ ಇದನ್ನು ಒಪ್ಪಲಾಗಿದೆಯೇ?” ಎಂದು ಬರೆದಿದ್ದರು.
ಈ ಟ್ವೀಟ್ ವಿರುದ್ಧ ಡಿಎಂಕೆ ಅಡ್ವೊಕೇಟ್ ವಿಭಾಗದ ಕೆಎವಿ ದಿನಕರನ್ ದೂರು ದಾಖಲಿಸಿದ್ದಾರೆ. ಸನಾತನ ಧರ್ಮದ ಹೇಳಿಕೆಗೆ ಸಂಬಂಧಿಸಿದಂತೆ ಉದಯನಿಧಿ ಸ್ಟಾಲಿನ್ ಸ್ಪಷ್ಟನೆ ನೀಡಿದ್ದರೂ ರಾಜಕೀಯ ಉದ್ದೇಶಕ್ಕಾಗಿ, ಎರಡು ಗುಂಪುಗಳ ನಡುವೆ ಹಿಂಸಾಚಾರ ಮತ್ತು ದ್ವೇಷವನ್ನು ಪ್ರಚೋದಿಸಲು ಮತ್ತು ಕೋಮು ಸೌಹಾರ್ದವನ್ನು ಕದಡಲು ಅಮಿತ್ ಮಾಳವಿಯ ಅವರು ಸಚಿವ ಉದಯನಿಧಿ ಅವರ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು.
ಈ ದೂರಿನ ನಂತರ ಮಾಳವಿಯಾ ವಿರುದ್ಧ ಐಪಿಸಿ 153, 153 (A), 504, 504 (1) (B) ಸೆಕ್ಷನ್‌ಗಳಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿರುಚಿರಾಪಳ್ಳಿ ಪೊಲೀಸರು ತಿಳಿಸಿದ್ದಾರೆ.
ಸನಾತನ ಧರ್ಮವನ್ನು ಪಾಲಿಸುವ ಜನರ ನರಮೇಧದ ಬಗ್ಗೆ ನಾನು ಮಾತನಾಡಿಲ್ಲ. ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ. ಸನಾತನ ಧರ್ಮವನ್ನು ಬೇರು ಸಮೇತ ಕಿತ್ತೊಗೆಯುವುದೆಂದರೆ ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಕಾಪಾಡುವುದು ಎಂದು ಅರ್ಥ. ನಾನು ಹೇಳಿದ ಪ್ರತಿಯೊಂದು ಮಾತಿಗೂ ದೃಢವಾಗಿ ನಿಲ್ಲುತ್ತೇನೆ. ನಾನು ಸನಾತನ ಧರ್ಮದಿಂದ ಸಂತ್ರಸ್ತರಾಗಿರುವ, ತುಳಿತಕ್ಕೊಳಗಾದ ಜನರ ಪರವಾಗಿ ಮಾತನಾಡಿದ್ದೇನೆ ಎಂದು ಉದಯನಿಧಿ ಹೇಳಿದ್ದಾರೆ.






