ಹತ್ತಾರು ವರ್ಷಗಳಿಂದ ಕಾವೇರಿ ನದಿ ನೀರು ಸಮಸ್ಯೆ ಇದೆ. ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಪರವಾಗಿ ತೀರ್ಪು ಬರುವಂತೆ ಪ್ರಾರ್ಥಿಸುತ್ತೇವೆ. ಪಕ್ಷಾತೀತವಾಗಿ ಎಲ್ಲರೂ ಕಾವೇರಿ ಸಮಸ್ಯೆ ಎದುರಿಸಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಮಂಗಳವಾರ (ಸೆಪ್ಟೆಂಬರ್ 5) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ಗೆ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡ್ತೀವಿ. ಕೇವಲ ಒಂದು ಸರ್ಕಾರದಲ್ಲಿ, ಒಬ್ಬರ ಆಡಳಿತದಲ್ಲಿ ಈ ಸಮಸ್ಯೆ ಇಲ್ಲ. ಪಕ್ಷಾತೀತವಾಗಿ ಕಾವೇರಿ ಸಮಸ್ಯೆ ಎದರಿಸಬೇಕೆಂದು ದೇವೇಗೌಡರು ಹೇಳಿದ್ದಾರೆ. ತಮಿಳುನಾಡು ಕೆಳಭಾಗದಲ್ಲಿದೆ ಹಾಗಾಗಿ ಬುದ್ದಿವಂತಿಕೆಯಿಂದ ಕೆಲಸ ಮಾಡಲು ಹೆಚ್ಚು ಅವಕಾಶ ಇದೆ ಎಂದು ಹೇಳಿದರು.
ಎಲ್ಲಾ ಪಕ್ಷಗಳು ಈ ವಿಚಾರದಲ್ಲಿ ಒಗ್ಗಟ್ಟಿನ ಹೆಜ್ಜೆ ಇಡಬೇಕು. ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ಕೈಜೋಡಿಸುವುದಾಗಿ ಹೇಳಿದ್ದಾರೆ. ಸಂಕಷ್ಟ ಸೂತ್ರಕ್ಕಾಗಿ ಒತ್ತಾಯ ಮಾಡುತ್ತಿದ್ದೇವೆ. ಪ್ರಧಾನಿಗಳ ಭೇಟಿಗೆ ಸಿಎಂ ಸಮಯ ಕೇಳಿದ್ದಾರೆ. ಸರ್ವಪಕ್ಷ ನಿಯೋಗ ಹೋಗಿ ಭೇಟಿ ಮಾಡಲಿದ್ದೇವೆ. ಪಿಎಂ ಇನ್ನು ಸಮಯ ಕೊಟ್ಟಿಲ್ಲ. ರೈತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಹೇಮಾವತಿ, ಹಾರಂಗಿ, ಕಬಿನಿ, ಕೆಆರ್ಎಸ್ ಅಣೆಕಟ್ಟುಗಳಿಂದ ಲೆಕ್ಕಹಾಕಿ ನೀರು ತಗೋತೀವಿ. ರೈತರ ಆತ್ಮಹತ್ಯೆ ವಿಚಾರವಾಗಿ ಡಿಕೆಶಿ ಹೇಳಿಕೆ ವಿಚಾರ. ಅವರ ಹೇಳಿಕೆ ನಾನು ಪ್ರತಿಕ್ರಿಯೆ ಕೊಡಲ್ಲ. ಡಿಸಿಎಂ ಆಗಿ ಯಾವ ಆ್ಯಂಗಲ್ನಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ರೈತ ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ರು. ಸರ್ಕಾರ ಅವರ ಪರ ನಿಂತು ಅವಕಾಶ ಇದ್ರೆ ಪರಿಹಾರ ನೀಡುತ್ತದೆ. ವೈಯಕ್ತಿಕ, ಸಾಲದ ಭಾದೆ ಯಾವುದೇ ಇದ್ರು ರೈತ ಕುಟುಂಬಕ್ಕೆ ಸಹಾನುಭೂತಿ ತೋರುವುದು ಜವಬ್ದಾರಿ ಎಂದರು.
ಪರಿಹಾರಕ್ಕಾಗಿ ಆತ್ಮಹತ್ಯೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರ ಪ್ರಶ್ನೆಗೆ ಉತ್ತರಿಸಿ, ಪರಿಹಾರ ವಿಚಾರ ಎರಡನೇ ಮಾತು. ಪರಿಹಾರ ಕೊಡಲೇ ಬೇಕು ಅನ್ನೋದು ಮುಖ್ಯ ಅಲ್ಲ. ಕೆಲವೊಮ್ಮೆ ನಮ್ಮ ಗೈಡ್ ಲೈನ್ಸ್ ವ್ಯಾಪ್ತಿಯಲ್ಲಿ ಪರಿಹಾರ ಕೊಡ್ತೀವಿ. ವ್ಯಾಪ್ತಿಗೆ ಬರದಿದ್ರೆ ಪರಿಹಾರ ಕೊಡಲಿಕ್ಕೆ ಬರಲ್ಲ. ಆದರೆ ಆ ಕುಟುಂಬಕ್ಕೆ ಸಮಾಧಾನ ಹೇಳುವುದು ಕರ್ತವ್ಯ. ಸ್ಟಾಲಿನ್ ಓಲೈಕೆಗೆ ನೀರು ಬಿಟ್ಟರೆಂಬ ಆರೋಪ. ಸರ್ವಪಕ್ಷ ಸಭೆಯಲ್ಲಿ ಈ ವಾದ ಮಾಡಲಿ. 28 ಎಂಪಿ ಬಿಜೆಯವರು ಒಂದು ಮಾತು ಹೇಳಿಲ್ಲ. ಕಾವೇರಿ ಪ್ರಾಧಿಕಾರ ಕೇಂದ್ರದ ಹಿಡಿತದಲ್ಲಿದೆ. ಮಾತನಾಡಬಾರದು, ಬುದ್ದಿವಂತಿಕೆಯಿಂದ ರೈತರ ಹಿತ ಕಾಯಬೇಕೆಂದು ಸುಮ್ಮನಿದ್ದೇವೆ. ಪ್ರಧಾನಿಗಳ ಬಳಿ ಹೋಗಿ ನಮ್ಮ ಭೇಟಿಗೆ ಸಮಯ ಕೊಡಿಸಿ. ಏನ್ ಮಾಡ್ತಿದ್ದಾರೆ ನಮ್ಮ ಎಂಪಿಗಳು. ಇಲ್ಲಿ ಬಂದು ಬೆಂಕಿ ಹಚ್ಚೋದಲ್ಲ. ಮಾತನಾಡಿದರೆ ನ್ಯಾಯ ಸಿಗಲ್ಲ, ಬುದ್ದಿವಂತಿಕೆಯಿಂದ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ತಿಳಿಸಿದರು.






