ನೆಹರೂ ಸ್ಮಾರಕ ಮ್ಯೂಸಿಯಂ ಹೆಸರು ಬದಲಾಗಿರುವ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ಟ್ವೀಟ್ಗೆ ಬುಧವಾರ (ಆಗಸ್ಟ್ 16) ಕೇಂದ್ರ ಸಚಿವ ರವಿ ಶಂಕರ್ ಪ್ರಧಾನ್ ತಿರುಗೇಟು ನೀಡಿದ್ದಾರೆ.
ಜೈರಾಮ್ ರಮೇಶ್ ಅವರು ಬುಧವಾರ ಬೆಳಿಗ್ಗೆ 8.39ಕ್ಕೆ ಟ್ವೀಟ್ ಮೂಲಕ, ಪ್ರಧಾನಿ ಮೋದಿ ಅವರು ನೆಹರೂ ಸ್ಮಾರಕ ಹೆಸರು ಬದಲಾಯಿಸುವ ಮೂಲಕ ನೆಹರೂ ಪರಂಪರೆಯನ್ನು ಹಾಳುಗೆಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ನೆಹರೂ ಸ್ಮಾರಕ ಮ್ಯೂಸಿಯಂ ಕುರಿತ ಜೈರಾಮ್ ರಮೇಶ್ ಟೀಕೆಗೆ ಕೇಂದ್ರ ಸಚಿವ ರವಿ ಶಂಕರ್ ಪ್ರಧಾನ್ ಪ್ರತಿಕ್ರಿಯಿಸಿದ್ದಾರೆ. ಸುದ್ದಿಸಂಸ್ಥೆ ಎಎನ್‌ಐ ಇದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷ ಮತ್ತು ಜೈರಾಮ್ ರಮೇಶ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಲೋನೆಯಲ್ಲಿ ಮೂಲಭೂತವಾದ ಭಿನ್ನತೆಯೊಂದಿದೆ. ಕಾಂಗ್ರೆಸ್ ನೆಹರೂ ಮತ್ತು ಅವರ ಕೌಟುಂಬಿಕ ವಿಷಯಗಳ ಬಗ್ಗೆ ಮಾತ್ರ ಆಲೋಚಿಸುತ್ತದೆ. ಆದರೆ ಪ್ರಧಾನಿ ಮೋದಿ ಅವರು ಮ್ಯೂಸಿಯಂನಲ್ಲಿ ದೇಶದ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಓಂದು ಗೌರವಯುತ ಸ್ಥಾನ ನೀಡಿದ್ದಾರೆ. ಇದುವರೆಗೆ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೇಕೆ ಮ್ಯೂಸಿಯಂನಲ್ಲಿ ಸ್ಥಾನ ದೊರೆಯಲಿಲ್ಲ? ಆದರೆ ಈಗ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿಯಾಗಲೀ, ರಾಜೀವ್ ಗಾಂಧಿಯಾಗಲೀ, ಮೊರಾರ್ಜಿ ದೇಸಾಯಿ, ಚೌಧರಿ ಚರಣ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಐಕೆ ಗುಜ್ರಾಲ್, ಎಚ್.ಡಿ.ದೇವೇಗೌಡ ಮೊದಲಾದ ಎಲ್ಲರೂ ಈ ಮ್ಯೂಸಿಯಂನಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲ ಪ್ರಧಾನಿಗಳಿಗೂ ಅಲ್ಲಿ ಸ್ಥಾನ ದೊರೆತಾಗ ಅದು ಸಹಜವಾಗಿ ಪ್ರಧಾನ ಮಂತ್ರಿ ಸ್ಮೃತಿ ಗ್ರಂಥಾಲಯವಾಗುತ್ತದೆ” ಎಂದು ಜೈರಾಮ್ ರಮೇಶ್ ವಿರುದ್ಧ ಕುಟುಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೀಟ್ ಪರೀಕ್ಷೆ ಖಂಡಿತ ತೆಗೆದುಹಾಕುತ್ತೇವೆ: ಎಂ.ಕೆ.ಸ್ಟಾಲಿನ್
ಬುಧವಾರ ಟ್ವೀಟ್ ಮಾಡಿದ್ದ ಜೈರಾಮ್ ರಮೇಶ್, “ಇಂದಿನಿಂದ ಐತಿಹಾಸಿಕ ಕಟ್ಟಡವೊಂದು ಹೊಸ ಹೆಸರು ಪಡೆದಿದೆ. ನೆಹರು ಸ್ಮಾರಕ ಮ್ಯೂಸಿಯಂ ಎಂದು ಹೆಸರಾಗಿದ್ದ ಜಗತ್ಪ್ರಸಿದ್ಧ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಎನ್ಎಂಎಂಎಲ್) ಇನ್ನು ಮುಂದೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಪಿಎಂಎಂಎಲ್) ಆಗಿದೆ. ದೇಶದ ಮೊದಲ ಮತ್ತು ಸುದೀರ್ಘ ಸೇವಾ ಅವಧಿಯ ಪ್ರಧಾನಿ ನೆಹರು ವಿಚಾರದಲ್ಲಿ ಪ್ರಧಾನಿ ಮೋದಿ ಭೀತಿ, ಸಂಕೀರ್ಣತೆ ಮತ್ತು ಅಭದ್ರತೆಗಳ ಹೊರೆ ಹೊತ್ತಿದ್ದಾರೆ. ಮೋದಿ ಅವರ ಏಕೈಕ ಉದ್ದೇಶ ನೆಹರು ಮತ್ತು ಅವರ ಪರಂಪರೆಯನ್ನು ವಿರೋಧಿಸುವುದು, ವಿರೂಪಗೊಳಿಸುವುದು, ಮಾನಹಾನಿ ಮತ್ತು ನಾಶ ಮಾಡುವುದಾಗಿದೆ. ಅದಕ್ಕಾಗಿಯೇ ನೆಹರು ಸ್ಮಾರಕ ಮ್ಯೂಸಿಯಂ ಹೆಸರಲ್ಲಿ ನೆಹರು ತೆಗೆದು ಪ್ರಧಾನ ಮಂತ್ರಿ ಸೇರಿಸಿದ್ದಾರೆ. ಇದು ಅವರ ಸಣ್ಣತನ ಮತ್ತು ಕಿರಿಕಿರಿ ಮನೋಭಾವ ಸೂಚಿಸುತ್ತದೆ. ಆದರೆ ಮೋದಿ ಅವರು ನೆಹರು ಅವರ ಸ್ವಾತಂತ್ರ್ಯ ಚಳವಳಿಯಲ್ಲಿನ ಅಪಾರ ಕೊಡುಗೆ ಮತ್ತು ಭಾರತ ರಾಷ್ಟ್ರ ನಿರ್ಮಾಣಕ್ಕೆ ಉದಾರತೆಯ ತಳಹದಿ, ಪ್ರಜಾಪ್ರಭುತ್ವ, ಜಾತ್ಯತೀತ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ನೀಡಿದ ಅತ್ಯುನ್ನತ ಕೊಡುಗೆಗಳನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಇಡೀ ಜಗತ್ತು ನೋಡುವಂತೆ ಜವಾಹರ್ಲಾಲ್ ನೆಹರು ಅವರ ಪರಂಪರೆ ಜೀವಂತವಾಗಿರುತ್ತದೆ. ಇದು ಮುಂದಿನ ತಲೆಮಾರಿಗೂ ಸ್ಫೂರ್ತಿ ನೀಡುತ್ತದೆ” ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದರು.
ನೆಹರೂ ಸ್ಮಾರಕ ಮ್ಯೂಸಿಯಂ ಎಂದೇ ಕರೆಯಲಾಗುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ (ಎನ್ಎಂಎಂಎಲ್) ಆಗಸ್ಟ್ 14ರಿಂದ ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ (ಪಿಎಂಎಂಎಲ್) ಎಂದು ಮರುನಾಮಕರಣಗೊಂಡಿದೆ.