ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ ಐದು ದಿನಗಳು ಬಾಕಿ ಉಳಿದಿದೆ. ಈಗಾಗಲೇ ಮೂರೂ ಪಕ್ಷಗಳು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಇದರಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸದ್ಯ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಿದೆ. ಬಜರಂಗದಳ ಹಾಗೂ ಪಿಎಫ್ಐ ಸಂಘಟನೆ ಬ್ಯಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು ಕಟ್ಟಾ ಹಿಂದೂ ಸಿದ್ದಾಂತ ಪರಿಪಾಲಕರ ಕಣ್ಣು ಕೆಂಪಗಾಗಿಸಿದೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ರೀತಿಯ ಆಫರ್ ಕೊಡುತ್ತಿದ್ದಂತೆಯೇ ಬಿಜೆಪಿ ಇದನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಸಂಪೂರ್ಣ ಹಿಂದೂಗಳ ಮತಗಳನ್ನು ತನ್ನೆಡೆಗ ಬಾಚಿಕೊಳ್ಳುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಹಿಂದೂಗಳನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಬಿಜೆಪಿ ಅತ್ಯಂತ ನಾಜೂಕಾಗಿ ಮಾಡುತ್ತಿದೆ.
ಚುನಾವಣಾ ಹೊಸ್ತಿಲಲ್ಲಿ ದೊಡ್ಡ ವಿವಾದ ಮೈಮೇಲೆ ಎಳೆದುಕೊಂಡಿರುವ ಕಾಂಗ್ರೆಸ್ ಈ ವಿಚಾರವಾಗಿ ಆಂತರಿಕ ಸಮೀಕ್ಷೆಯನ್ನು ನಡೆಸಿದ್ದು ಇದರಲ್ಲಿ ಬಜರಂಗದಳ ವಿಚಾರ ಸಣ್ಣ ವರ್ಗದ ಮತದಾರರ ಮೇಲೆ ಪರಿಣಾಮ ಬೀರಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ 7 ಪ್ರತಿಶತ ಮತದಾರರು ಈ ವಿಚಾರದಿಂದ ಪ್ರಭಾವಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಅಪ್ಪಟ ಹಿಂದೂ ಅಭಿಮಾನಿಗಳಿದ್ದು ಈ ಭಾಗಗಳಲ್ಲಿ ಕಾಂಗ್ರೆಸ್ಗೆ ಬಾರೀ ದೊಡ್ಡ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.






