ಬೆಂಗಳೂರು : ಕೆಎಸ್ಡಿಲ್ಗೆ ಕೆಮಿಕಲ್ ಪೂರೈಕೆ ಮಾಡುವ ಟೆಂಡರ್ ಪ್ರಕ್ರಿಯೆಗೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಪುತ್ರ ಪ್ರಶಾಂತ್ ಮಾಡಾಳ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರು. ಈ ಪ್ರಕರಣದ ಬಳಿಕ ಪುತ್ರ ಪ್ರಶಾಂತ್ ಮಾಡಾಳ್ ನಿವಾಸಕ್ಕೆ ಲೋಕಾಯುಕ್ತ ದಾಳಿ ನಡೆಸಿ 7.5 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡ ಬೆನ್ನಲ್ಲೇ ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ರಾಜೀನಾಮೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ನೀಡಿದ ಸೂಚನೆಯಂತೆಯೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಪುತ್ರ ಪ್ರಶಾಂತ್ ಮಾಡಾಳ್ರನ್ನು ಬೆಂಗಳೂರು ಲೋಕಾಯುಕ್ತ ನ್ಯಾಯಾಲಯಕ್ಕೆ ಬೆಳಗ್ಗೆ ಹಾಜರುಪಡಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಲಯ ಪ್ರಶಾಂತ್ ಮಾಡಾಳ್ ಸೇರಿದಂತೆ ಐವರಿಗೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸಿದೆ.
ಲೋಕಾಯುಕ್ತ ದಾಳಿ ಪ್ರಕರಣದ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಬೇಕೆಂದೇ ನಾವು ಲೋಕಾಯುಕ್ತವನ್ನು ಮತ್ತೊಮ್ಮೆ ಅಸ್ತಿತ್ವಕ್ಕೆ ತಂದಿದ್ದೇವೆ. ಲೋಕಾಯುಕ್ತ ಇಲ್ಲದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನೇಕ ಕೇಸುಗಳು ಮುಚ್ಚಿ ಹೋಗಿದ್ದವು. ಆದರೆ ಈಗ ಹಾಗಿಲ್ಲ.ಭ್ರಷ್ಟಾಚಾರ ಎಲ್ಲಿಯೇ ನಡೆಯುತ್ತಿದ್ದರು ಅದನ್ನು ತಡೆಯಲು ಲೋಕಾಯುಕ್ತವಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.