ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಇಂದು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೆಚ್ಚು ಬಾರಿ ಪ್ರತಿನಿಧಿಸಿರುವ ಸುರೇಶ್ ರೈನಾ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಅಂದರೆ ಐಪಿಎಲ್, ದೇಶೀಯ ಟೂರ್ನಿ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ದೂರ ಸರಿದಿದ್ದಾರೆ.
ಸುರೇಶ್ ರೈನಾ ಅವರನ್ನು ಕಳೆದ ಬಾರಿಯ ಆವೃತ್ತಿಯಲ್ಲಿ ಐಪಿಎಲ್ ನ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಅಲ್ಲದೇ ದಕ್ಷಿಣ ಆಫ್ರಿಕಾ ಟಿ-20 ಸೇರಿದಂತೆ ವಿವಿಧ ಜಾಗತಿಕ ಮಟ್ಟದ ಫ್ರಾಂಚೈಸಿ ಆಧಾರಿತ ಟೂರ್ನಿಗಳಲ್ಲಿ ಆಡುತ್ತಿದ್ದರು. ಈಗ ಆ ಎಲ್ಲಾ ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ.

ಮಂಗಳವಾರ ಟ್ವಿಟರ್ ನಲ್ಲಿ ವಿದಾಯ ಘೋಷಿಸಿರುವ ಸುರೇಶ್ ರೈನಾ, ಭಾರತ ತಂಡ ಹಾಗೂ ಉತ್ತರ ಪ್ರದೇಶ ತಂಡವನ್ನು ಇಷ್ಟು ವರ್ಷ ಪ್ರತಿನಿಧಿಸಿರುವುದಕ್ಕೆ ಹೆಮ್ಮೆ ಇದೆ. ಈಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನಿನ್ನು ಎರಡರಿಂದ ಮೂರು ವರ್ಷ ಕ್ರಿಕೆಟ್ ಆಡಬಹುದು. ಆದರೆ ಯುವ ಆಟಗಾರರು ತುಂಬಾ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿದ್ದೇನೆ ಎಂದು ರೈನಾ ಹೇಳಿದ್ಧಾರೆ.






