ಬಾಂಗ್ಲಾದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಶ್ಲಾಘಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನವು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಭಾರತದ ಪೂರ್ವ ನೆರೆಹೊರೆಯವರಿಂದ ಬಹಳಷ್ಟು ವಿಷಯಗಳನ್ನು ಕಲಿಯಬೇಕು ಎಂದು ಶುಕ್ರವಾರ ಹೇಳಿದರು.
ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ನಮ್ಮ ನೆರೆಯ ರಾಷ್ಟ್ರವೊಂದು ಧಾರ್ಮಿಕ ಮತಾಂಧತೆ ಮತ್ತು ಸಂಕುಚಿತ ಮನೋಭಾವದಿಂದ ಹೋರಾಡುತ್ತಿದೆ’ ಎಂದು ಪಾಕಿಸ್ತಾನವನ್ನು ಹೆಸರಿಸದೆ ಹೇಳಿದ್ದಾರೆ.
“ನಮ್ಮ ನೆರೆಯ ರಾಷ್ಟ್ರವೊಂದು ಧಾರ್ಮಿಕ ಮತಾಂಧತೆ, ಧರ್ಮಾಂಧತೆ ಮತ್ತು ಸಂಕುಚಿತ ಮನೋಭಾವದಿಂದ ಹೋರಾಡುತ್ತಿದೆ. ಆ ದೇಶವೇ ಬಡತನ, ನಿರುದ್ಯೋಗ ಮತ್ತು ಭಯೋತ್ಪಾದನೆಯೊಂದಿಗೆ ಹೋರಾಡುತ್ತಿದೆ ಮತ್ತು ಕೆಲವೊಮ್ಮೆ ಅದು ಭಾರತಕ್ಕೂ ಕಿರುಕುಳ ನೀಡಲು ಪ್ರಯತ್ನಿಸುತ್ತದೆ. ಆ ದೇಶವು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಬಾಂಗ್ಲಾದೇಶದಿಂದ ಬಹಳಷ್ಟು ನೋಡಿ ಕಲಿಯಬೇಕಾಗಿದೆ ಎಂದು ಅವರು ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಸಿಂಗ್ ಪಾಕಿಸ್ತಾನವನ್ನು ಹೆಸರಿಸದಿದ್ದರೂ, ಅವರ ಟೀಕೆಗಳು ಪಶ್ಚಿಮ ನೆರೆಹೊರೆಯವರಗೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಬಾಂಗ್ಲಾದೇಶವು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿರುವುದಕ್ಕೆ ನೆರೆಯ ರಾಷ್ಟ್ರವಾಗಿ ಭಾರತ ತುಂಬಾ ಸಂತೋಷವಾಗಿದೆ. ಬಾಂಗ್ಲಾದೇಶವು ಧಾರ್ಮಿಕ ಮತಾಂಧತೆಯನ್ನು ದೂರವಿಟ್ಟಿದೆ ಮತ್ತು ಆಧುನೀಕರಣ, ಜಾತ್ಯತೀತತೆಯ ಹಾದಿಯನ್ನು ಹಿಡಿದಿದೆ .”ಬಾಂಗ್ಲಾದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯು ಪ್ರಪಂಚದ ಹಲವಾರು ದೇಶಗಳಿಗೆ ಉದಾಹರಣೆಯಾಗಿದೆ” ಎಂದು ಸಿಂಗ್ ಶ್ಲಾಘಿಸಿದ್ದಾರೆ.
“ಭಾರತವು ಆರೋಗ್ಯ, ಶಿಕ್ಷಣ, ಆರ್ಥಿಕತೆ, ಸಂಪರ್ಕ ಮತ್ತು ಭದ್ರತೆಯಂತಹ ಕ್ಷೇತ್ರಗಳಲ್ಲಿ ಬಾಂಗ್ಲಾದೇಶದ ಪರವಾಗಿ ನಿಂತಿದೆ ಮತ್ತು ಭವಿಷ್ಯದಲ್ಲಿ ಅದನ್ನು ಮುಂದುವರಿಸುತ್ತದೆ” ಎಂದು ಅವರು ಹೇಳಿದರು.






