ಪಠ್ಯ ಪುಸ್ತಕ ಸಮಿತಿ ವಿಸರ್ಜನೆ ಆಗಿದೆ ಆದರೆ ರದ್ದು ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಹೌದು, ಚಿತ್ರದುರ್ಗದಲ್ಲಿ ಸುದ್ದಿಗಾರರು ಸಮಿತಿ ರದ್ದಾಗಿದೆ ಹೊಸ ಸಮೀತಿ ರಚನೆಯಾಗಲಿದೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಪಠ್ಯ ಪುಸ್ತಕ ಸಮಿತಿ ವಿಸರ್ಜನೆ ಆಗಿದೆ ಆದರೆ ರದ್ದು ಮಾಡಿಲ್ಲ. ಹೊಸ ಸಮಿತಿ ರಚನೆಯ ಅವಶ್ಯಕತೆ ಇಲ್ಲ. ನಮ್ಮದು ಬಸವ ಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ ಎಂದು ತಿಳಿಸಿದರು.
ಇನ್ನು ಬಸವಣ್ಣನವರು ರಚಿಸಿದ ಹಲವಾರು ಅತ್ಯುತ್ತಮ ವಚನಗಳಿವೆ. ಬಸವಣ್ಣನವರ ಪಠ್ಯದಲ್ಲಿ ಒಂದು ಲೈನ್ ವ್ಯತ್ಯಾಸವಾಗಿದೆ. ಉಳಿದಂತೆ ಬರಗೂರು ಸಮಿತಿ ರಚಿಸಿದ್ದ ಪಠ್ಯದಲ್ಲಿ ಇದ್ದಂತೆ ಇದೆ. ಬಸವಣ್ಣನವರ ಪಠ್ಯದ ವ್ಯತ್ಯಾಸ ಸರಿಪಡಿಸಲಾಗುವುದು. ನಾನಾ ಮಠಗಳ ಸ್ವಾಮೀಜಿಗಳ ಜೊತೆಗೆ ಚರ್ಚಿಸಿ ಅವರಿಗೆ ಇರುವ ಊಹಾ ಪೋಹಗಳನ್ನು ಸರಿ ಪಡಿಸಿ ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸುತ್ತೇವೆ ಎಂದಿದ್ದಾರೆ.
ಹೆಡಗೇವಾರ್ ಭಾಷಣದ ಪಠ್ಯ ಕೈ ಬಿಡುವುದಿಲ್ಲ, ಅದರಲ್ಲಿ ತಪ್ಪೇನಿದೆ ಎಂದು ಸಿಎಂ ಸಮರ್ಥಿಸಿಕೊಂಡರು. ಮಂದಿರ ಮಸೀದಿ ವಿವಾದ ವಿಚಾರದ ಪ್ರಶ್ನೆಗೆ ಉತ್ತರಿಸಲು ಸಿಎಂ ನಿರಾಕರಿಸಿದರು.