ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಭಾರತದ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳನ್ನು ಗೆಲ್ಲುವುದರೊಂದಿಗೆ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರ ಮಹತ್ವಾಕಾಂಕ್ಷೆಯ ತೃತೀಯ ರಂಗದ ಯೋಜನೆಯನ್ನು ಅನಿಶ್ಚಿತಗೊಂಡಿದೆ. ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಇತರೆ ಪ್ರಾದೇಶಿಕ ರಾಜಕೀಯ ಪಕ್ಷಗಳು ಯಾವುದೇ ಬಿಜೆಪಿ ವಿರೋಧಿ ರಂಗವನ್ನು ರೂಪಿಸಲು ಅಥವಾ ಸೇರಲು ಎಚ್ಚರಿಕೆ ವಹಿಸುವಂತಹ ಸಂಧರ್ಭವನ್ನು ಈ ಚುನಾವಣೆ ನಿರ್ಮಿಸಿದೆ ಎಂದು ರಾಜಕೀಯ ವಿಶ್ಲೇಷಣೆಗಳು ಕೇಳಿ ಬಂದಿದೆ.
ಎಲ್ಲಾ ಪ್ರಮುಖ ವಿರೋಧ ಪಕ್ಷಗಳ ತೀವ್ರ ಸೋಲು ಕಂಡ ಹಿನ್ನೆಲೆಯಲ್ಲಿ, ಬಿಜೆಪಿ ವಿರುದ್ಧ ಪರ್ಯಾಯ ಶಕ್ತಿಯನ್ನು ನಿರ್ಮಿಸುವ ಕೆಸಿಆರ್ ಅವರ ಯೋಜನೆಗಳು ಯಶಸ್ವಿಯಾಗುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು. ಆದರೂ ಕೆಸಿಆರ್ ಅವರು ʼತೃತೀಯ ರಂಗʼ ಅಥವಾ ʼಫೆಡರಲ್ ಫ್ರಂಟ್ʼ ಬಗ್ಗೆ ಮಾತನಾಡಿದ್ದಾರೆ.
ಕೆಸಿಆರ್ ಈ ತಿಂಗಳ ಆರಂಭದಲ್ಲಿ ಮತ್ತು ಫೆಬ್ರವರಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಹೊಸ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದರು. “ಒಕ್ಕೂಟ ವ್ಯವಸ್ಥೆ”, ದೇಶದಲ್ಲಿನ “ದ್ವೇಷ ಕೇಂದ್ರಿತ” ರಾಜಕೀಯ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಅಗತ್ಯತೆಯ ಬಗ್ಗೆ ಅವರು ತಮಿಳುನಾಡು, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ತಮ್ಮ ಕಳವಳವನ್ನು ಹಂಚಿಕೊಂಡಿದ್ದರು. ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಕೂಡ ಭೇಟಿ ಮಾಡಿದ್ದರು.
ಆದಾಗ್ಯೂ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ “ತೃತೀಯ ರಂಗ” ರಚನೆಯ ಬಗ್ಗೆ ಚರ್ಚಿಸಲು ಯೋಜಿಸಿದ್ದರು, ಆದರೆ ಅದು ಆಶಾದಾಯಕವಾಗಿ ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ, ಪಂಜಾಬಿನಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕೆಎಪಿ ಸದ್ಯ ಬಿಜೆಪಿಗೆ ಸವಾಲೊಡ್ಡುವ ಪ್ರಬಲ ಸ್ಪರ್ಧಿ ಎಂಬಂತೆ ಕಂಡುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ನಾಲ್ಕು ರಾಜ್ಯಗಳಲ್ಲಿ ಪಕ್ಷದ ಗೆಲುವನ್ನು 2024 ರ ಸಾರ್ವತ್ರಿಕ (ಲೋಕಸಭಾ) ಚುನಾವಣೆಗೆ ಮುನ್ನುಡಿಯಾಗಿ ನೋಡುತ್ತಿರುವಾಗ, ಕೆಲವು ರಾಜಕೀಯ ವೀಕ್ಷಕರು ಇನ್ನೂ ಬಿಜೆಪಿ ವಿರುದ್ಧದ ಪಕ್ಷಗಳ “ಹೊಸ ಬಲವರ್ಧನೆ” ಯೊಂದಿಗೆ ಅವರನ್ನು ಸೋಲಿಸುವ ಸಾಧ್ಯತೆಯನ್ನು ವಿಶ್ಲೇಶಿಸುತ್ತಿದ್ದಾರೆ. .
ತೆಲಂಗಾಣ ಬಿಜೆಪಿ ಸಂಭ್ರಮ
ತೆಲಂಗಾಣ ಬಿಜೆಪಿ ನಾಯಕರು ನಾಲ್ಕು ರಾಜ್ಯಗಳಲ್ಲಿ ತಮ್ಮ ಪಕ್ಷದ ಗೆಲುವಿನ ಸಂಭ್ರಮದಲ್ಲಿರುವಾಗ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ತಮ್ಮ ಮುಂದಿನ ಗುರಿ ಎಂದು ಹೇಳಿದ್ದಾರೆ. ಪಕ್ಷವು ಕೇವಲ ಮೂವರು ಶಾಸಕರು ಮತ್ತು ನಾಲ್ವರು ಸಂಸದರನ್ನು ಹೊಂದಿದ್ದರೂ, ಕೆಸಿಆರ್ಗೆ ಪರ್ಯಾಯವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಬಿಜೆಪಿ ಬಯಸಿದೆ. ಪಕ್ಷದ ತೆಲಂಗಾಣ ಮುಖ್ಯಸ್ಥ ಬಂಡಿ ಸಂಜಯ್ ಅವರು ತಮ್ಮ “ಪ್ರಜಾ ಸಂಗ್ರಾಮ ಯಾತ್ರೆ”ಯ ಎರಡನೇ ಹಂತವನ್ನು ಏಪ್ರಿಲ್ 14 ರಿಂದ ಪ್ರಾರಂಭಿಸಲು ಈಗಾಗಲೇ ಸಿದ್ಧರಾಗಿದ್ದಾರೆ.
ಯಾವುದೇ ಪ್ರಾದೇಶಿಕ ಪಕ್ಷಗಳು ಕೆಸಿಆರ್ರನ್ನು ನಂಬಲು ಸಿದ್ಧವಾಗಿಲ್ಲ ಹಾಗಾಗಿ ಅವರ ತೃತೀಯ ರಂಗವು ಕನಸಾಗಿ ಉಳಿಯಲಿದೆ ಎಂದು ತೆಲಂಗಾಣ ಬಿಜೆಪಿ ನಾಯಕರು ಹೇಳಿದರು. ಪಕ್ಷದ ವಕ್ತಾರ ಎನ್.ವಿ.ಸುಭಾಷ್ ಮಾತನಾಡಿ, ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಗೆಲುವು ಪ್ರಾದೇಶಿಕ ಪಕ್ಷಗಳನ್ನು ಆತ್ಮರಕ್ಷಣೆಯ ಮೊರೆಗೆ ಇಳಿಸಿದೆ ಮತ್ತು ಅವರೇ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. “ಈ ಹಂತದಲ್ಲಿ ಯಾವುದೇ ಪಕ್ಷ ಅಥವಾ ನಾಯಕರಾದ ಎಂಕೆ ಸ್ಟಾಲಿನ್, ಉದ್ಧವ್ ಠಾಕ್ರೆ ಅಥವಾ ಮಮತಾ ಬ್ಯಾನರ್ಜಿ ಕೆಸಿಆರ್ ಅವರನ್ನು ನಂಬುವ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಡಿಎಂಕೆ, ಆರ್ಜೆಡಿ ಮತ್ತು ಶಿವಸೇನೆಯಂತಹ ಪಕ್ಷಗಳಿಗೆ ಕೆಸಿಆರ್ ಅವರ ಕಾಂಗ್ರೆಸ್ಸೇತರ ಮೈತ್ರಿಯ ಕಲ್ಪನೆಯು ರುಚಿಸುವುದಿಲ್ಲ ಎಂದು ಸುಭಾಷ್ ಹೇಳಿದ್ದಾರೆ.
“ಇದಲ್ಲದೆ, ಹೆಚ್ಚಿನ ಸಂಖ್ಯೆಯ ಸಂಸದ ಸ್ಥಾನಗಳನ್ನು ಹೊಂದಿರುವ ಇತರ ಪಕ್ಷಗಳು ಕೆಸಿಆರ್ ನಾಯಕತ್ವದಲ್ಲಿ ಕೆಲಸ ಮಾಡಲು ಸಿದ್ಧವಾಗಿವೆಯೇ ಎಂಬುದು ಸಹ ಪ್ರಶ್ನೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಟಿಆರ್ಎಸ್ ಬಿಜೆಪಿ ವಿರೋಧಿ ಹೋರಾಟಕ್ಕೆ ಮಣಿಯಬಹುದೇ?
ಆದಾಗ್ಯೂ, 2024 ರ ಚುನಾವಣೆಗೆ ಮುಂಚಿತವಾಗಿ ತೃತೀಯ ರಂಗವನ್ನು ಒಟ್ಟಿಗೆ ಸೇರಿಸುವ ಆಲೋಚನೆ ಜೀವಂತವಾಗಿದೆ ಮತ್ತು ಅವರ ನಾಯಕ ಅದನ್ನು ಬಿಟ್ಟುಕೊಟ್ಟಿಲ್ಲ ಎಂದು ಟಿಆರ್ಎಸ್ ಉನ್ನತ ನಾಯಕರು ನಂಬಿದ್ದಾರೆ.
ಒಂದು ವಾರದ ನಂತರ ಮುಖ್ಯಮಂತ್ರಿ ಈ ಉಪಕ್ರಮವನ್ನು ಪುನರುಜ್ಜೀವನಗೊಳಿಸಲಿದ್ದಾರೆ ಎಂದು ಟಿಆರ್ಎಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದ ಕೆ ಕೇಶವ ರಾವ್ ಹೇಳಿದ್ದಾರೆ. ವೈದ್ಯರ ಸಲಹೆಯಂತೆ ಸಿಎಂ ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಬಳಿಕ ತೃತೀಯ ರಂಗ ರಚನೆಗೆ ಶ್ರಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಬಹುತೇಕ ಹೀನಾಯ ಸ್ಥಿತಿಗೆ ತಲುಪಿರುವುದರಿಂದ ಸಮ್ಮಿಶ್ರವನ್ನು ಮುನ್ನಡೆಸಲು ಕಾಂಗ್ರೆಸೇತರ ಪರ್ಯಾಯದ ಉದಯಕ್ಕೆ ಅವಕಾಶವಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್ನಲ್ಲಿರುವ ರಾಜಕೀಯ ವಿಶ್ಲೇಷಕ ಪಾಲ್ವಾಯಿ ರಾಘವೇಂದ್ರ ರೆಡ್ಡಿ ಅವರು ಕಾಂಗ್ರೆಸ್ನ ಕಳಪೆ ಪ್ರದರ್ಶನವು ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಸ್ಥಾನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
“ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುವುದು ಮತ್ತು ಬಿಜೆಪಿಗೆ ಸವಾಲು ಹಾಕಲು ಕಾರ್ಯಸಾಧ್ಯವಾದ ನೆಲೆಯನ್ನು ಕಂಡುಕೊಳ್ಳುವುದು ಈಗ ಈ ಪಕ್ಷಗಳಿಗೆ ಬಿಟ್ಟದ್ದು. ಕೇವಲ ಕೆಸಿಆರ್ ಮಾತ್ರವಲ್ಲ, ಆಯಾ ರಾಜ್ಯಗಳು/ಪ್ರದೇಶಗಳಲ್ಲಿ ಗಣನೀಯ ನೆಲೆಯನ್ನು ಹೊಂದಿರುವ ಪ್ರತಿ ಪ್ರಾದೇಶಿಕ ನಾಯಕರು ಈಗ ತಮ್ಮ ಪಾಲನ್ನು ಬಯಸುತ್ತಾರೆ. ಆದರೆ, ಅವರೆಲ್ಲರೂ ಒಟ್ಟಾಗಿ ಕೆಲಸ ಮಾಡದ ಹೊರತು ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಪ್ರಬಲ ಶಕ್ತಿಯನ್ನು ರಚಿಸಲಾಗುವುದಿಲ್ಲ, ”ಎಂದು ಅವರು ಹೇಳಿದ್ದಾರೆ.
ಅವರ ಪ್ರಕಾರ, ಸಂಸತ್ತಿನಲ್ಲಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜ್ಯಗಳ ಪ್ರಾದೇಶಿಕ ನಾಯಕರು ಸಂಭವನೀಯ ಒಕ್ಕೂಟದಲ್ಲಿ ಪ್ರಮುಖ ಪಾತ್ರ ಹೊಂದಲು ಬಯಸುತ್ತಾರೆ.
“ಇದನ್ನು ಪರಿಗಣಿಸಿ, ಕೆಸಿಆರ್, ತಮ್ಮ ವಯಸ್ಸು ಮತ್ತು ಅನುಭವವನ್ನು ಬಳಸಿಕೊಂಡು, ಸಂಚಾಲಕನ ಪಾತ್ರವನ್ನು ವಹಿಸುವ ಬಗ್ಗೆ ಯೋಚಿಸಬೇಕು ಮತ್ತು ಎಲ್ಲಾ ವಯಸ್ಸಿನ ಮತ್ತು ಎಲ್ಲಾ ಪ್ರದೇಶಗಳ ನಾಯಕರು ಒಗ್ಗೂಡುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.
ಆದಾಗ್ಯೂ, ಹೆಚ್ಚು ಎಂಪಿ ಸ್ಥಾನಗಳನ್ನು ಹೊಂದಿರುವ ಪಕ್ಷಗಳ ನಾಯಕರು ನಾಯಕತ್ವದ ಪಾತ್ರವನ್ನು ಬಯಸುತ್ತಿರುವುದರಿಂದ ತೃತೀಯ ರಂಗವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆ ಹಾಗೂ 22 ಸಂಸದರ ಬಲವನ್ನು ಹೊಂದಿರುವ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೆಸಿಆರ್ ನೇತೃತ್ವದ ತೃತೀಯ ರಂಗದ ಭಾಗವಾಗಲು ಬಯಸುತ್ತಾರೆಯೇ ಎಂದು ನೋಡಬೇಕಾಗಿದೆ. ಅದೇ ವೇಳೆ 24 ಸಂಸದರನ್ನು ಹೊಂದಿರುವ ಡಿಎಂಕೆಯ ಎಂಕೆ ಸ್ಟಾಲಿನ್ ಅವರು ಕಾಂಗ್ರೆಸ್ಸೇತರ “ತೃತೀಯ ರಂಗ” ದ ಭಾಗವಾಗುವುದು ಕೂಡಾ ಅನುಮಾನ.
ಮತ್ತೊಂದೆಡೆ, 22 ಸಂಸದರನ್ನು ಹೊಂದಿರುವ ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ಸಿಪಿ ಇದುವರೆಗೂ ಬಿಜೆಪಿಯೊಂದಿಗೆ ಪೈಪೋಟಿ ಹೊಂದಲು ಆಸಕ್ತಿ ತೋರಿಸಿಲ್ಲ. ಅದೇ ವೇಳೆ ಟಿಡಿಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಕೆಸಿಆರ್ ಸಂಬಂಧ ತೀವ್ರ ಹಳಸಿರುವುದರಿಂದ ಈ ಸಾಧ್ಯತೆಯನ್ನೂ ಗಂಭೀರವಾಗಿ ಪರಿಗಣಿಸುವಂತಿಲ್ಲ.
ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ವ್ಯಾಪಕವಾಗಿ ಕೆಲಸ ಮಾಡಿದ ಇತಿಹಾಸಕಾರ ಪ್ರೊಫೆಸರ್ ಇನುಕೊಂಡ ತಿರುಮಲಿ, ಪ್ರಾದೇಶಿಕ ನಾಯಕರ ನಾಯಕತ್ವದಲ್ಲಿ ತೃತೀಯ ರಂಗದ ಬಲವರ್ಧನೆ ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ.
“ಪ್ರಾದೇಶಿಕ ನಾಯಕರ ಹಿತಾಸಕ್ತಿಗಳು ವಿಭಿನ್ನವಾಗಿವೆ ಮತ್ತು ಇದು ಅವರಿಗೆ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ದೊಡ್ಡ ಮೈತ್ರಿಕೂಟವನ್ನು ರೂಪಿಸುವ ಬಗ್ಗೆ ಮಾತನಾಡುವವರಲ್ಲಿಯೂ ನಾಯಕತ್ವದ ಪಾತ್ರಗಳಿಗೆ ಸಂಬಂಧಿಸಿದಂತೆ ಹಿತಾಸಕ್ತಿ ಮತ್ತು ಪೈಪೋಟಿಯ ಸಂಘರ್ಷಗಳಿವೆ, ”ಎಂದು ಅವರು ಹೇಳಿದ್ದಾರೆ.
ಕೆಸಿಆರ್ ಮತ್ತು ಮಮತಾ ಬ್ಯಾನರ್ಜಿಯಂತಹ ಪ್ರಾದೇಶಿಕ ನಾಯಕರು “ಫೆಡರಲ್ ಫ್ರಂಟ್” ನ ಕಾರಣವನ್ನು ಪ್ರತಿಪಾದಿಸುವಾಗಲೂ ದೇಶಕ್ಕಾಗಿ ತಮ್ಮ “ಫೆಡರಲಿಸಂ ತತ್ವ” ವನ್ನು ವ್ಯಕ್ತಪಡಿಸಲು ವಿಫಲರಾಗಿದ್ದಾರೆ ಎಂದು ತಿರುಮಲಿ ಅಭಿಪ್ರಾಯಿಸಿದ್ದಾರೆ.
ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ರಾಷ್ಟ್ರೀಯ ಅಜೆಂಡಾಗಳನ್ನು ಹೊಂದಿದ್ದವು, ಪ್ರಾದೇಶಿಕ ಪಕ್ಷದ ನಾಯಕರು ಜನರನ್ನು ಆಕರ್ಷಿಸುವ ಪ್ಯಾನ್-ಇಂಡಿಯನ್ ಅಜೆಂಡಾದ ಕೊರತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೆಲವು ರಾಜಕೀಯ ವೀಕ್ಷಕರು ಕೆಸಿಆರ್ ಅವರು ಹೇಳಿಕೊಂಡಂತೆ ತೃತೀಯ ರಂಗದ ಕಾರ್ಯರೂಪದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು ಎಂದು ಭಾವಿಸಿದರೆ, ಕೆಲವರು ಅದು ಆಗುವುದಿಲ್ಲ ಎಂದು ಭಾವಿಸುತ್ತಾರೆ, ಇನ್ನು ಕೆಲವರು ಭರವಸೆ ಕಳೆದುಕೊಳ್ಳದೆ ಕಾಯುತ್ತಿದ್ದಾರೆ.
ಜನಪ್ರಿಯ ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್, ಪಂಚ ರಾಜ್ಯ ವಿಧಾನಸಭಾ ಫಲಿತಾಂಶವು 2024 ರ ಚುನಾವಣೆಯ ಪ್ರತಿಬಿಂಬವಲ್ಲ ಎಂದು ಭಾವಿಸಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯು ಬೇರೆಯದ್ದೇ ಫಲಿತಾಂಶ ನೀಡುತ್ತದೆ ಎಂದು ಅವರು ನಂಬಿದ್ದಾರೆ. ಹಾಗಾಗಿಯೇ, ವಿಧಾನಸಭಾ ಚುನಾವಣೆ ಫಲಿತಾಂಶ ಇಟ್ಟುಕೊಂಡು ಬಿಜೆಪಿ ಮಾಡುತ್ತಿರುವ ಪ್ರಚಾರವನ್ನು ನಂಬಬೇಡಿ ಎಂದು ಕರೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ಭಾರತಕ್ಕಾಗಿ ಯುದ್ಧವನ್ನು 2024 ರಲ್ಲಿ ಹೋರಾಡಲಾಗುತ್ತದೆ ಮತ್ತು ನಿರ್ಧರಿಸಲಾಗುತ್ತದೆ, ಯಾವುದೇ ರಾಜ್ಯ ಚುನಾವಣೆಗಳಲ್ಲಿ ಅಲ್ಲ. ಇದು ಸಾಹೇಬರಿಗೆ ಗೊತ್ತು! ಆದ್ದರಿಂದ ವಿರೋಧ ಪಕ್ಷದ ಮೇಲೆ ನಿರ್ಣಾಯಕ ಅಭಿಪ್ರಾಯವನ್ನು ಸ್ಥಾಪಿಸಲು ರಾಜ್ಯದ ಫಲಿತಾಂಶಗಳ ಸುತ್ತ ಉನ್ಮಾದವನ್ನು ಸೃಷ್ಟಿಸುವ ಈ ಬುದ್ಧಿವಂತ ಪ್ರಯತ್ನ ಮಾಡುತ್ತಿದ್ದಾರೆ. ಈ ಸುಳ್ಳು ನಿರೂಪಣೆಗೆ ಬಲಿಯಾಗಬೇಡಿ.” ಎಂದಿದ್ದಾರೆ.






