ಉತ್ತರ ಪ್ರದೇಶದ ಮಥುರಾ ನಗರದಲ್ಲಿ ಕೃಷ್ಣ ದೇಗುಲದ ಪಕ್ಕದಲ್ಲಿರುವ ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆಗೆ ಮಾನ್ಯ ಮಾಡಿದೆ.
ವಕೀಲರ ಮೂಲಕ ಹಾಜರಾಗದೆ, ಅರ್ಜಿದಾರರು ವ್ಯಕ್ತಿಗತವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದರಿಂದ ಅರ್ಜಿಯನ್ನು 2021 ಜ.19ರಂದು ವಜಾಗೊಳಿಸಲಾಗಿತ್ತು.
ಕತ್ರಾ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಆವರಣದೊಳಗೆ ಭಗವಾನ್ ಕೃಷ್ಣನ ಜನ್ಮಸ್ಥಳದಲ್ಲಿ1669ರಲ್ಲಿ ಮುಘಲ್ ಚಕ್ರವರ್ತಿ ಔರಂಗಝೇಬ್ ದೇವಸ್ಥಾನ ನೆಲಸಮಗೊಳಿಸಿ ಮಸೀದಿಯನ್ನು ನಿರ್ಮಿಸಿದ್ದು, ಮಸೀದಿಯ ಗೋಡೆಗಳಲ್ಲಿ ಈಗಲೂ ಹಿಂದು ಧಾರ್ಮಿಕ ಚಿಹ್ನೆಗಳಿವೆ ಎಂಬ ವಾದದೊಂದಿಗೆ ಮಥುರಾ ನ್ಯಾಯಾಲಯದ ಮೊರೆ ಹೋಗಲಾಗಿದೆ.
ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಸೇರಿದಂತೆ ಐವರು ಶಾಹಿ ಈದ್ಗಾ ಮಸೀದಿ ಹಾಗೂ ಒಟ್ಟು 13.7 ಏಕರೆ ಸ್ಥಳವನ್ನು ಹಿಂದೂಗಳಿಗೆ ನೀಡಬೇಕು ಎಂದು ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹಾಗೂ, 1968ರಲ್ಲಿ ದೇವಾಲಯ ಆಡಳಿತ ಮಂಡಳಿ ಹಾಗೂ ಮಸೀದಿ ಸಮಿತಿ ನಡುವಿನ ರಾಜಿ ತೀರ್ಪನ್ನು ರದ್ದುಗೊಳಿಸುವಂತೆ ಕೂಡಾ ಕೋರಲಾಗಿದೆ.

ಅರ್ಜಿಯಲ್ಲಿ ಶ್ರೀಕೃಷ್ಣ ಜನ್ಮಸ್ಥಾನದ ಭಾಗವಾಗಿ ದೇವಸ್ಥಾನವನ್ನು ನಿರ್ಮಿಸಲು ಮಸೀದಿಯನ್ನು ಹಿಂದುಗಳಿಗೆ ಹಸ್ತಾಂತರ ಮಾಡಲು ನ್ಯಾಯಾಲಯದಿಂದ ನಿರ್ದೇಶನಗಳನ್ನು ಕೋರಲಾಗಿದೆ.
ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ, ಶಾಹಿ ಮಸೀದಿ ಈದ್ಗಾ ಟ್ರಸ್ಟ್, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್, ಶ್ರೀಕೃಷ್ಣ ಜನ್ಮಸ್ಥಳ ಸೇವಾ ಸಂಸ್ಥಾನ ಅವರನ್ನು ಪ್ರತಿವಾದಿಗಳಾಗಿ ಅರ್ಜಿಯಲ್ಲಿ ಹೆಸರಿಸಲಾಗಿದೆ. ಮಾತ್ರವಲ್ಲ, ಪ್ರತಿವಾದಿಗಳು, ಅವರ ಕೆಲಸಗಾರರು, ಬೆಂಬಲಿಗರು, ಅದರ ವಕೀಲರು ಮತ್ತು ಅವರ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಆವರಣಕ್ಕೆ ಪ್ರವೇಶಿಸದಂತೆ ನಿರ್ಬಂಧಿಸುವ ನಿಷೇಧಾಜ್ಞೆಗಳನ್ನು ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಾಜೇಶ ಬಿಂದಾಲ್ ಮತ್ತು ನ್ಯಾ.ಪ್ರಕಾಶ ಪಾಡಿಯಾ ಅವರ ಪೀಠವು ಮೂಲ ಅರ್ಜಿಯನ್ನು ಈಗ ಮರುಸ್ಥಾಪಿಸಿದ್ದು,ಜು.25ರಂದು ಮುಂದಿನ ವಿಚಾರಣೆ ನಡೆಯಲಿದೆ.






