ಬಾಗಲಕೋಟೆ: ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಜೀತದಾಳು ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿ ನಡೆದಿದೆ.

ಐವರು ಬಾಲ ಕಾರ್ಮಿಕರು ಸೇರಿದಂತೆ ಒಡಿಶಾ ಮೂಲದ ಒಟ್ಟು 24 ಜೀತದಾಳು ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಕಾರ್ಮಿಕರು ಈರಪ್ಪ ಕುಂಬಾರ ಎಂಬವರ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ಇಳಕಲ್ ತಹಶೀಲ್ದಾರ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಿಸಿದರು.

ಕಾರ್ಮಿಕರು ಮೊದಲು ವಿಜಯವಾಡಕ್ಕೆ ಕೆಲಸಕ್ಕಾಗಿ ಹೋಗಿ, ಬಳಿಕ ಬಾಗಲಕೋಟೆಗೆ ಕರೆತರಲಾಗಿತ್ತು. ಪ್ರತೀ ಕುಟುಂಬಕ್ಕೂ ವಾರಕ್ಕೆ ಕೇವಲ 800 ರೂ. ವೇತನ ನೀಡಲಾಗುತ್ತಿತ್ತು. ವಾರದಲ್ಲಿ ಒಬ್ಬರಿಗೆ ಮಾತ್ರ ಮಾರುಕಟ್ಟೆಗೆ ಹೋಗಲು ಅನುಮತಿ ಇತ್ತು ಎಂದು ತಿಳಿದುಬಂದಿದೆ. ಅಲ್ಲದೇ ಅವರ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಬಾಲ ಕಾರ್ಮಿಕ ನಿಷೇಧ ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆಯಡಿ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







