2018-19ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪೆನಿಗಳಿಂದ ರಾಜಕೀಯ ಪಕ್ಷಗಳು ದೇಣಿಗೆಯ ರೂಪದಲ್ಲಿ ಪಡೆದಂತಹ ಒಟ್ಟು ಮೊತ್ತ ರೂ. 876 ಕೋಟಿ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ತನ್ನ ವರದಿಯಲ್ಲಿ ಹೇಳಿದೆ. 2012ರ ನಂತರ 2019ರವರೆಗೆ ಅತೀ ಹೆಚ್ಚು ಕಾರ್ಪೊರೇಟ್ ದೇಣಿಗೆ ಪಡೆದ ಪಕ್ಷ BJP ಎಂದು ಅದು ಹೇಳಿದೆ.
ADRನ ವರದಿಯ ಪ್ರಕಾರ, 2018-19ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಒಟ್ಟು ರೂ. 698 ಕೋಟಿ ದೇಣಿಗೆಯನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ (Congress) ಪಕ್ಷಕ್ಕೆ ರೂ. 122.5 ಕೋಟಿ ಲಭಿಸಿದೆ. ಚುನಾವಣಾ ಆಯೋಗವು ಈ ವರದಿಯನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಪಕ್ಷಗಳು ಒಂದು ಆರ್ಥಿಕ ವರ್ಷದಲ್ಲಿ ರೂ. 20,000ಕ್ಕೂ ಹೆಚ್ಚು ಮೊತ್ತದ ದೇಣಿಗೆ ನೀಡಿದವರ ವಿವರಗಳನ್ನು ನೀಡಬೇಕಾಗುತ್ತದೆ. ರಾಜಕೀಯ ಪಕ್ಷಗಳು ನೀಡಿದ ವಿವರಗಳ ಆಧಾರದ ಮೇಲೆ ADR ವರದಿಯನ್ನು ತಯಾರಿಸುತ್ತದೆ.
1,573 ಕಾರ್ಪೊರೇಟ್ ಕಂಪೆನಿಗಳು ಬಿಜೆಪಿಗೆ ದೇಣಿಗೆ ನೀಡದರೆ, 122 ಕಂಪೆನಿಗಳು ಕಾಂಗ್ರೆಸ್‌ಗೆ ದೇಣಿಗೆ ನೀಡಿವೆ. 17 ಕಾರ್ಪೊರೇಟ್ ಕಂಪೆನಿಗಳು ಒಟ್ಟು 11.345 ಕೋಟಿಯಷ್ಟು ಮೊತ್ತವನ್ನು ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (NCP)ಗೆ ನೀಡಿದೆ.
ದೇಣಿಗೆ ನೀಡಿರುವ ಕಂಪೆನಿಗಳಲ್ಲಿ 319 ಕಂಪೆನಿಗಳ ವಿಳಾಸವೇ ಇಲ್ಲ. ಈ ರೀತಿ ವಿಳಾಸ ಇಲ್ಲದೇ ಇರುವ ಕಂಪೆನಿಗಳಿಂದ ರೂ. 31.42 ಕೋಟಿ ದೇಣಿಗೆ ಬಂದಿದೆ. ಇನ್ನು ರೂ. 20.54 ಕೋಟಿಯಷ್ಟು ಮೊತ್ತದ ದೇಣಿಗೆ ನೀಡಿರುವ ಕಂಪೆನಿಗಳ ಕುರಿತು ಯಾವುದೇ ಮಾಹಿತಿ ಆನ್‌ಲೈನ್ ಅಥವಾ ಅಧಿಕೃತ ದಾಖಲೆಗಳಲ್ಲಿ ಲಭ್ಯವಿಲ್ಲ. 274 ಕಂಪೆನಿಗಳು ತಮ್ಮ ಪಾನ್ ಸಂಖ್ಯೆಯನ್ನು ನೀಡಲಿಲ್ಲ.
ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಯಲ್ಲಿ ಟಾಟಾ ಸಂಸ್ಥೆಯ ಪಾಲು ಅತ್ಯಧಿಕವಾಗಿದೆ. ಇನ್ನು ರಾಜಕೀಯ ಪಕ್ಷಗಳು ಪಡೆದ ದೇಣಿಗೆಯಲ್ಲಿ 2004-2012 ರಿಂದ 2018-19ರ ವರೆಗೆ ಶೇ. 131 ಹೆಚ್ಚಳವಾಗಿದೆ.
ಇನ್ನು 2012ರಿಂದ 2019ರ ವರೆಗೆ ಬಿಜೆಪಿಯು ರೂ. 2,319.49 ಕೋಟಿ ದೇಣಿಗೆ ಪಡೆದಿದೆ. ಕಾಂಗ್ರೆಸ್ ಪಕ್ಷಕ್ಕೆ 376.02 ಕೋಟಿ ದೇಣಿಗೆ ಬಂದಿದೆ. ಎನ್‌ಸಿಪಿಗೆ 69.81 ಕೋಟಿ, ತೃಣಮೂಲ ಕಾಂಗ್ರೆಸ್‌ಗೆ 45.02 ಕೋಟಿ ಮತ್ತು ಸಿಪಿಎಂ ಗೆ 7.50 ಕೋಟಿ ದೇಣಿಗೆ ಬಂದಿದೆ.