
ಬೆಂಗಳೂರು: ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ (Puneeth Kerehalli) 14 ದಿನ ನ್ಯಾಯಾಂಗ ಬಂಧನಕ್ಕೆ 5ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಕಾಟನ್ ಪೇಟೆ ಪೊಲೀಸರ (Cottonpet Police) ವಿಚಾರಣೆ ಸಂದರ್ಭದಲ್ಲಿ ಹೊಟ್ಟೆ ನೋವಿನಿಂದ ಏಕಾಏಕಿ ಕುಸಿದು ಬಿದ್ದಿದ್ದ ಪುನೀತ್ ಕೆರೆಹಳ್ಳಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ವಿಕ್ಟೋರಿಯಾ ಆಸ್ಪತ್ರೆಯಿಂದ ಕರೆತಂದಿದ್ದ ಪೊಲೀಸರು ಕೋರಮಂಗಲದ ಜ್ಯೂಡಿಷಿಯಲ್ ಬ್ಲಾಕ್ ನಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.
ಆಗ 5ನೇ ಎಸಿಎಂಎಂ ಕೋರ್ಟ್ (ACMM Court) ನ್ಯಾಯಾಧೀಶ ಶಿವಕುಮಾರ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.ನಾಯಿ ಮಾಂಸದ ಜೊತೆಗೆ ಕುರಿ ಮಾಂಸ ರಾಜಸ್ಥಾನದಿಂದ ಬೆಂಗಳೂರಿಗೆ (Bengaluru) ತಂದು ಮಾರಾಟ ಮಾಡಲಾಗುತ್ತದೆ ಎಂದು ಪುನೀತ್ ಕೆರೆಹಳ್ಳಿ ಹಾಗೂ ಹಿಂದೂ ಪರ ಕಾರ್ಯಕರ್ತರು ಮೆಜೆಸ್ಟಿಕ್ ರೈಲು ನಿಲ್ದಾಣದ ಹತ್ತಿರ ಪ್ರತಿಭಟಿಸಿದ್ದರು. ಆನಂತರ ಪುನೀತ್ ನನ್ನು ಮಧ್ಯರಾತ್ರಿ ಬಂಧಿಸಿದ್ದರು.
ಕಾಟನ್ ಪೇಟೆ ಪೊಲೀಸರು (Cottonpet Police) ಬಂಧಿಸುತ್ತಿದ್ದಂತೆ ಅಸ್ವಸ್ಥಗೊಂಡಿದ್ದರು. ಇನ್ನೂ ಬೆಳಗಿನ ಜಾವ 4:45ರ ವೇಳೆಗೆ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಎಲ್ಲ ನಾರ್ಮಲ್ ಇರುವುದಾಗಿ ತಿಳಿದು ಬಂದಿತ್ತು.




