ಲಾಕ್‌ಡೌನ್ ಬಳಿಕ ವೆಬ್ ಸರಣಿಯ ವ್ಯಾಮೋಹ ಭಾರತೀಯರಲ್ಲಿ ಹೆಚ್ಚಾಗಿದೆ. ಆದರೆ ಇತ್ತೀಚೆಗೆ ಪದೇ ಪದೇ ಹಿಂದೂ ಮೂಲಭೂತವಾಧಿಗಳು ‘#BoycottNetflix‘ ಎಂಬ ಹ್ಯಾಶ್‌ಟ್ಯಾಗ್ ಮೂಲಕ ಟ್ವಿಟರ್ ಅಭಿಯಾನ ನಡೆಸುತ್ತಿದ್ದಾರೆ.
ಇದೀಗ, ‘ಎ ಸೂಟೇಬಲ್ ಬಾಯ್’ ಎಂಬ ವೆಬ್ ಸರಣಿಯಲ್ಲಿ ಬರುವ ಚುಂಬನದ ದೃಶ್ಯದ ವಿರುದ್ಧ ಬಿಜೆಪಿ ಮುಖಂಡ ಗೌರವ್ ತಿವಾರಿ ಮಧ್ಯಪ್ರದೇಶ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ವೆಬ್ ಸರಣಿಯಲ್ಲಿ ತಬು ಮತ್ತು ಇಶಾನ್ ಖಟ್ಟರ್ ಪ್ರಮುಖ ಪಾತ್ರದಲ್ಲಿದ್ದಾರೆ.
‘ಎ ಸೂಟೇಬಲ್ ಬಾಯ್’ ಎಂಬ ವೆಬ್ ಶೋನ ಕಥಾವಸ್ತುವಿನ ಪ್ರಕಾರ, ಕಥೆ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗನ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಸರಣಿಯಲ್ಲಿ ಈ ಜೋಡಿಯ ನಡುವೆ ಚುಂಬನದ ದೃಶ್ಯವನ್ನು ಚಿತ್ರೀಕರಿಸಿದ ನಂತರ ವಿವಾದ ಪ್ರಾರಂಭವಾಗಿದೆ. ಬಲಪಂಥೀಯ ಹಿಂದೂ ಗುಂಪುಗಳು ಈ ದೃಶ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಿವಾರು ಪ್ರಕಾರ, ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗನ ನಡುವೆ ಚುಂಬನ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಹಿಂದೂ-ಮುಸ್ಲಿಂ ನಡುವಿನ ಲವ್-ಜಿಹಾದ್ ಅನ್ನು ಪ್ರೋತ್ಸಾಹಿಸುವ ಕ್ರಿಯೆ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.
ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಆ ವೀಡಿಯೊವನ್ನು ತೆಗೆಯದಿದ್ದರೆ ಅದರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ವಿರುದ್ಧವೂ ಪ್ರಕರಣ ದಾಖಲಿಸಬಹುದು ಎಂದು ಬಿಜೆಪಿ ನಾಯಕ ಗೌರವ್ ತಿವಾರಿ ಹೇಳಿದ್ದಾರೆ.
#BoycottNetflix ಅಭಿಯಾನಕ್ಕೆ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿಂದೂ ಮೂಲಭೂತವಾದಿಗಳು ನೆಟ್‌ಫ್ಲಿಕ್ಸ್ ನಿಷೇಧಕ್ಕೆ ಕರೆ ನೀಡಿದ್ದಾರೆ. ನೆಟ್‌ಫ್ಲಿಕ್ಸ್ ʼಹಿಂದೂಫೋಬಿಯಾʼವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ನೆಟ್‌ಫ್ಲಿಕ್ಸ್ ಪರವೂ ನಿಂತಿರುವ ನೆಟ್ಟಿಗರು, ಚುಂಬನದ ದೃಶ್ಯ ನಮ್ಮ ಸಂಸ್ಕೃತಿಯ ವಿರುದ್ಧ ಎಂದು ಮಾತನಾಡುವವರು ದೇವಸ್ಥಾನದ ಮೇಲಿರುವ ಪ್ರಾಚೀನ ಶಿಲ್ಪಕಲೆಯನ್ನು ನೋಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ನೆಟ್‌ಫ್ಲಿಕ್ಸ್ ವಿರುದ್ಧ ಹಿಂದೂ ಮೂಲಭೂತವಾದಿಗಳು ಅಭಿಯಾನ ನಡೆಸುವುದು ಇದೇ ಮೊದಲಲ್ಲ. ಈ ಹಿಂದೆ ಪಾತಾಳ್ ಲೋಕ್, ಬೇತಾಳ, ಲೈಲಾ ಹಾಗೂ ಕೃಷ್ಣಾ ಆಂಡ್ ಹಿಸ್ ಲೀಲಾ ಮೊದಲಾದ ವೆಬ್ ಸರಣಿ/ ಸಿನೆಮಾಗಳ ವಿರುದ್ಧವೂ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ನಡೆಸಿದ್ದರು.