ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಲಾಭದಾಯಕವಾಗಿ ನಡೆಯುತ್ತಿರುವ ಮತ್ತು ಖಾಸಗಿ ಬ್ಯಾಂಕುಗಳಿಗಿಂತಲೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧ್ಯಕ್ಷ ರಂಜಿತ್ ಕುಮಾರ್ ಅವರನ್ನು ತುಂಬಿದ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಟುವಾದ ಪದಗಳಿಂದ ನಿಂದಿಸಿದ್ದಾರೆನ್ನಲಾದ ದ್ವನಿಮುದ್ರಿಕೆ ವೈರಲ್ ಆಗಿದೆ.
ನರೇಂದ್ರ ಮೋದಿ ಸರ್ಕಾರದಲ್ಲಿ ವಾಣಿಜ್ಯ ಸಚಿವೆಯಾಗಿ ನಂತರ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅಧಿಕಾರಿಗಳ ಜತೆಗೆ ಒರಟಾಗಿ ನಡೆದುಕೊಳ್ಳುವುದರ ಬಗ್ಗೆ ಅಲ್ಲಲ್ಲಿ ಆರೋಪಗಳು ಕೇಳಿ ಬರುತ್ತಿದ್ದವು. ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ವಿತ್ತ ಸಚಿವೆಯಾದ ನಂತರ ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ವಿವಿಧ ಬ್ಯಾಂಕುಗಳ ಮುಖ್ಯಸ್ಥರ ಜತೆಗೆ ಅವರು ಒರಟಾಗಿ ಮಾತನಾಡುತ್ತಿದ್ದರು ಎಂಬ ದೂರುಗಳಿದ್ದವು. ಆದರೀಗ ಅವರ ಒರಟುತನದ ಮಾತುಗಳು ದ್ವನಿಮುದ್ರಿಕೆಯೊಂದಿಗೆ ಬಹಿರಂಗಗೊಂಡಿವೆ.
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಇಂಡಿಯಾದ ಅಧ್ಯಕ್ಷ ರಂಜಿತ್ ಕುಮಾರ್ ಅತ್ಯಂಕ ಸಮರ್ಥ, ಚಾಣಾಕ್ಷ ಅಧಿಕಾರಿ ಮತ್ತು ಸೌಮ್ಯ ಸ್ವಭಾವದವರು. ಅವರ ವಿರುದ್ಧ ನಿರ್ಮಲಾ ಸೀತಾರಾಮನ್ ಕಟುವಾಗಿ ಮಾತಾನಾಡಿರುವುದು ಬ್ಯಾಂಕಿಂಗ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸೀತಾರಾಮನ್ ದ್ವನಿಮುಂದ್ರಿಕೆ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ರಾಜಿನಾಮೆ ನೀಡಬೇಕು, ಅವರೇ ಅಸಮರ್ಥರಿದ್ದಾರೆ, ದೇಶದಲ್ಲಿ ಆರ್ಥಿಕತೆ ಹದಗೆಡಲು ನಿರ್ಮಲಾ ಸೀತಾರಾಮನ್ ಅವರೇ ಕಾರಣ ಎಂದೂ ಟೀಕಿಸಲಾಗಿದೆ. ಹಲವರು ನಿರ್ಮಲಾ ಸೀತಾರಾಮನ್ ಅವರನ್ನು ಬೆಂಬಲಿಸಿ, ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯಕ್ಷಮತಯೇ ಇಲ್ಲ, ಬ್ಯಾಂಕುಗಳ ಸಿಬ್ಬಂದಿ ಗ್ರಾಹಕರನ್ನು ತುಚ್ಛವಾಗಿ ಕಾಣುತ್ತಾರೆ ಎಂದೂ ಟೀಕಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು? ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಬ್ಯಾಂಕರುಗಳ ಸಭೆ ಗುಹಾವತಿಯಲ್ಲಿ ಫೆಬ್ರವರಿ ಕೊನೆವಾರದಲ್ಲಿ ಏರ್ಪಾಟಾಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ವಹಿಸಿದ್ದರು. ಅಸ್ಸಾಂ ರಾಜ್ಯದ ಲೀಡ್ ಬ್ಯಾಂಕ್ SBI ಆಗಿದ್ದರಿಂದಾಗಿ ಮತ್ತು ವಿತ್ತ ಸಚಿವರೇ ಸಭೆ ಅಧ್ಯಕ್ಷತೆ ವಹಿಸಿದ್ದಿರಿಂದಾಗಿ ರಂಜಿತ್ ಕುಮಾರ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಸ್ಸಾ ಟೀ ತೋಟದ ಕಾರ್ಮಿಕರ ಎಂಟು ಲಕ್ಷ ಖಾತೆಗಳ ಪೈಕಿ ಕೆವೈಸಿ (Know Your Customer) ಮಾಹಿತಿ ಪೂರ್ಣಗೊಳಿಸದ ಸುಮಾರು 2.5 ಲಕ್ಷ ಖಾತೆಗಳನ್ನು ಸ್ಥಗಿತಗೊಂಡಿದ್ದವು. ಇದರಿಂದಾಗಿ ಕಾರ್ಮಿಕರ ಖಾತೆಗೆ ನೇರವಾಗಿ ಪಾವತಿಯಾಗುವ ಸರ್ಕಾರದ ಸೌಲಭ್ಯಗಳು ತಲುಪಿರಲಿಲ್ಲ.
ಈ ಬಗ್ಗೆ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್ ‘…ಸ್ಟೇಟ್ ಬ್ಯಾಂಕ್ ಇಂಡಿಯಾ… ದೇಶದ ಅತಿದೊಡ್ಡ ಬ್ಯಾಂಕ್ ಅಂತಾ ನಂಗೆ ಹೇಳಿದ್ರೆ ಸಾಲದು… ನೀವು ಹೃದಯಹೀನ ಬ್ಯಾಂಕ್…’ ಎಂದು ರಂಜಿತ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಕೆವೈಸಿ ನಿಮಯಗಳ ಸಡಿಲಿಸುವ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಮೂಲಕ ಆರ್‌ಬಿಐ ಸಂಪರ್ಕಿಸಬೇಕಿತ್ತು ಎಂದು ಹೇಳಿದ್ದಾರೆ. ‘ನಿಮ್ಮ ಅಸಮರ್ಥತೆಯಿಂದ ಇದೆಲ್ಲಾ ಆಗಿದೆ’ ಎಂದ ನಿರ್ಮಲಾ ಸೀತಾರಾಮನ್, ‘ಇದು ಕೆಲಸದಲ್ಲಿನ ನಿಮ್ಮ ಲೋಪ.. ಈ ವೈಫಲ್ಯಕ್ಕೆ ಸಂಪೂರ್ಣವಾಗಿ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ..’ ಎಂದು ಕಟುವಾಗಿ ಹೇಳಿದ್ದಾರೆ. ಅನಿರೀಕ್ಷಿತವಾಗಿ ಇಡೀ ಸಭೆಯ ಮುಂದೆ ನಿರ್ಮಲಾ ಸೀತಾರಾಮನ್ ಅವರು ದೂಷಿಸಿದ್ದರಿಂದ ತಬ್ಬಿಬ್ಬಾದ ರಂಜಿತ್ ಕುಮಾರ್ ತಪ್ಪಾಯ್ತು ಕ್ಷಮಿಸಿ ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮ ಅವರಲ್ಲದೇ ಬ್ಯಾಂಕುಗಳ ಅಧಿಕಾರಿಗಳು, ಹಣಕಾಸು ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಅವರೆಲ್ಲರ ಎದುರು ನಿರ್ಮಲಾ ಸೀತಾರಾಮನ್ ಹೀಗೆ ಒರಟಾಗಿ ಮಾತನಾಡುವ ಅಗತ್ಯ ಇರಲಿಲ್ಲ. ನಿರ್ಮಲಾ ಸೀತಾರಾಮನ್ ಅವರ ನಡವಳಿಕೆಯಿಂದ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮ ಅವರಲ್ಲದೇ ಹಲವು ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.
ಈ ನಡುವೆ ನಿರ್ಮಲಾ ಸೀತಾರಾಮನ್ ಅವರು SBI ಅಧ್ಯಕ್ಷ ರಂಜಿತ್ ಕುಮಾರ್ ಅವರನ್ನು ನಿಂದಿಸಿರುವ ರೀತಿಯನ್ನು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಮಂಡಳ (ಎಐಬಿಒಸಿ) ಖಂಡಿಸಿದೆ. ಈ ಸಬಂಧ ಪತ್ರಿಕಾ ಹೇಳಿಕೆ ನೀಡಿರುವ ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯದತ್ತಾ, ತುಚ್ಛ ರೀತಿಯಲ್ಲಿ ಎಸ್ಬಿಐ ಅಧ್ಯಕ್ಷರ ಮೇಲೆ ವಾಗ್ದಾಳಿ ನಡೆಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಎಸ್ಬಿಐ ಸಾಧನೆಗಳ ಬಗ್ಗೆ ವಿತ್ತ ಸಚಿವರು ತಿಳಿಯಬೇಕು, ಜನಧನ್ ಯೋಜನೆ ಯಶಸ್ವಿಯಾಗಲು ಸಾರ್ವಜನಿಕ ವಲಯದ ಬ್ಯಾಂಕುಗಳು, ಮುಖ್ಯವಾಗಿ ಎಸ್ಬಿಐ ಮುಖ್ಯ ಕಾರಣ ಎಂದೂ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ನಿಂದಿಸಿದ್ದನ್ನು ದ್ವನಿಮುದ್ರಿಸಿ ಸಾಮಾಜಿಕ ತಾಣಗಳಲ್ಲಿ ಪ್ರಸಾರ ಮಾಡಿ ರಂಜಿತ್ ಕುಮಾರ್ ಅವರ ಘನತೆಗೆ ಧಕ್ಕೆ ತಂದವರು ಯಾರೆಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಲಾಗಿದೆ. ಸಂವಿಧಾನದ 12ನೇ ವಿಧಿಯಲ್ಲಿ ಪ್ರಸ್ತಾಪಿಸಿ, ವಿಶ್ಲೇಷಿಸಿರುವಂತೆ ಎಸ್ಬಿಐ ನಲ್ಲಿ ಸ್ಟೇಟ್ ಇರುವುದರಿಂದ ಅದಕ್ಕೆ ಹೆಚ್ಚಿನ ಮಾನ್ಯತೆ ಇದೆ. ಮತ್ತು ಅದರ ಮುಖ್ಯಸ್ಥರ ಹುದ್ದೆಗೆ ಘನತೆ ಇರುತ್ತದೆ. ಹೀಗಿರುವ ವಿತ್ತ ಸಚಿವರು ಬ್ಯಾಂಕರುಗಳ ಸಭೆಯಲ್ಲಿ ಎಸ್ಬಿಐ ಅಧ್ಯಕ್ಷರನ್ನು ಅವಮಾನಿಸಿದ್ದು ಸರಿಯಲ್ಲ ಎಂಬ ಅಂಶವನ್ನೂ ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯದತ್ತಾ ಪ್ರಸ್ತಾಪಿಸಿದ್ದಾರೆ. ಆದರೆ, ವಿತ್ತ ಸಚವರ ನಡವಳಿಕೆ ಖಂಡಿಸಿ ನೀಡಲಾಗಿದ್ದ ಪತ್ರಿಕಾ ಹೇಳಿಕೆಯನ್ನು ಹಿಂಪಡೆಯಲಾಗಿದೆ.
3,20,000 ಸದಸ್ಯರಿರುವ ಎಐಬಿಒಸಿ ತಿರುಗಿ ಬಿದ್ದರೆ, ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಸ್ಥಗಿತಗೊಳ್ಳುತ್ತದೆ. ಅಷ್ಟುಪ್ರಬಲವಾದ ಬ್ಯಾಂಕಿಂಗ್ ಸಂಘಟನೆ ಇದಾಗಿದೆ. ಆದರೆ, ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯದತ್ತಾ ಅವರು ನೀಡಿದ್ದ ಪತ್ರಿಕಾ ಹೇಳಿಕೆಯನ್ನು ವಾಪಸ್ ಪಡೆದದ್ದರ ಬಗ್ಗೆ ಬ್ಯಾಂಕುಗಳ ಅಧಿಕಾರಿಗಳಲ್ಲೇ ಅಸಮಾಧಾನ ವ್ಯಕ್ತವಾಗಿದೆ.