ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್ಬಿಐನ ಎಂಪಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ. ರೆಪೋ ಶೇ. 4ರ ದರದಲ್ಲಿ ಮುಂದುವರಿಯಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ಧಾರೆ.
ರೆಪೋ ಯಥಾಸ್ಥಿತಿ ಪಾಲನೆ ಮಾಡಲು ಆರ್‌ಬಿಐ ನಿರ್ಧರಿಸಿದೆ. ಹಣಕಾಸು ಚಲನೆಗೆ ಪ್ರಮುಖ ಪಾತ್ರ ವಹಿಸುವ ರೆಪೋ ದರ ಶೇ. 4ರಲ್ಲಿ ಮುಂದುವರಿಯಲಿದೆ. ಮತ್ತು ರಿವರ್ಸ್ ರೆಪೋ ದರವನ್ನು ಶೇ. 3.35 ದಲ್ಲಿ ಮುಂದುವರೆಸಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ, ಎಂದು ಸಭೆಯ ಬಳಿಕ ಮಾಧ್ಯಮಗಳಿಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ದೇಶದ ಆರ್ಥಿಕತೆ ಸುಧಾರಣೆಯಾಗುವ ಭರವಸೆ ನಮಗಿದೆ. ಆರ್ಥಿಕತೆಯನ್ನು ಮತ್ತೆ ಪುಟಿದೇಳುವಂತೆ ಮಾಡುವತ್ತ ನಾವು ನಮ್ಮ ಗಮನ ಕೇಂದ್ರೀಕರಿಸಬೇಕಾಗಿದೆ. ಪ್ರಸಕ್ತ ಆರ್ಥಿಕ ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿಯು ಧನಾತ್ಮಕವಾಗಿರಲಿದೆ,” ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಎಂಪಿಸಿಯಲ್ಲಿ ತೆರವಾಗಿದ್ದ ಮೂರು ಸ್ಥಾನಗಳನ್ನು ತುಂಬುವಲ್ಲಿ ವಿಳಂಬ ಮಾಡಿದ್ದರಿಂದ ಈ ಬಾರಿಯ ಎಂಪಿಸಿ ಸಭೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿತ್ತು. ಎಂಪಿಸಿಗೆ ಸೇರ್ಪಡೆಗೊಂಡ ಮೂರು ಹೊಸ ಆರ್ಥಿಕ ತಜ್ಮರು – ಆಶಿಮಾ ಗೋಯಲ್, ಜಯಂತ್ ಆರ್ ವರ್ಮಾ ಮತ್ತು ಶಶಾಂಕ ಭಿಡೆ.
ರೆಪೋ ರೇಟ್ ಮತ್ತು ರಿವರ್ಸ್ ರೆಪೋ ರೇಟ್ ಎಂದರೇನು?
ದೇಶದ ವಾಣಿಜ್ಯ ಬ್ಯಾಂಕುಗಳಲ್ಲಿ ಹಣದ ಕೊರತೆ ಉಂಟಾದಾಗ, ಆರ್‌ಬಿಐ ಬ್ಯಾಂಕುಗಳಿಗೆ ಸಾಲ ನೀಡುತ್ತದೆ. ಆ ಸಾಲಕ್ಕೆ ನಿಗದಿತ ಪ್ರಮಾಣದ ಬಡ್ಡಿಯನ್ನು ವಿಧಿಸುತ್ತದೆ. ಈ ಬಡ್ಡಿದರವನ್ನು ರೆಪೋ ರೇಟ್ ಎನ್ನುತ್ತಾರೆ.
ಬ್ಯಾಂಕುಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಹಣ ಚಲಾವಣೆಯಾಗುತ್ತಿದ್ದರೆ, ಆರ್‌ಬಿಐ ದೇಸೀಯ ಬ್ಯಾಂಕುಗಳಿಂದ ಸಾಲ ಪಡೆಯುತ್ತದೆ. ಈ ಸಾಲಕ್ಕೆ ನಿಗದಿತ ಪ್ರಮಾಣದ ಬಡ್ಡಿಯನ್ನು ಕೂಡಾ ನೀಡುತ್ತದೆ. ಈ ಬಡ್ಡಿದರವನ್ನು ರಿವರ್ಸ್ ರೆಪೋ ರೇಟ್ ಎನ್ನುತ್ತಾರೆ.








