ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ, ಮಾಲಕ ಅರ್ನಾಬ್ ಗೋಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಂಟೀರಿಯರ್ ಡಿಸೈನರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಲಿಬಾಗ್ ಪೊಲೀಸರ ತಂಡವು ಅರನಾಬ್ ಗೋಸ್ವಾಮಿಯನ್ನು ಅವರ ನಿವಾಸದಿಂದ ಬಂಧಿಸಿ ಕರೆದುಕೊಂಡು ಹೋಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ತನ್ನ ಮನೆಯಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಅರ್ನಾಬ್ ಹೇಳಿಕೊಂಡಿದ್ದಾರೆ.
ರಿಪಬ್ಲಿಕ್ ಟಿವಿಯಿಂದ ಬಾಕಿ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ 2018 ರಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಅನ್ವಯ್ ನಾಯಕ್ ಮತ್ತು ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಪುತ್ರಿ ಆದ್ನ್ಯಾ ನಾಯಕ್ ಅವರ ಹೊಸ ದೂರಿನ ಮೇರೆಗೆ ಪ್ರಕರಣದ ಮರು ತನಿಖೆಗೆ ಆದೇಶಿಸಲಾಗಿದೆ ಎಂದು ಘೋಷಿಸಿದ್ದರು.
ರಿಪಬ್ಲಿಕ್ ಚಾನೆಲ್‌ನಿಂದ ಬಾಕಿ ಪಾವತಿಸದ ಆರೋಪದ ಬಗ್ಗೆ ಅಲಿಬಾಗ್ ಪೊಲೀಸರು ತನಿಖೆ ನಡೆಸಿಲ್ಲ ಎಂದು ಆದ್ನ್ಯಾ ಆರೋಪಿಸಿದ್ದಾರೆ ಎಂದು ದೇಶ್ಮುಖ್ ಹೇಳಿದ್ದಾರೆ, ಇದು 2018 ರ ಮೇ ತಿಂಗಳಲ್ಲಿ ತನ್ನ ತಂದೆ ಮತ್ತು ಅಜ್ಜಿಯನ್ನು ಆತ್ಮಹತ್ಯೆಗೆ ದೂಡಿದೆ ಎಂದು ಆದ್ನ್ಯಾ ಆರೋಪಿಸಿದ್ದರು.