ಕೆಲವು ದಿನಗಳಿಂದ ಸುರಿದ ಮಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನ ಬಹುಪಾಲು ಪ್ರದೇಶಗಳು ತತ್ತರಿಸಿ ಹೋಗಿವೆ. ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು ಸಂಪೂರ್ಣ ರಸ್ತೆಯನ್ನು ಆವರಿಸಿದ್ದು ವಾಹನ ಚಾಲಕರು ಪರದಾಡುವಂತಾಗಿತ್ತು.
ಕಳೆದ ವಾರ ಸುರಿದ ಭಾರಿ ಮಳೆಗೆ ಸುಮಾರು 300 ಮನೆಗಳಿಗೆ ನೀರು ನುಗ್ಗಿದ್ದು, 500 ರಷ್ಟು ವಾಹನಗಳು ಕೊಚ್ಚಿ ಹೋಗಿದ್ದವು. ಗುರುದತ್ತಾ ಲೇಔಟ್, ದತ್ತಾತ್ರೆಯ ನಗರ, ಕೋರಮಂಗಲ ಮತ್ತು ಹೊಸಕೆರೆ ಹಳ್ಳಿ ಮೊದಲಾದ ಪ್ರದೇಶಗಳು ಬಹುಪಾಲು ನೀರಿನಿಂದ ಆವೃತವಾಗಿದ್ದವು. ರಾಜರಾಜೇಶ್ವರಿ ನಗರದ ಭೀಮನಕಟ್ಟೆ ಒಡೆದು 20 ಮನೆಗಳಿಗೆ ಹಾನಿಯುಂಟಾಗಿತ್ತು. ಇಂತಹ ಮಳೆಯನ್ನು ನಾವು ನಿರೀಕ್ಷಿಸಿಯೇ ಇರಲಿಲ್ಲ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು ಹೇಳಿಕೆಯನ್ನೂ ನೀಡಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಈ ಅನಿರೀಕ್ಷಿತ ಆಘಾತಕ್ಕೆ ಒಳಗಾಗಿದ್ದರೂ, ಬೆಂಗಳೂರಿನ ಶಾಸಕರು, ಸಂಸದರು, ʼಬೆಂಗಳೂರು ಅಭಿವೃದ್ಧಿ ಇಲಾಖೆʼಯನ್ನು ತನ್ನಲ್ಲೇ ಇರಿಸಿಕೊಂಡಿರುವ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳೂ ಮಳೆ ಹಾನಿ ಸಂತ್ರಸ್ತರ ಅಹವಾಲು ಸ್ವೀಕರಿಸಲು ಘಟನಾ ಸ್ಥಳಕ್ಕೆ ಆಗಮಿಸಲಿಲ್ಲ.
ಅಷ್ಟಕ್ಕೂ ತನ್ನ ಮುಖ್ಯಮಂತ್ರಿ ಖುರ್ಚಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಪರದಾಡುತ್ತಿರುವ ಯಡಿಯೂರಪ್ಪರ ಮೇಲೆ ಜವಾಬ್ದಾರಿ ಹಾಗೂ ಹೊರೆಗಳು ಹೆಚ್ಚೇ ಇದೆ. ಒಂದು ಕಡೆ ಕಾಲು ಮುರಿದಂತಿರುವ ತನ್ನ ಖುರ್ಚಿ, ಶಾಸಕರ ಅಸಮಾಧಾನ, ವಿಧಾನಸಭೆ ಉಪಚುನಾವಣೆ, ನೆರೆ ಪರಿಸ್ಥಿತಿ, ಆಡಳಿತ ಇವನ್ನೆಲ್ಲಾ ಹೊತ್ತು ಹೈರಾಣಾಗಿರುವ ಯಡಿಯೂರಪ್ಪ, 1.2 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಬೆಂಗಳೂರಿನ ಅಭಿವೃದ್ಧಿ ಇಲಾಖೆಯನ್ನೂ ತನ್ನಲ್ಲೇ ಇರಿಸಿಕೊಂಡು ಇನ್ನಷ್ಟು ಭಾರವನ್ನು ಹೊತ್ತುಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ.
ಬೆಂಗಳೂರು ಅಭಿವೃದ್ಧಿ ಇಲಾಖೆಯ ಮೇಲೆ ವಿಧಾನಸಭೆಯೊಳಗಿನ ಬಿಜೆಪಿ ನಾಯಕರಿಗೆ ಹಿಂದಿನಿಂದಲೂ ಕಣ್ಣು ಇದೆ. ಆರ್ ಅಶೋಕ್, ಅಶ್ವತ್ಥ ನಾರಾಯಣ ಮೊದಲಾದ ನಾಯಕರು ಈ ಇಲಾಖೆಯನ್ನು ವಹಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಖಾತೆ ಹಂಚಿಕೆ ಕುರಿತಂತೆ ಮೊದಲೇ ಅಭದ್ರತೆಯಲ್ಲಿರುವ ಯಡಿಯೂರಪ್ಪರಿಗೆ ಗೊಂದಲ ಇದೆ. ವಲಸೆ ಬಂದ ಹೊಸ ಶಾಸಕರಿಗೆ ಉತ್ತಮ ಮಂತ್ರಿಪದವಿಯನ್ನು ನೀಡುತ್ತಿದ್ದಾರೆ ಎಂಬ ಆರೋಪವೂ ಬಿಜೆಪಿಯೊಳಗೇ ಅಸಮಾಧಾನದ ಹೊಗೆ ಏಳಲು ಕಾರಣವಾಗಿದೆ. ಇದು ಯಡಿಯೂರಪ್ಪ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು ಅಭಿವೃದ್ಧಿ ಇಲಾಖೆ ಮಂತ್ರಿಗಿರಿಗೂ ತೀವ್ರ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಈ ಖಾತೆಯನ್ನು ಯಾರಿಗೂ ನೀಡದೆ, ಮುಖ್ಯಮಂತ್ರಿ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಹಾಗಾಗಿ ಬೆಂಗಳೂರು ನಗರ ಮಳೆಗೆ ತಲ್ಲಣಿಸುತ್ತಿರುವಾಗಲೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಓರ್ವರೇ ಓಡಾಡಿ ಕೆಲಸ ಮುಗಿಸುವ ಹೊರೆ ಬಿದ್ದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಾಸಕರು ಹಾಗೂ ಮಂತ್ರಿಗಳು, ತಮ್ಮ ಜವಾಬ್ದಾಋಿಯನ್ನು ಸರಿಯಾಗಿ ನಿಭಾಯಿಸದೇ, ಎಲ್ಲಾ ಹೊರೆಯನ್ನು ಅಧಿಕಾರಿಗಳ ಹೆಗಲಿಗೆ ಹಾಕಿ ತಾವು ಮಾತ್ರ ರಾಜಕಾರಣದಲ್ಲಿ ನಿರತರಾಗಿದ್ದಾರೆ.
ಈ ಕುರಿತಂತೆ ಪ್ರತಿಧ್ವನಿಯೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ತಾನು ಮುಖ್ಯಮಂತ್ರಿಗಳ, ಸರ್ಕಾರದ ಮಾರ್ದರ್ಶನದಂತೆಯೇ ಕಾರ್ಯ ನಿರ್ವಹಿಸುತ್ತಿದ್ದೇನೆ. ತನಗೆ ಸರ್ಕಾರದ ಸಂಪೂರ್ಣ ಬೆಂಬಲ ಸಿಕ್ಕಿದೆ ಎಂದು ಹೇಳಿದ್ದಾರೆ.
ಮೇಲ್ನೋಟಕ್ಕೆ ಆಯುಕ್ತರು ಸರ್ಕಾರದ ಬೆಂಬಲ ಸಿಕ್ಕಿದೆ ಎಂದು ಹೇಳಿದ್ದಾರಾದರೂ, ಅದು ಕಾರ್ಯದಲ್ಲಿ ಕಂಡು ಬಂದಿಲ್ಲ. ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಇಲಾಖೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅಧಿಕಾರ ವಿಕೇಂದ್ರಿಕರಣದ ಮೇಲೆ ನಂಬಿಕೆ ಇಟ್ಟು ಮುಖ್ಯಮಂತ್ರಿ ತಮ್ಮ ಜವಾಬ್ದಾರಿಯ ಹೊರೆಯನ್ನು ತಗ್ಗುಗೊಳಿಸಬೇಕಿದೆ. ಮುಖ್ಯವಾಗಿ ಕರ್ನಾಟಕದ ಒಟ್ಟು ಜನಸಂಖ್ಯೆಯ 17 ರಿಂದ 20 ಶೇಕಡಾದಷ್ಟಿರುವ ಬೆಂಗಳೂರಿನ ವಿಚಾರದಲ್ಲಾದರೂ ಮುಖ್ಯಮಂತ್ರಿ ಅಧಿಕಾರದ ಹೊರೆಯನ್ನು ಹಂಚಬೇಕಿದೆ.