ಬಿಹಾರ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಧಾನಸಭೆಯ ಒಟ್ಟು 243 ಸ್ಥಾನಗಳ ಪೈಕಿ, ನ.28ರಂದು ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ 71 ಕ್ಷೇತ್ರಗಳಿಗೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹಾಗಾಗಿ ಸೋಮವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗುವ ಆ 71 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಮುಖ ಮೂರೂ ಬಣಗಳ ಸ್ಟಾರ್ ಪ್ರಚಾರಕರು ಸೇರಿದಂತೆ ಘಟಾನುಘಟಿ ನಾಯಕರು ಬಿಡುವಿರದ ಪ್ರಚಾರ ಸಭೆಗಳ ಮೂಲಕ ಕೊನೇ ಕ್ಷಣದಲ್ಲಿ ಮತದಾರನ ಮನಸೆಳೆಯುವ ಭರ್ಜರಿ ಪ್ರಯತ್ನ ನಡೆಸಿದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತೀರಾ ಇತ್ತೀಚಿನವರೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಯ ಪ್ರಬಲ ಮೈತ್ರಿಕೂಟ ಎನ್ ಡಿಎ ಈ ಬಾರಿ ಕೂಡ ಎಲ್ಲಾ ಅಡ್ಡಿಆತಂಕಗಳ ನಡುವೆಯೂ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂದೇ ಸಮೀಕ್ಷೆಗಳು ಹೇಳುತ್ತಿದ್ದವು. ಪ್ರಮುಖವಾಗಿ ಮೋದಿಯವರ ಜನಪ್ರಿಯತೆ ಮತ್ತು ನಿತೀಶ್ ಕುಮಾರ್ ಅವರ ಒಂದೂವರೆ ದಶಕದ ಆಡಳಿತದ ಮೇಲೆ, ಹಲವು ವ್ಯತಿರಿಕ್ತ ಸವಾಲುಗಳ ನಡುವೆಯೂ ಜಯದ ದಡ ತಲುಪುತ್ತಾರೆ ಎಂದೇ ಹೇಳಲಾಗುತ್ತಿತ್ತು. ಕರೋನಾ ಲಾಕ್ ಡೌನ್ ನಡುವೆ ಇಡೀ ದೇಶದಲ್ಲಿಯೇ ಅತ್ಯಂತ ಹೀನಾಯ ಪರಿಸ್ಥಿತಿಯನ್ನು ಎದುರಿಸಿದ ಬಿಹಾರದ ವಲಸೆ ಕಾರ್ಮಿಕರ ಹಿಂದೆಂದೂ ಕಂಡರಿಯದ ಸಂಕಷ್ಟದ ಹೊತ್ತಲ್ಲಿ ಅವರ ನೆರವಿಗೆ ಬರುವ ಯಾವ ಯತ್ನವನ್ನೂ ಮಾಡದೇ ಉಳಿದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ನಡೆ, ಏಕ ಕಾಲಕ್ಕೆ ಬಡವರ ಕಷ್ಟದ ಬಗ್ಗೆ ಆಡಳಿತಕ್ಕಿರುವ ಹೊಣೆಗೇಡಿತನವನ್ನೂ ಮತ್ತು ಹದಿನೈದು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ಸಿಎಂ ಆದ ನಿತೀಶ್ ಸೇರಿದಂತೆ ಆ ರಾಜ್ಯವನ್ನು ಆಳಿದ ನಾಯಕರ ವೈಫಲ್ಯಗಳನ್ನು ಎತ್ತಿ ತೋರಿಸಿತ್ತು.
ಹಾಗಾಗಿ ಸಹಜವಾಗೇ ಈ ವೈಫಲ್ಯವೇ ಈಗ ಚುನಾವಣಾ ವಿಷಯ. ಬಿಹಾರಿಗಳ ನಿರುದ್ಯೋಗ, ವಲಸೆ, ಬಡತನವೇ ಸದ್ಯಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಚುನಾವಣಾ ವಾಗ್ವಾದ. ಆದರೆ, ಮೋದಿಯವರ ವರ್ಚಸ್ಸು ಮತ್ತು ನಿತೀಶ್ ಅನುಭವೀ ರಾಜಕಾರಣದ ತಂತ್ರಗಾರಿಕೆಗಳು ಈ ಜ್ವಲಂತ ವಿಷಯಗಳನ್ನೂ ಮರೆಮಾಚಿ ಜನರ ಮತ ಬಾಚಲಿವೆ ಎಂದೇ ಹೇಳಲಾಗುತ್ತಿತ್ತು.
Also Read: ಬಿಹಾರ ಚುನಾವಣಾ ಪ್ರಚಾರದ ವಿಷಯವಾದ ಈರುಳ್ಳಿ ದರ ಏರಿಕೆ
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಕಳೆದ ವಾರದಿಂದೀಚೆಗೆ ಬಿಹಾರದ ಕದನ ಕಣದಲ್ಲಿ ಹೊಸ ಗಾಳಿ ಬೀಸತೊಡಗಿದೆ. ಒಂದು ಕಡೆ ಆರ್ ಜೆಡಿಯ ಜ್ಯೂನಿಯರ್ ಲಾಲೂ ತೇಜಸ್ವಿ ಯಾದವ್, ತಮ್ಮ ವಿಶಿಷ್ಟ ರಾಜಕೀಯ ಪರಿಭಾಷೆ ಮತ್ತು ತಂತ್ರಗಾರಿಕೆಯ ಮೂಲಕ ದಿಢೀರನೇ ಚುನಾವಣಾ ಪ್ರಚಾರಾಂದೋಲನದ ಕೇಂದ್ರಬಿಂದುವಾಗಿದ್ದಾರೆ. ಮತ್ತೊಂದು ಕಡೆ ದೆಹಲಿ ಮಟ್ಟದಲ್ಲಿ ಎನ್ ಡಿಎ ಮೈತ್ರಿಯಲ್ಲಿ ಮುಂದುವರಿದಿದ್ದರೂ ರಾಜ್ಯ ಮಟ್ಟದಲ್ಲಿ ನಿತೀಶ್ ಕುಮಾರ್ ವಿರುದ್ಧ ಭರ್ಜರಿ ಸಮರ ಸಾರಿರುವ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಐದನೇ ಬಾರಿ ಮುಖ್ಯಮಂತ್ರಿಯಾಗುವ ನಿತೀಶ್ ಕನಸಿಗೆ ಕೊಳ್ಳಿ ಇಡುತ್ತಿದ್ದಾರೆ.
ವಾಸ್ತವವಾಗಿ ಬಿಹಾರದ ಚುನಾವಣಾ ಕಣದಲ್ಲಿ ಕಳೆದ ಒಂದು ವಾರದಿಂದ ಇಡೀ ಪ್ರಚಾರ ವಾಗ್ವಾದದ ದಿಕ್ಕುದೆಸೆಯನ್ನು ನಿರ್ಧರಿಸುತ್ತಿರುವುದೇ ತೇಜಸ್ವಿ ಯಾದವ್ ಎಂದು ವರದಿಗಳು ಹೇಳುತ್ತಿವೆ. ಅದು ನಿರುದ್ಯೋಗ ಇರಬಹುದು, ಬಡತನವಿರಬಹುದು, ಉದ್ಯೋಗ ಸೃಷ್ಟಿಯ ಭರವಸೆ ಇರಬಹುದು, ಕರೋನಾ ಲಾಕ್ ಡೌನ್ ಮತ್ತು ಅದು ಸೃಷ್ಟಿಸಿದ ಅನಾಹುತಗಳಿರಬಹುದು,.. ಚುನಾವಣಾ ಕಣದಲ್ಲಿ ಮಾರ್ದನಿಸುತ್ತಿರುವ ಎಲ್ಲಾ ಜ್ವಲಂತ ವಿಷಯಗಳನ್ನು ರಾಜ್ಯ ಮತ್ತು ಕೇಂದ್ರ ನಾಯಕತ್ವಗಳ ವೈಫಲ್ಯದ ಮಹಾನ್ ನಿದರ್ಶನಗಳಾಗಿ ಜನರ ಮುಂದಿಡುತ್ತಿರುವುದು ತೇಜಸ್ವಿ ಯಾದವ್. ಸವಾಲುಗಳ ಮೇಲೆ ಸವಾಲು ಎಸೆಯುತ್ತಿರುವ ತೇಜಸ್ವಿ ಅವರ ಬಿಹಾರಿ ಶೈಲಿಯ ಮಾತುಗಾರಿಕೆ, ಆ ಕ್ಷಣದಲ್ಲೇ ಎದುರಿನ ಜನಸಮೂಹದೊಂದಿಗೆ ತಮ್ಮನ್ನು ತಾವು ಬೆಸೆದುಕೊಳ್ಳುವ ತಮ್ಮ ತಂದೆ ಲಾಲೂ ಪ್ರಸಾದ್ ರಿಂದ ಬಳುವಳಿಯಾಗಿ ಪಡೆದಿರುವಂತಹ ವಿಶಿಷ್ಟ ಮಾತುಗಾರಿಕೆಯ ವರಸೆ, ದಿಟ್ಟ ಮತ್ತು ನಿರ್ಭೀತಿಯ ಪ್ರಶ್ನೆಗಳನ್ನು ಎತ್ತುವ ರೀತಿ,.. ಎಲ್ಲವೂ ಮತದಾರರ ಸಮೂಹದ ನಡುವೆ ತೇಜಸ್ವಿಗೆ ದೊಡ್ಡ ಮಟ್ಟದ ಬೆಂಬಲ ದಕ್ಕಿಸಿಕೊಟ್ಟಿವೆ. ಹಾಗಾಗಿಯೇ ಕಳೆದ ಒಂದು ವಾರದಿಂದ ತೇಜಸ್ವಿ ಯಾದವ್ ರ್ಯಾಲಿಗಳಲ್ಲಿ ಕಿಕ್ಕಿರಿಯುತ್ತಿರುವ ಭಾರೀ ಜನಜಂಗುಳಿ, ಸಹಜವಾಗೇ ಆಡಳಿತರೂಢ ಎನ್ ಡಿಎ ಮೈತ್ರಿಯಲ್ಲಿ ದೊಡ್ಡ ಮಟ್ಟದ ಗಲಿಬಿಲಿಗೆ ಕಾರಣವಾಗಿದೆ.
Also Read: ಟೀಕೆಗೆ ಗುರಿಯಾದ ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ; ತೇಪೆ ಹಚ್ಚಲು ಮುಂದಾದ ಕೇಂದ್ರ ಸಚಿವ
ನಿರಾಯಾಸ ಗೆಲುವಿನ ವಾತಾವರಣ ತಮ್ಮ ಕೈಮೀರಿ ಹೋಗಿದೆ ಎಂಬುದನ್ನು ಅರಿತಿರುವ ಬಿಜೆಪಿ ಮತ್ತು ಜೆಡಿಯು ಮೈತ್ರಿ, ಅಂತಹ ಆತಂಕದ ನಡುವೆ ಉಚಿತ ಕರೋನಾ ಚುಚ್ಚುಮುದ್ದು ನೀಡುವಂತಹ ತೀರಾ ವಿವಾದಾಸ್ಪದ ಭರವಸೆಯನ್ನು ತಮ್ಮ ಪ್ರಣಾಳಿಕೆಯ ಪ್ರಮುಖ ಅಂಶವಾಗಿ ಅಳವಡಿಸಿಕೊಂಡಿವೆ. ಜೊತೆಗೆ ಬಿಹಾರದ ನಿರುದ್ಯೋಗ ಮತ್ತು ಬಡತನ ನಿವಾರಣೆಯ ನಿಟ್ಟಿನಲ್ಲಿ ಒಂದೂವರೆ ದಶಕದ ನಿತೀಶ್ ಆಡಳಿತದ ವೈಫಲ್ಯವನ್ನು ಮತ್ತು ಲಾಕ್ ಡೌನ್ ನಡುವೆ ಬರೋಬ್ಬರಿ 30 ಲಕ್ಷ ವಲಸೆ ಕಾರ್ಮಿಕರು ನಿರಾಶ್ರಿತರಾದಾಗ ನಿತೀಶ್ ಅವರ ನೆರವಿಗೆ ಧಾವಿಸದೆ ಅವರನ್ನು ರಾಜ್ಯದ ಒಳಬಿಟ್ಟುಕೊಳ್ಳಲು ಮೀನಾಮೇಷ ಎಣಿಸಿದ ಜನವಿರೋಧಿ ನೀತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿರುವ ತೇಜಸ್ವಿ ಯಾದವ್ ಅವರ ಪ್ರಚಾರದಿಂದ ಆಗುತ್ತಿರುವ ಮುಜಗರದಿಂದ ತಪ್ಪಿಸಿಕೊಳ್ಳಲು ಉದ್ಯೋಗ ಸೃಷ್ಟಿಯ ಹೊಸ ಭರವಸೆ ನೀಡತೊಡಗಿದೆ.
ತಾವು ಆಯ್ಕೆಯಾಗಿ ಸರ್ಕಾರ ರಚಿಸಿದ್ದಲ್ಲಿ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಬರೋಬ್ಬರಿ 10 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕ ಕ್ರಮಗಳಿಗೆ ಸಹಿ ಮಾಡುವುದಾಗಿ ತೇಜಸ್ವಿ ಯಾದವ್ ಪ್ರತಿ ಸಭೆಯಲ್ಲೂ ಪುನರುಚ್ಛರಿಸುತ್ತಿರುವುದು ಬಿಹಾರದ ಬಡ ನಿರುದ್ಯೋಗಿಗಳಲ್ಲಿ, ವಲಸೆ ಕಾರ್ಮಿಕರಲ್ಲಿ ಮತ್ತು ಮುಖ್ಯವಾಗಿ ಯುವ ಸಮುದಾಯದಲ್ಲಿ ಅವರ ಪರ ದೊಡ್ಡಅಲೆ ಎಬ್ಬಿಸಿದೆ. ತೇಜಸ್ವಿಯ ಈ ಭರವಸೆ ಮತದಾರರ ನಡುವೆ ಹುಟ್ಟಿಸುತ್ತಿರುವ ಭಾರೀ ಬೆಂಬಲ ಮತ್ತು ಹುಮ್ಮಸ್ಸನ್ನು ಕಂಡು ಬೆಚ್ಚಿರುವ ಆಡಳಿತ ಮೈತ್ರಿ, ತಾನೂ ಅದೇ ರಾಗ ಹಾಡತೊಡಗಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 19 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿ ಮತ್ತು ಜೆಡಿಯು ಹೇಳತೊಡಗಿವೆ.
Also Read: ಬಿಹಾರ ಚುನಾವಣಾ ಕಣದಲ್ಲಿ ʼರಾವಣʼನ ಪ್ರವೇಶ: ದಲಿತ ರಾಜಕಾರಣದಲ್ಲಿ ಸಂಚಲನ
ಕೇವಲ ನಿರುದ್ಯೋಗದ ವಿಷಯ ಮಾತ್ರವಲ್ಲದೆ, ಈ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿರುವ ಬಹುತೇಕ ಎಲ್ಲಾ ವಿಷಯಗಳನ್ನು ಚುನಾವಣಾ ವಿಷಯವಾಗಿ ಮುಂಚೂಣಿಗೆ ತರುತ್ತಿರುವುದು ತೇಜಸ್ವಿ ಯಾದವ್. ಜ್ವಲಂತ ವಿಷಯಗಳನ್ನು ಹೆಕ್ಕಿಹೆಕ್ಕಿ ಪ್ರತಿ ರ್ಯಾಲಿಗಳಲ್ಲೂ ಅವುಗಳನ್ನೇ ಮುಂದಿಟ್ಟುಕೊಂಡು ನಿತೀಶ್ ಕುಮಾರ್ ಅವರಿಗೆ ಸವಾಲು ಎಸೆಯುವ, ಬಹಿರಂಗ ಚರ್ಚೆಗೆ ಆಹ್ವಾನಿಸುವ ತೇಜಸ್ವಿಯ ಹೊಸ ವರಸೆ, ಈವರೆಗೆ ಜನತೆ ಅವರಲ್ಲಿ ಕಾಣದೇ ಇದ್ದ ಹೊಸ ನಾಯಕನನ್ನು ಕಾಣಿಸತೊಡಗಿದೆ. ಇದು ಬಿಜೆಪಿ ಮತ್ತು ಜೆಡಿಯು ಪಾಳೆಯದಲ್ಲಿ ಚಿಂತೆಗೀಡುಮಾಡಿದೆ.
ಹಾಗಾಗಿ ಒಂದು ಕಡೆ ತೇಜಸ್ವಿ ರ್ಯಾಲಿಗಳಲ್ಲಿ ಅನಿರೀಕ್ಷಿತ ಮಟ್ಟದ ಬೃಹತ್ ಜನಜಾತ್ರೆ ನೆರೆಯುತ್ತಿದ್ದರೆ, ನಿತೀಶ್ ಕುಮಾರ್ ಮತ್ತು ಸ್ವತಃ ಮೋದಿಯವರ ರ್ಯಾಲಿಗಳಿಗೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಸೇರಿಸಲು ಆಡಳಿತ ಮೈತ್ರಿ ಏದುಸಿರುಬಿಡತೊಡಗಿದೆ. ವಾಸ್ತವವಾಗಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿತೀಶ್ ಕುಮಾರ್ ಅವರ ಈ ಹಿಂದಿನ ಮಾಂತ್ರಿಕತೆ ಈ ಬಾರಿ ಹಠಾತ್ ಕಳಚಿಬಿದ್ದಂತಾಗಿದೆ. ಒಂದೂವರೆ ದಶಕದ ನಿರಂತರ ಅಧಿಕಾರದ ಜಡ್ಡುಗಟ್ಟಿದ ಸ್ಥಿತಿ ಮತ್ತು ತಳಮಟ್ಟದಲ್ಲಿ ಹೆಚ್ಚಿನ ಬದಲಾವಣೆ ತರುವಲ್ಲಿ ಯಶಸ್ವಿಯಾಗದ ಆಡಳಿತದ ವಿರುದ್ಧದ ಆಡಳಿತ ವಿರೋಧಿ ಅಲೆಗೆ ಲಾಕ್ ಡೌನ್ ಮತ್ತು ಅದು ತಂದ ವಲಸೆ ಕಾರ್ಮಿಕರ ಸಂಕಷ್ಟ ದೊಡ್ಡಮಟ್ಟದಲ್ಲಿ ತಿದಿಯೊತ್ತಿದೆ. ಹಾಗಾಗಿ ಸ್ವತಃ ಮೋದಿಯವರ ರ್ಯಾಲಿಗಳಿಗೂ ಜನರನ್ನು ಸೇರಿಸುವುದು ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಎಂದಿನಂತೆ ಬಿಜೆಪಿ ಪರ ಟ್ರೋಲ್ ಪಡೆಗಳು, ಹಳೆಯ ರ್ಯಾಲಿಗಳ ವೀಡಿಯೋಗಳನ್ನು ಈಗಿನ ಚುನಾವಣಾ ರ್ಯಾಲಿ ಜನಸಮೂಹವೇ ಎಂದು ಬಿಂಬಿಸುವ ನಾಚಿಕೆಗೇಡಿನ ವರಸೆಗೆ ಶರಣಾಗಿವೆ. ಯೋಗಿ ಆದಿತ್ಯನಾಥರ ರ್ಯಾಲಿಯಲ್ಲಿ ಭಾರೀ ಜನ ಸೇರಿದ್ದಾಗಿ ಬಿಂಬಿಸಲು ಮೂರು ವರ್ಷ ಹಳೆಯ ಉತ್ತರಪ್ರದೇಶದ ಚುನಾವಣಾ ರ್ಯಾಲಿಯ ವೀಡಿಯೋ ಬಳಸಿರುವುದು ಫ್ಯಾಕ್ಟ್ ಚೆಕ್ ವೇಳೆ ಬಹಿರಂಗವಾಗಿದೆ.
Also Read: ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?
ಇನ್ನು ಚಿರಾಗ್ ಪಾಸ್ವಾನ್ ಕೂಡ ಚುನಾವಣಾ ಕಣದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಪ್ರಮುಖವಾಗಿ ನಿತೀಶ್ ಕುಮಾರ್ ಅವರ ಆಡಳಿತದ ವೈಫಲ್ಯಗಳು, ಭ್ರಷ್ಟಾಚಾರ, ಜನವಿರೋಧಿ ವರಸೆಗಳನ್ನೇ ಚಿರಾಗ್ ತಮ್ಮ ಚುನಾವಣಾ ಭಾಷಣಗಳ ಸರಕಾಗಿಸಿಕೊಂಡಿದ್ದಾರೆ. ಒಂದು ಕಡೆ ತಮ್ಮ ಎದೆ ಬಗೆದರೆ ಅಲ್ಲಿ ಮೋದಿ ಕಾಣಿಸುತ್ತಾರೆ ಎನ್ನುತ್ತಿರುವ ಚಿರಾಗ್, ಮತ್ತೊಂದು ಕಡೆ ಮೋದಿಯವರು ಕೈಜೋಡಿಸಿರುವ ನಿತೀಶ್ ಕುಮಾರ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಈ ಜಟಿಲ ವರಸೆ ಚಿರಾಗ್ ಅವರಿಗೆ ಕಣದಲ್ಲಿ ಎಷ್ಟು ಲಾಭ ತಂದುಕೊಡಲಿದೆ ಎಂಬುದನ್ನು ಫಲಿತಾಂಶವೇ ನಿರ್ಧರಿಸಲಿದೆ. ಆದರೆ, ಇಂತಹ ವರಸೆ ಚಿರಾಗ್ ಲಾಭ ತಂದುಕೊಡದೇ ಹೋದರೂ, ನಿತೀಶ್ ಅವರಿಗೆ ಖಂಡಿತವಾಗಿಯೂ ನಷ್ಟ ಉಂಟುಮಾಡಲಿದೆ ಎಂಬುದನ್ನು ರಾಜಕೀಯ ಪಂಡಿತರೂ ಈಗಾಗಲೇ ನಿಖರವಾಗಿ ಊಹಿಸತೊಡಗಿದ್ದಾರೆ. ವಿಚಿತ್ರವೆಂದರೆ, ಜೆಡಿಯು ಅಭ್ಯರ್ಥಿಗಳಿಗೆ ಚಿರಾಗ್ ಅವರ ಎಲ್ ಜೆಪಿ ನೀಡುವ ಪೆಟ್ಟು, ಅಂತಿಮವಾಗಿ ಮೋದಿಯವರ ಬಿಜೆಪಿಯನ್ನು ಬಲಪಡಿಸಲಿದೆ. ಅಂತಿಮವಾಗಿ ಮೈತ್ರಿಯ ಅತಿ ಹೆಚ್ಚು ಸ್ಥಾನ ಪಡೆವ ಅವಕಾಶ ಬಿಜೆಪಿಗೆ ಸಿಗಲಿದ್ದು, ಒಂದು ವೇಳೆ ಅತಿದೊಡ್ಡ ಮೈತ್ರಿಯಾಗಿ ಮತ್ತೆ ಎನ್ ಡಿಎ ಹೊರಹೊಮ್ಮಿದರೆ ಆಗ ಬಿಜೆಪಿ ಮತ್ತು ಚಿರಾಗ್ ಉರುಳಿಸುವ ದಾಳ ನಿತೀಶ್ ಕುಮಾರ್ ಗೆ ಎಷ್ಟರಮಟ್ಟಿಗೆ ದುಬಾರಿಯಾಗಲಿದೆ ಎಂಬುದು ಈಗ ಉಳಿದಿರುವ ಕುತೂಹಲ!
ಹಾಗಾಗಿ ಸದ್ಯ ಒಂದು ಕಡೆ; ತೇಜಸ್ವಿ ಯಾದವ್ ಇಡೀ ಚುನಾವಣೆಯ ವಾಗ್ವಾದವನ್ನು ನಿರ್ಧರಿಸುವ ಮೂಲಕ ಬಿಹಾರದ ಕಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ದರೆ, ಮತ್ತೊಂದು ಕಡೆ ಮತ್ತೊಬ್ಬ ಯುವ ನಾಯಕ ಚಿರಾಗ್ ಪಾಸ್ವಾನ್ ತನ್ನ ನಿಗೂಢ ನಡೆಯ ಮೂಲಕ ಆಡಳಿತ ಮೈತ್ರಿಯ ಒಳಗೇ ಸುಳಿಗಾಳಿ ಎಬ್ಬಿಸಿದ್ದಾರೆ. ಈ ಇಬ್ಬರು ಎರಡನೇ ತಲೆಮಾರಿನ ನಾಯಕರ ನಡುವೆ ಸಿಕ್ಕು, ನಿತೀಶ್ ಕುಮಾರ್ ತರಗೆಲೆಯಾಗುವರೋ ಅಥವಾ ಇನ್ನಷ್ಟು ಬಲಿಷ್ಟ ಬೇರುಗಳನ್ನು ಚಾಚುವರೋ ಎಂಬುದನ್ನು ಕಾದುನೋಡಬೇಕಿದೆ.