ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಬಳಿಕ ಭಾರತದಂತಹ ಬೃಹತ್ ಅರ್ಥ ವ್ಯವಸ್ಥೆಯ ಎಲ್ಲಾ ಆಯಾಮಗಳನ್ನು ಅರೆದುಕುಡಿದು ದೇಶದ ಆರ್ಥಿಕತೆಯನ್ನು ಜತನದಿಂದ ಕಾಪಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ. ರಘುರಾಮ್ ರಾಜನ್ ಮತ್ತೊಮ್ಮೆ ಜಗತ್ತಿನ ಜಂಘಾಬಲವನ್ನೇ ಅಡಗಿಸಿರುವ ಕರೋನಾವನ್ನು ಮತ್ತು ದೇಶದ ಪ್ರತಿಪ್ರಜೆಯನ್ನೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪರಿಪರಿಯಾಗಿ ಕಾಡುತ್ತಿರುವ ಲಾಕ್ಡೌನ್ ಅನ್ನು ನಿಭಾಯಿಸುವುದು ಹೇಗೆಂದು ಕೇಂದ್ರ ಸರ್ಕಾರಕ್ಕೆ ಬಹಳ ಮಹತ್ವದ ಮತ್ತು ಮೌಲಿಕ ಸಲಹೆಗಳನ್ನು ನೀಡಿದ್ದಾರೆ.
ಆರ್ಥಿಕ ತಜ್ಞರು ‘ಕರೋನೋತ್ತರ ಜಗತ್ತು ಅತಿ ಶ್ರೀಮಂತರನ್ನು ಶ್ರೀಮಂತರನ್ನಾಗಿ, ಶ್ರೀಮಂತರನ್ನು ಮಧ್ಯಮ ವರ್ಗದವರನ್ನಾಗಿ, ಮಧ್ಯಮ ವರ್ಗದವರನ್ನು ಬಡವರನ್ನಾಗಿ, ಬಡವರನ್ನು ಕಡುಬಡವರನ್ನಾಗಿ ಬದಲಿಸಲಿದೆ’ ಎಂಬ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಕ್ರೂರಿ ಕರೋನಾ ಹೆಚ್ಚಾಗಿ ಕಾಡುವುದು ಬಡವರನ್ನು ಎಂಬ ಮಾತನ್ನೂ ಹೇಳಿದ್ದಾರೆ. ಈ ಬಡವರ ಬಗ್ಗೆ ಡಾ. ರಘುರಾಮ್ ರಾಜನ್ ಮಾತನ್ನಾಡಿದ್ದಾರೆ. ಹಿಂದೆ ರಾಷ್ಟ್ರೀಯ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಡಾ. ರಘುರಾಮ್ ರಾಜನ್, ‘ಕರೋನಾ ಕಷ್ಟಕ್ಕೆ ಕೋಮು ಬಣ್ಣ ಬಳಿಯಬೇಡಿ’ ಎಂಬ ಸಲಹೆ ನೀಡಿದ್ದರು. ಈಗ ಕೇಂದ್ರ ಸರ್ಕಾರಕ್ಕೆ ‘ಬಡವರನ್ನು ಕೈಬಿಡಬೇಡಿ’ ಎಂಬ ಕಳಕಳಿಯ ಮನವಿ ಮಾಡಿದ್ದಾರೆ.

ರಘುರಾಮ್ ರಾಜನ್ ಮಾತನಾಡಿರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂದರ್ಶನದಲ್ಲಿ. ರಾಹುಲ್ ಗಾಂಧಿ ಆರಂಭಿಸಿರುವ ವಿವಿಧ ಕ್ಷೇತ್ರಗಳ ತಜ್ಞರ ಸಂದರ್ಶನಗಳ ವಿಡಿಯೋ ಸರಣಿಯ ಚೊಚ್ಚಲ ಸಂದರ್ಶನದಲ್ಲಿ. ವಿಶೇಷವಾಗಿ ಬಡವರ ಬಗ್ಗೆ ಹೇಳಿರುವ ಡಾ. ರಘುರಾಮ್ ರಾಜನ್, ಅದರೊಟ್ಟಿಗೆ ಇನ್ನೊಂದಿಷ್ಟು ಸಂಗತಿಗಳಿಗೂ ಒತ್ತು ನೀಡಿದ್ದಾರೆ. ಕರೋನಾ ಸದ್ಯ ಸಹಿಸಲಾರದ ಕಷ್ಟ ಎನ್ನುವುದು ನಿಜ, ಆದರೆ ಇದಾದ ಮೇಲೆ ಎಲ್ಲಾ ಮುಗಿದೇಹೋಯಿತು ಎಂಬ ಸ್ಥಿತಿಯೇನೂ ಬಂದೊದಗುವುದಿಲ್ಲ. ಬಹಳ ಎಚ್ಚರಿಕೆಯಿಂದ, ದೂರದೃಷ್ಟಿಯಿಂದ ಅಡಿ ಇಟ್ಟಿದ್ದೇಯಾದರೆ ಬೇರೆಯದೇ ರೀತಿಯ ಅವಕಾಶಗಳು ಹುಟ್ಟಿಕೊಳ್ಳುತ್ತವೆ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ.
ದೇಶದಲ್ಲಿ ಸಂಪತ್ತಿಗೆ ಕೊರತೆ ಇಲ್ಲ. ಮಾನವ ಸಂಪನ್ಮೂಲಕ್ಕೂ ಕೊರತೆ ಇಲ್ಲ. ಇದರಿಂದ ಕರೋನೋತ್ತರದಲ್ಲಿ ಅವಕಾಶಗಳು ಭಾರತದೆಡೆಗೆ ಹುಡುಕಿಕೊಂಡು ಬರುತ್ತವೆ ಎಂಬುದು ಅವರು ಹೊಡೆದು ಹೇಳದಿರುವ ಸಂಗತಿ. ಆದರೆ ಮಾನವ ಸಂಪನ್ಮೂಲ ಎಂದರೆ ಬಹುತೇಕ ಅದು ಈ ದೇಶದ ದೊಡ್ಡ ವರ್ಗವಾಗಿರುವ ಬಡವರೇ ಎನ್ನುವುದು ಬಿಡಿಸಿ ಹೇಳದೇ ಇದ್ದರೂ ಅರ್ಥವಾಗುವ ವಿಷಯ. ಇದೇ ಅರ್ಥದಲ್ಲಿ ಅವರು ಕರೋನಾ ಕಾರಣಕ್ಕೆ ಉಂಟಾಗಿರುವ ಕಡುಕಷ್ಟದ ಸಂದರ್ಭದಲ್ಲಿ ಬಡವರನ್ನು ಸಾಯಲು ಬಿಡಬಾರದೆಂದು ಹೇಳಿದ್ದಾರೆ. ಬಡವರು ಈ ದುರ್ದಿನಗಳಿಂದ ಬಚಾವಾಗಲು 65,000 ಕೋಟಿ ರೂಪಾಯಿಗಳ ವಿಶೇಷ ನೆರವು ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಂತಹ ಬೃಹತ್ ಆರ್ಥಿಕತೆಗೆ ಬಡವರಿಗೆಂದು 65,000 ಕೋಟಿ ರೂಪಾಯಿ ಕೊಡುವುದು ಭಾರವಾಗುವ ವಿಷಯವಲ್ಲ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದ ರಘುರಾಮ್ ರಾಜನ್ ಅವರಿಗೆ ಚೆನ್ನಾಗಿ ಗೊತ್ತಿದೆ. ಅದರಲ್ಲೂ ನೀರವ್ ಮೋದಿ, ಮೆಹುಲ್ ಚೋಕ್ಸಿ, ಬಾಬಾ ರಾಮದೇವ್ ಅವರಂತಹ ಇಚ್ಚಾವರ್ತಿ ಸುಸ್ತಿದಾರರ 68,607 ಕೋಟಿ ರುಪಾಯಿ ಸಾಲ ಮನ್ನಾ ಮಾಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಬಡವರು ಹಸಿವಿನಿಂದ ಸಾಯುವುದನ್ನು ತಪ್ಪಿಸಲು 65,000 ಕೋಟಿ ರೂಪಾಯಿ ಕೊಟ್ಟರೆ ತಪ್ಪಾಗುವುದಿಲ್ಲ ಎಂಬುದೂ ಗೊತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಬಡವರೇ ಮಾನವ ಸಂಪನ್ಮೂಲವಾಗಿರುವುದರಿಂದ, ಈ ಮಾನವ ಸಂಪನ್ಮೂಲದ ಕಾರಣದಿಂದಲೇ ಮುಂದೆ ಭಾರತಕ್ಕೆ ಅವಕಾಶಗಳು ಹುಡುಕಿಕೊಂಡು ಬರುವುದರಿಂದ, ಇಂಥ ಅವಕಾಶಗಳಿಂದಲೇ ದೇಶದ ಉದ್ಯಮ ಕ್ಷೇತ್ರಕ್ಕೆ, ತೆರಿಗೆ ಬೆಳವಣಿಗೆಗೆ, ಉತ್ಪಾದನಾ ಸಾಮರ್ಥ್ಯಕ್ಕೆ, ಕೊಳ್ಳುವ ಸಾಮರ್ಥ್ಯಕ್ಕೆ ಬಲ ಬರಲಿದೆ. ಈ ಬಡವರಿಲ್ಲದೆ ಭಾರತ ಇಲ್ಲ ಎಂಬುದು ಕರೋನಾದಂತಹ ಕಂಡುಕೇಳರಿಯದ ಪರಿಸ್ಥಿತಿಯಲ್ಲೂ ಸಾಬೀತಾಗಿದೆ.
ಅದರಿಂದಾಗಿ ಬಡವರನ್ನು ಸಾಯಲು ಬಿಡಬೇಡಿ. ಬಿಡಿಗಾಸು ನೀಡಿ. ಅವರು ಬಿಡಿಗಾಸನ್ನುಂಡು ಭಾರತದ ಬುಡವನ್ನು ಭದ್ರಮಾಡಲಿದ್ದಾರೆ ಎಂಬ ಸಲಹೆ ನೀಡಿದ್ದಾರೆ ರಘುರಾಮ್ ರಾಜನ್. ಇದು ರಘುರಾಮ್ ರಾಜನ್ ಅವರ ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ. ಕರೋನಾ ಕಂಟಕದಿಂದ ಪಾರಾಗಲು ಕೈಗೊಳ್ಳಬೇಕಾದ ಮುಂದಾಲೋಚನಾ ಕ್ರಮವನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ ರಘುರಾಮ್ ರಾಜನ್.
ಇದರೊಂದಿಗೆ ಲಾಕ್ಡೌನ್ ಮಾಡಿದ್ದು ಸಾಕು ಎಂಬ ಪರೋಕ್ಷ ಸಲಹೆಯನ್ನೂ ನೀಡಿದ್ದಾರೆ. ಅದು ಕೂಡ ಲಾಕ್ಡೌನ್ ಅನ್ನು ಮುಂದುವರೆಸಿದರೆ ವಲಸೆ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಹೊರೆಯಾಗಲಿದೆ, ಬಡವರಿಗೆ ಹೊರೆಯಾದರೆ ದೇಶಕ್ಕೆ ಭಾರವಾಗಲಿದೆ ಎಂದೇ.
ರಘುರಾಮ್ ರಾಜನ್, ಭಾರತ ಜಾಗತಿಕ ಆರ್ಥಿಕತೆ ಬಗ್ಗೆಯೂ ಪುನರ್ವಿಮರ್ಶೆ ಮಾಡಬೇಕು, ಜಾಗತಿಕ ಆರ್ಥಿಕತೆಯ ಪುನರ್ವಿಮರ್ಶೆ ಬಗ್ಗೆ ಸಮಾಲೋಚನೆ ನಡೆಸಲು ಭಾರತ ವೇದಿಕೆ ಒದಗಿಸಬೇಕು ಎಂಬ ಬಹಳ ಮುಖ್ಯವಾದ ಇನ್ನೊಂದು ಸಲಹೆ ನೀಡಿದ್ದಾರೆ. ಕರೋನೋತ್ತರ ಜಗತ್ತಿನಲ್ಲಿ ಯಾವ ದೇಶದ ಸ್ಥಿತಿ ಯಾವ ರೀತಿ ಇರುತ್ತದೆ? ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಸ್ಥಿತ್ಯಂತರ ಆಗುವುದಂತೂ ಖರೇ. ಆ ಸ್ಥಿತ್ಯಂತರದ ಸಂಕ್ರಮಣದ ಕಾಲಘಟ್ಟದಲ್ಲಿ ಜಗತ್ತನ್ನು ಮುನ್ನಡೆಸುವ ಮಟ್ಟಕ್ಕೆ ಭಾರತ ಬೆಳೆಯಬಹುದೆಂಬುದು ರಘುರಾಮ್ ರಾಜನ್ ಅವರ ಅಂದಾಜು. ಕೆಲವೊಮ್ಮೆ ಸಂದಿಗ್ಧತೆಗಳು ಅವಕಾಶವನ್ನು ಸೃಷ್ಟಿಸುತ್ತವೆ. ಸಮಸ್ಯೆಗಳು ಸಾಧನೆಗೈಯುವಂತೆ ಪ್ರೇರೇಪಿಸುತ್ತವೆ ಎಂಬುದು ಹಿಂದೆ ಹಲವು ಬಾರಿ ಹಲವು ವಿಷಯಗಳಲ್ಲಿ ಸಾಬೀತಾಗಿದೆ. ಕರೋನಾ ಕಷ್ಟ ಕರಗಿದ ಮೇಲೆ ಬೆಳಕು ಬರಲೇಬೇಕು. ಅದು ಭಾರತದ ಮೂಲಕ, ಭಾರತದ ಬಡವರ ಮೂಲಕ ಎನ್ನುವುದು ರಘುರಾಮ್ ರಾಜನ್ ಅವರ ಪ್ರತಿಪಾದನೆ.






