ದೇಶದ ಆರ್ಥಿಕತೆ ದಯನೀಯ ಸ್ಥಿತಿಗೆ ತಲುಪಿರುವುದಕ್ಕೆ ‘ಕರೋನಾ ಸೋಂಕು’ ಕಾರಣ ಎಂದು ಪ್ರಚಾರ ಮಾಡುತ್ತಾ, ಲಾಕ್ಡೌನ್ ಮುಗಿದ ನಂತರ ದೇಶದ ಆರ್ಥಿಕತೆ ಸರಿದಾರಿಗೆ ಬರಲಿದೆ ಎಂದು ಜನತೆಯನ್ನು ನಂಬಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ‘ಮೂಡ್’ ಹಾಳ್ಮಾಡುವ ಸಂಗತಿಯೊಂದನ್ನು ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ ‘ಮೂಡಿ’ (Moody) ಪ್ರಕಟಿಸಿದೆ. ಅದೇನೆಂದರೆ ಭಾರತದ ‘ಸಾವರಿನ್’ ರೇಟಿಂಗ್ ಅನ್ನು Baa2 ನಿಂದ Baa3 ವರ್ಗಕ್ಕೆ ತಗ್ಗಿಸಿದೆ.
ರೇಟಿಂಗ್ ತಗ್ಗಿಸಿರುವ ʼಮೂಡಿʼ (Moody) ಒಂದು ಸ್ಪಷ್ಟನೆಯನ್ನೂ ನೀಡಿದೆ. ರೇಟಿಂಗ್ ತಗ್ಗಿಸಲು ಕಾರಣ ಕರೋನಾ ಸೋಂಕು ಅಲ್ಲ. ಆದರೆ, ಆರ್ಥಿಕ ಸುಧಾರಣೆಗಳ ಸಮರ್ಥ ಜಾರಿ ಮಾಡದ ಪರಿಣಾಮ ಸುಧೀರ್ಘ ಅವಧಿಯವರೆಗೆ ಆರ್ಥಿಕಾಭಿವೃದ್ಧಿ ಮಂದಗತಿಯಲ್ಲಿ ಸಾಗಿರುವುದು ಎಂದು ಹೇಳಿದೆ. ಮತ್ತಷ್ಟು ಅವಧಿಗೆ ಮಂದಗತಿಯ ಆರ್ಥಿಕಾಭಿವೃದ್ಧಿ ಮುಂದುವರೆಯಲಿದೆ ಎಂದೂ ಮುನ್ನಂದಾಜು ಮಾಡಿದೆ. ಇಡೀ ದೇಶದ ಆರ್ಥಿಕಾಭಿವೃದ್ಧಿ ಕುರಿತಂತೆ ಋಣಾತ್ಮಕ ಮುನ್ನೋಟವನ್ನು ನೀಡಿದೆ. ಇದರರ್ಥ ಏನೆಂದರೆ ಬರುವ ದಿನಗಳಲ್ಲಿ ಮತ್ತೊಂದು ಸುತ್ತಿನಲ್ಲಿ ರೇಟಿಂಗ್ ತಗ್ಗಿಸುವ ಸಾಧ್ಯತೆ ಇದೆ.
ಸಾವರಿನ್ ರೇಟಿಂಗ್ ಅನ್ನು Baa2 ನಿಂದ Baa3 ವರ್ಗಕ್ಕೆ ಇಳಿಸಿದೆ. ಅದಕ್ಕೆ ‘ಮೂಡಿ’ (Moody) ನೀಡಿರುವ ಕಾರಣಗಳು, ಸುಧೀರ್ಘ ಅವಧಿಯವರಿಗೆ ಮಂದಗತಿಯ ಅಭಿವೃದ್ಧಿ, ತೀವ್ರವಾಗಿ ಹದಗೆಟ್ಟ ವಿತ್ತೀಯ ಪರಿಸ್ಥಿತಿ, ಹಣಕಾಸು ವಲಯದ ಮೇಲಿನ ತೀವ್ರ ಒತ್ತಡಗಳು. Baa2 ನಿಂದ Baa3 ವರ್ಗಕ್ಕೆ ತಗ್ಗಿಸಿದ್ದರಿಂದಾಗುವ ಪರಿಣಾಮಗಳೆಂದರೆ- ಮುಂಬರುವ ದಿನಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿವು ನಿಧಾನಗತಿಗೆ ಇಳಿಯಬಹುದು ಅಥವಾ ಸ್ಥಗಿತಗೊಳ್ಳಬಹುದು. ಈಗಾಗಲೇ ಹೂಡಿಕೆ ಮಾಡಿರುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹೂಡಿಕೆಯನ್ನು ಹಿಂಪಡೆಯಬಹುದು. ದೇಶೀಯ ಉದ್ಯಮಗಳು ವಿದೇಶ ಸಾಲ ಪಡೆಯಲು ತೊಡಕಾಗಬಹುದು, ಸಾಲದ ಮೇಲಿನ ವೆಚ್ಚ (ಅಂದರೆ ಬಡ್ಡಿ ಮತ್ತು ಷರತ್ತುಗಳು) ಗಣನೀಯವಾಗಿ ಏರಬಹುದು. ಭಾರತ ಸರ್ಕಾರ ವಿದೇಶದಿಂದ ಪಡೆಯುವ ಸಾಲದ ವೆಚ್ಚವೂ ಏರಬಹುದು.

ಸಾಲದ ವೆಚ್ಚ ಏರಿಕೆಯಾಗುವುದೆಂದರೆ ದೇಶದ ಒಟ್ಟಾರೆ ಸಾಲದ ಹೊರೆಯು ಗಣನೀಯವಾಗಿ ಹೆಚ್ಚಳವಾಗುತ್ತದೆ. ಪ್ರಸ್ತುತ ಜಿಡಿಪಿಯ ಶೇ.72ರಷ್ಟಿರುವ ಸಾಲವು ಶೇ.80ರ ಗಡಿದಾಟಲೂ ಬಹುದು. ಅಂದಹಾಗೆ ಮೋದಿ ಅಧಿಕಾರಕ್ಕೆ ಬರುವ ಮುನ್ನ ಭಾರತದ ಸಾಲ ಇದ್ದದ್ದು 52 ಲಕ್ಷ ಕೋಟಿ ರುಪಾಯಿಗಳು. ಈ ಆರು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರವು 32 ಲಕ್ಷ ಕೋಟಿ ರುಪಾಯಿಗಳಷ್ಟು ಸಾಲ ಮಾಡಿದ್ದು ಒಟ್ಟು ಸಾಲವು 82 ಲಕ್ಷ ಕೋಟಿ ರುಪಾಯಿಗಳಿಗೆ ಏರಿದೆ. ಒಂದು ಕಡೆ ಆರ್ಥಿಕತೆ ಕುಸಿಯುತ್ತಿದೆ. ಮತ್ತೊಂದು ಕಡೆ ಸಾಲದ ಪ್ರಮಾಣ ಏರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ‘ಸಾವರಿನ್’ ರೇಟಿಂಗ್ ಅನ್ನು ಗಣನೀಯವಾಗಿ ತಗ್ಗಿಸಲಾಗುತ್ತದೆ.
ಸಾವರಿನ್ ಎಂಬ ಪದವನ್ನು ‘ಸಾರ್ವಭೌಮ’, ‘ಸಾರ್ವಭೌಮತ್ವ’ ಎನ್ನುವ ಅರ್ಥದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ, ರೇಟಿಂಗ್ ವಿಷಯಕ್ಕೆ ಬಂದಾಗ ಆಯಾ ದೇಶದ ಕರೆನ್ಸಿ ಸೇರಿದಂತೆ ಇಡೀ ದೇಶದ ಆರ್ಥಿಕತೆ, ಸಾಲ ಪಡೆಯುವಿಕೆ, ಮರುಪಾವತಿ ಸಾಮರ್ಥ್ಯ, ಹೂಡಿಕೆಗೆ ಪೂರಕ ಪರಿಸರ ಸೇರಿದಂತೆ ವಿಶಾಲಾರ್ಥದಲ್ಲಿ ಸುಸ್ಥಿರ ಆರ್ಥಿಕತೆ ಮೌಲ್ಯಕ್ಕೆ ಅನ್ವಯಿಸಿ ‘ಸಾವರಿನ್’ ಎಂದು ಹೇಳಲಾಗುತ್ತದೆ. ಭಾರತದ ಸಾವರಿನ್ ರೇಟಿಂಗ್ ತಗ್ಗಿದೆ ಎಂದರೆ- ದೇಶದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿ ಇಲ್ಲಾ ಎಂದೇ ಅರ್ಥ.
ಕೇಂದ್ರ ಸರ್ಕಾರ ಈ ಹೊತ್ತಿನಲ್ಲಿ ಯಾಕೆ ‘ಮೂಡಿ’ (Moody) ರೇಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂದರೆ- 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜು ಘೋಷಣೆ ಮಾಡಿ, ವಿಶ್ವದಲ್ಲೇ ನಾವೇ ಅತಿ ಹೆಚ್ಚು ಪ್ಯಾಕೇಜು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಬೀಗುತ್ತಿರುವ ಹೊತ್ತಿಗೆ ‘ಮೂಡಿ’ (Moody) ಭಾರತದ ಸಾವರಿನ್ ರೇಟಿಂಗ್ ತಗ್ಗಿಸಿದೆ. ಇದರರ್ಥ, ಮೋದಿ ಘೋಷಿಸಿದ ಪ್ಯಾಕೇಜಿನಿಂದ ಸದ್ಯದಲ್ಲಿ ಆರ್ಥಿಕತೆಗೆ ಚೇತರಿಕೆ ದಕ್ಕುವ ಸಾಧ್ಯತೆ ಇಲ್ಲ ಎಂದೇ ಭಾವಿಸಬಹುದು. ಮೋದಿ ಘೋಷಿಸಿದ ಪ್ಯಾಕೇಜಿನಲ್ಲಿ, ಬರೀ ಸಾಲ ಪಾವತಿ, ವಿಸ್ತರಣೆ ಮತ್ತು ತೆರಿಗೆ ಮರುಪಾವತಿ, ಸಾಲದ ಮರುಹೊಂದಾಣಿಕೆ, ಹೊಸ ಸಾಲ ವಿತರಣೆ, ಭವಿಷ್ಯ ನಿಧಿ ಪಾವತಿಯಲ್ಲಿ ಕಡಿತ ಇತ್ಯಾದಿ ನೇರವಾಗಿ ಜನರಿಗೆ ದಕ್ಕದ ಬರೀ ಲೆಕ್ಕಕ್ಕೆ ಮಾತ್ರ ಸಿಕ್ಕುವ ಅಂಶಗಳೇ ಶೇ.95ಕ್ಕಿಂತಲೂ ಹೆಚ್ಚಿಗೆ ಇವೆ. ವಾಸ್ತವವಾಗಿ ಮೋದಿ ಘೋಷಿಸಿದ ಪ್ಯಾಕೇಜಿನಿಂದ ಜನರಿಗೆ ನೇರವಾಗಿ ಹಣಕಾಸು ಅನುಕೂಲವಾಗುವುದು ಸುಮಾರು 1.20 ಲಕ್ಷ ಕೋಟಿಯಷ್ಟು ಮಾತ್ರ. ಹೀಗಾಗಿ ಮೋದಿ ಘೋಷಿಸಿದ ಪ್ಯಾಕೇಜಿನಲ್ಲಿ ಏನೂ ಇಲ್ಲ ಎಂಬುದನ್ನು ಪರೋಕ್ಷವಾಗಿ ‘ಮೂಡಿ’ (Moody) ಜಗತ್ತಿಗೆ ಸಾರಿದಂತಿದೆ.
ಇದೇ ‘ಮೂಡಿ’ (Moody) ರೇಟಿಂಗ್ ಏಜೆನ್ಸಿಯು 2017ರಲ್ಲಿ ಇಡೀ ದೇಶವೇ ‘ಸರಕು ಮತ್ತು ಸೇವಾ ತೆರಿಗೆ’ (GST) ಜಾರಿಯಿಂದ ತತ್ತರಿಸುತ್ತಿರುವ ಹೊತ್ತಿನಲ್ಲಿ ಭಾರತದ ಸಾವರಿನ್ ರೇಟಿಂಗ್ ಅನ್ನು Baa3 ನಿಂದ Baa2 ವರ್ಗಕ್ಕೆ ಏರಿಸಿ ಆರ್ಥಿಕ ತಜ್ಞರೆಲ್ಲ ಬೆಚ್ಚಿ ಬೀಳುವಂತೆ ಮಾಡಿತ್ತು. ಆಗ ಮೋದಿ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಬಿ ಮಾಡಿ ರೇಟಿಂಗ್ ಹೆಚ್ಚಿಸಿಕೊಂಡಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.
ಪ್ರಧಾನಿ ನರೇಂದ್ರ ಮೋದಿ ‘ಮೂಡಿ’ (Moody) ರೇಟಿಂಗ್ ತಗ್ಗಿಸಿರುವುದಕ್ಕಷ್ಟೇ ತಲೆ ಕೆಡಿಸಿಕೊಂಡಿಲ್ಲ, ಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳಾದ ‘ಫಿಟ್ಝ್’ ಮತ್ತು ‘ಎಸ್ಅಂಡ್ಪಿ’ ಏಜೆನ್ಸಿಗಳು ಭಾರತದ ಸಾವರಿನ್ ರೇಟಿಂಗ್ ತಗ್ಗಿಸಲಿವೆ. ಅವುಗಳು ತಗ್ಗಿಸುವ ರೇಟಿಂಗ್ ಮೂಡಿ ಮಟ್ಟಕ್ಕೆ ಇರುತ್ತದೋ ಇನ್ನೂ ಒಂದು ಮಟ್ಟ ಕೆಳಕ್ಕೆ ಇರುತ್ತದೋ ಗೊತ್ತಿಲ್ಲ. ಪ್ರಸ್ತುತ ‘ಮೂಡಿ’ Baa2 ನಿಂದ Baa3 ವರ್ಗಕ್ಕೆ ತಗ್ಗಿಸಿದ್ದರೂ ಇದು ಹೂಡಿಕೆ ಮಾಡುವ ಮಟ್ಟವೇ ಆಗಿದೆ. ಮತ್ತೊಂದು ಅಂಶ ಕಡಿತವಾದರೆ ಅದು ಹೂಡಿಕೆ ಕುರಿತಂತೆ ಋಣಾತ್ಮಕ ರೇಟಿಂಗ್ ನೀಡಿದಂತಾಗುತ್ತದೆ. ಆದರೆ, ಮೂಡಿ ಋಣಾತ್ಮಕ ಮುನ್ನೋಟ ನೀಡಿರುವುದರಿಂದ ಬರುವ ದಿನಗಳಲ್ಲಿ ಮತ್ತೊಂದು ಸುತ್ತು ರೇಟಿಂಗ್ ತಗ್ಗಿಸುವುದು ಅನಿರೀಕ್ಷಿತವೇನಲ್ಲ.

ಈ ಬೆಳವಣಿಗೆ ಭಾರತದ ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಆತಂಕಪಡುವಂತದ್ದೇ. ಕರೋನಾ ಸೋಂಕು ಹರಡುವ ಮುನ್ನವೇ, ಮೋದಿ ಸರ್ಕಾರದ ಅಸಮರ್ಥ ಆಡಳಿತದಿಂದಾಗಿ ಶೇ.4ರ ಆಜುಬಾಜಿಗೆ ತಗ್ಗಿದ್ದ ದೇಶದ ಜಿಡಿಪಿಯು ಕರೋನೋತ್ತರ ಸಂದರ್ಭದಲ್ಲಿ ಋಣಾತ್ಮಕ ಅಭಿವೃದ್ಧಿ ದಾಖಲಿಸುವುದು ಬಹೇತಕ ನಿಚ್ಛಳವಾಗಿದೆ. 2020-21ನೇ ಸಾಲಿನ ಮೊದಲಾರ್ಧ ವರ್ಷದಲ್ಲಿ ಶೇ.-2ರಿಂದ -3ರಷ್ಟು (ಋಣಾತ್ಮಕ ಅಭಿವೃದ್ಧಿ) ದಾಖಲಾಗುವ ಸಾಧ್ಯತೆ ಇದೆ. ಉತ್ತರಾರ್ಧದಲ್ಲಿ ಚೇತರಿಸಿಕೊಂಡರೂ ಕೂಡಾ ಋಣಾತ್ಮಕ ಅಭಿವೃದ್ಧಿಯು ಶೇ.-1ರಿಂದ-2ರಷ್ಟು ದಾಖಲಾಗಬಹುದು ಅಥವಾ ಶೂನ್ಯಮಟ್ಟಕ್ಕೆ ಏರಬಹುದು. ಮೋದಿ ಅಧಿಕಾರಕ್ಕೆ ಬರುವ ಮುನ್ನ ಹತ್ತು ವರ್ಷಗಳ ಕಾಲ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ದೇಶದ ಜಿಡಿಪಿ ಸರಾಸರಿ ಶೇ.7ರ ಆಜುಬಾಜಿನಲ್ಲಿತ್ತು. 2008ರ ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ತ್ವರಿತ ಚೇತರಿಕೆ ದಾಖಲಿಸಿತ್ತು. 2008ರಲ್ಲಿ ಜಿಡಿಪಿ ಶೇ.5ರ ಮಟ್ಟಕ್ಕಿಂತ ಕೆಳಕ್ಕಿಳಿದದ್ದು ಬಿಟ್ಟರೆ ಉಳಿದೆಲ್ಲಾ ವರ್ಷಗಳಲ್ಲಿ ಶೇ.6-9ರ ಆಜುಬಾಜಿನಲ್ಲಿ ಜಿಡಿಪಿ ಅಭಿವೃದ್ಧಿ ದಾಖಲಿಸಿತ್ತು. ಉದಾರೀಕರಣೋತ್ತರದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ದೇಶದ ಆರ್ಥಿಕತೆ ಶೂನ್ಯ ಮತ್ತು ಋಣಾತ್ಮಕ ಅಭಿವೃದ್ಧಿಯತ್ತ ವಾಲುತ್ತಿದೆ.






