ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಾಂತ್ಯದಲ್ಲಿ ಭುಗಿಲೆದ್ದ ಗಲಭೆ ಗೋಲಿಬಾರ್ ನಡೆದು, ಸೆಕ್ಷನ್-144 ವಿಧಿಸುವಲ್ಲಿಗೆ ತಲುಪಿದೆ. ಪೊಲೀಸ್ ಸ್ಟೇಷನ್, ವಾಹನಗಳು ಸೇರಿದಂತೆ ಪೋಲಿಸರ ಮೇಲೆ ಗಲಭೆಕೋರರು ದಾಂಧಲೆ ನಡೆಸಿದ್ದಾರೆ. ಗಲಭೆಕೋರರ ಈ ಕೃತ್ಯಕ್ಕೆ ಆಡಳಿತ ಪಕ್ಷದ, ವಿರೋಧ ಪಕ್ಷದ ರಾಜಕೀಯ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಕೂಡಾ ಘಟನೆಯನ್ನು ಖಂಡಿಸಿದ್ದು, ಗಲಭೆಗೆ ಕಾರಣರಾದವರನ್ನು ಬಂಧಿಸಿ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ಶಾಂತಿಗೆ ಕರೆ ನೀಡಿರುವ ಸಿದ್ದರಾಮಯ್ಯ, “ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ.” ಎಂದು ಟ್ವೀಟ್ ಮಾಡಿದ್ದರು.
ಇದು ಸಿದ್ಧರಾಮಯ್ಯ ವಿರೋಧಿಗಳಿಗೆ ಆಹಾರವಾಗಿದೆ. ಅವರ ಹೇಳಿಕೆಯನ್ನು ಹಿಂದೂ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಹಿಂದೂಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ನಡೆದ ಘಟನೆ ಹಿಂದೂ ಮುಸಲ್ಮಾನರದ್ದು ಅಲ್ಲ. ಇದು ಯಾವಾಗ ಕೋಮು ಗಲಭೆಯ ಬಣ್ಣ ಪಡೆಯಿತು? ಅನಗತ್ಯವಾಗಿ ಹಿಂದೂಗಳನ್ನು ಎಳೆದು ತರುತ್ತಿರುವುದು ಯಾಕಾಗಿ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಇಲ್ಲೂ ಮುಸ್ಲಿಮರ ಓಲೈಕೆಗೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹೀಗೆ ಬೆಂಗಳೂರಿನ ಗಲಭೆಯ ನಡುವೆ ಸಿದ್ದರಾಮಯ್ಯ ಟ್ವೀಟ್ ಬೇರೆಯೇ ಆಯಾಮ ಪಡೆದುಕೊಂಡಿತ್ತು. ವಿವಾದ ಇನ್ನಷ್ಟು ಉಲ್ಬಣಗೊಳ್ಳುತ್ತದೆ ಎಂದರಿತ ಸಿದ್ದರಾಮಯ್ಯ, ತಮ್ಮ ಹೇಳಿಕೆಯ ಉದ್ದೇಶವನ್ನು ಸ್ಪಷ್ಟಡಿಸಿದ್ದಾರೆ. ಹಿಂದೂ ಮುಸ್ಲಿಮರು ಕೂಡಿ ಶಾಂತಿಯಿಂದ ಬಾಳಬೇಕೆಂದು ನನ್ನ ಮಾತಿನ ತಾತ್ಪರ್ಯ ಎಂದು ಸಮಜಾಯಿಷಿ ನೀಡಿದ್ದಾರೆ.
“ಹಿಂದು-ಮುಸ್ಲಿಮರು ಕೂಡಿ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂಬ ನನ್ನ ಹೇಳಿಕೆಯನ್ನು ಹಿಂದೂ ವಿರೋಧಿ ಎನ್ನುವಂತೆ ತಿರುಚಲಾಗುತ್ತಿದೆ. ಮುಸ್ಲಿಮ್ ಗಲಭೆಕೋರರಿಗೆ ಮುಸ್ಲಿಮ್ ಹಿರಿಯರು, ಗಲಭೆಗೆ ಪ್ರಚೋದಿಸಿದ್ದ ಹಿಂದೂ ಯುವಕ ನವೀನ್‌ಗೆ ಹಿಂದೂ ಹಿರಿಯರೇ ಬುದ್ದಿ ಹೇಳಬೇಕಲ್ಲಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ?ʼʼ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.