Tik Tok ಹುಚ್ಚು, ಟಿಕ್ ಟಾಕ್ ಅನಾಹುತಗಳ ಸುದ್ದಿ ಬರುತ್ತಲೇ ಇದೆ. ವಿಶ್ವದ ಅತ್ಯಂತ ಜನಪ್ರಿಯ ಮೊಬೈಲ್ App ಟಿಕ್ ಟಾಕ್ ನಲ್ಲಿ ಕಿರು ವಿಡಿಯೊಗಳನ್ನು ಹರಿಯ ಬಿಡುವುದು ಯುವ ಜನಾಂಗಕ್ಕೊಂದು ಹುಚ್ಚು ಅಭ್ಯಾಸವಾಗಿದೆ. ನೀವು ಟಿಕ್ ಟಾಕ್ ರೆಕಾರ್ಡ್ ಮಾಡಿ ಜನಪ್ರಿಯ ಮಾಡಿರುವ ಟಿಕ್ ಟಾಕ್ ಕಂಪೆನಿಯ ಮೌಲ್ಯ ಎಷ್ಟು ಗೊತ್ತೇ ? ಬರೋಬ್ಬರಿ 53 ಸಾವಿರ ಕೋಟಿ ರೂಪಾಯಿ.
2017 ಸೆಪ್ಟೆಂಬರ್ ನಲ್ಲಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾದ ಈ ಚೀನಾ ದೇಶದ ಕಳಪೆ ಮಟ್ಟದ ಸೂಕ್ತ ಭದ್ರತಾ ಸೆಟ್ಟಿಂಗ್ ಇಲ್ಲದ ಟಿಕ್ ಟಾಕ್ ಕೇವಲ ಎರಡೇ ವರ್ಷದಲ್ಲಿ ಎಷ್ಟೊಂದು ಜನಪ್ರಿಯವಾಗಿದೆ ಎಂದರೆ ವಿಶ್ವದ ಅತೀ ಹೆಚ್ಚು ಡೌನ್ ಲೋಡ್ ಮಾಡಲಾದ ಅಪ್ಲಿಕೇಶನ್ ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಚೀನಾ ದೇಶದ ByteDance ಎಂಬ ಸ್ಟಾರ್ಟ್ ಆಪ್ ಕಂಪೆನಿ 2012ರಲ್ಲಿ ಕೆಲವು ಮೊಬೈಲ್ ಅಪ್ಲಿಕೇಶನ್ ಚೀನಾದಲ್ಲಿ ಬಿಡುಗಡೆ ಮಾಡಿತ್ತು. 2017ರ ನವೆಂಬರ್ ತಿಂಗಳಲ್ಲಿ ಚೀನಾದ ಮತ್ತೊಂದು ಮ್ಯೂಸಿಕ್ ಅಪ್ Musical.ly ಯನ್ನು ಕೂಡ ByteDance ಖರೀದಿ ಮಾಡಿತ್ತು. ಇಪ್ಪತ್ತು ಸೆಂಕೆಂಡಿಗೂ ಕಡಿಮೆ ಅವಧಿಯ ಸಣ್ಣ ಸಣ್ಣ ವಿಡಿಯೋಗಳನ್ನು ಯಾರು ಬೇಕಾದರೂ ಈ ಅಪ್ಲಿಕೇಷನ್ ಮೂಲಕ ಸಿದ್ಧಪಡಿಸಬಹುದು. ವಿಡಿಯೋ ಎಡಿಟ್ ಮಾಡುವ ಅವಕಾಶ ಕೂಡ ಇರುತ್ತದೆ. ಪ್ರಮುಖವಾಗಿ ಈಗಾಗಲೇ ರೆಕಾರ್ಡ್ ಆಗಿರುವ ಹಾಡುಗಳಿಗೆ ಅಥವ ಡೈಲಾಗುಗಳಿಗೆ ಲಿಪ್ ಸಿಂಕ್ ಮಾಡಿ ಟಿಕ್ ಟಾಕಲ್ಲಿ ಹರಡಿ ಬಿಡುತ್ತಾರೆ. ಯುವಜನರ ನಡುವೆ ಮಾತ್ರ ಅತ್ಯಂತ ಜನಪ್ರಿಯವಾಗಿರುವ ಮೊಬೈಲ್ ಅಪ್ಲಿಕೇಷನ್ ಇದಾಗಿದೆ. ಇದನ್ನು ಉಪಯೋಗಿಸದವರು ಕೂಡ ಕೆಲವೊಮ್ಮೆ ಟಿಕ್ ಟಾಕ್ ವಿಡಿಯೊ ನೋಡಿರುತ್ತಾರೆ. ಟಿಕ್ ಟಾಕ್ ವಿಡಿಯೋಗಳನ್ನು ನೋಡದವರು ಕೂಡ ಇದರ ಹೆಸರನ್ನು ಕೇಳಿಯೇ ಇರುತ್ತಾರೆ.
ಇತರ ಸೋಶಿಯಲ್ ಮಿಡಿಯಾಗಳಾದ ಫೇಸ್ ಬುಕ್, ಯೂ ಟ್ಯೂಬ್, ಇನ್ಸ್ಟಾಗ್ರಾಮ್, ಸ್ಯಾಪ್ ಚ್ಯಾಟ್, ಲಿಂಕ್ಡ್ ಇನ್, ಪಿನರೆಸ್ಟ್, ಟ್ವೀಟ್ಟರ್, ವಿ-ಚಾಟ್ ಇತ್ಯಾದಿಗಳಿಗಿಂತ ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಜನಪ್ರಿಯವಾದ, ಹೆಚ್ಚು ಹಣ ಕಬಳಿಸಿದ ಸೋಶಿಯಲ್ ಮಿಡಿಯಾ ಇದಾಗಿದೆ. ಟಿಕ್ ಟಾಕ್ ಮಾಸಿಕ ಆದಾಯ 25 ಕೋಟಿ ರೂಪಾಯಿ ಆಗಿದ್ದು, ಅಂದಾಜು 300 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸುತ್ತಿದೆ. ಇದು ಫ್ರೀ ಅಪ್ ಆಗಿದ್ದು, ಜಾಹಿರಾತು ಮೂಲಕ ಆದಾಯ ಗಳಿಸುವುದಿಲ್ಲವಾದರೂ ಇತ್ತೀಚೆಗೆ ಜಾಹಿರಾತು ಕೂಡ ಪಡೆಯುತ್ತಿದೆ. ಅಪ್ಲೀಕೇಶನ್ ಮೂಲಕವೇ ದೊರೆಯುವ ಗಿಫ್ಟ್ ಮತ್ತು ಇಮೊಜಿಗಳಿಂದಲೇ ಇಷ್ಟೊಂದು ದೊಡ್ಡ ಮೊತ್ತದ ಆದಾಯ ವನ್ನು ಈ ಆಪ್ ಗಳಿಸುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಗ್ರಾಹಕರ ಮಾಹಿತಿಯನ್ನು ಮಾರಾಟ ಮಾಡಿ ಇನ್ನಷ್ಟು ಆದಾಯ ಗಳಿಸಲು ಸಾಧ್ಯವಿದೆ.
ಫೇಸ್ ಬುಕ್, ಯೂ ಟ್ಯೂಬ್, ಮೆಸೆಂಜರ್ ಇತ್ಯಾದಿ ಸೋಶಿಯಲ್ ಮಿಡಿಯಾಗಳಲ್ಲಿ ನೀವು ಮಾಹಿತಿ ಹಂಚುವ, ಶುಭಾಶಯ ಹೇಳುವ, ಕೋಚಿಂಗ್ ನೀಡುವ, ಕಿರು ಚಿತ್ರ, ಡಾಕ್ಯುಮೆಂಟರಿ, ಉದ್ದ ವಿಡಿಯೋಗಳನ್ನು ಪ್ರಸಾರ ಮಾಡುವ ಅವಕಾಶವಿದೆ. ಕೆಲವು ಸೋಶಿಯಲ್ ಮಿಡಿಯಾಗಳ ಮೂಲಕ ಹಣ ಸಂಪಾದನೆ ಮಾಡುವವರು ಇದ್ದಾರೆ. ಆದರೆ, ಟಿಕ್ ಟಾಕ್ ನಲ್ಲಿ ಇಂತಹ ಯಾವ ಅವಕಾಶಗಳು ಇಲ್ಲ. ಯಾವ ರೀತಿಯ ಉಪಯೋಗಗಳೂ ಇಲ್ಲ. ಆದರೆ, ನೀವೊಂದು ಕಿರು ವಿಡಿಯೊವೊಂದನ್ನು ಹಾಕಿದ ಕೂಡಲೇ ಫಾಲೋವರ್ ಗಳ ಸಾಲೋ ಸಾಲು ಶುರುವಾಗುತ್ತವೆ.
ಅಷ್ಟಕ್ಕೂ ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಮಾಡಿ ಹಾಕುವವರು ಯಾರು. ಶೇಕಡ 80ರಷ್ಟು ಮಂದಿ ಟಿಕ್ ಟಾಕ್ ಉಪಯೋಗಿಸುವವರು ಆಗಿದ್ದಾರೆ. ಈ 80ರಲ್ಲಿ 30 ಶೇಕಡ ಮಂದಿ ಟಿಕ್ ಟಾಕ್ ಸೆಲೆಬ್ರಿಟಿ ಆಗಿದ್ದಾರೆ ಎಂಬುದು ಗಮನಾರ್ಹ. ಶೇಕಡ 13ರಷ್ಟು ಚಿತ್ರ ತಾರೆಯರು ವಿಡಿಯೊಗಳನ್ನು ಶೇರು ಮಾಡುತ್ತಾರೆ ಎನ್ನುತ್ತದೆ ಅಂಕಿ ಅಂಶ. ಶೇಕಡ 4ರಷ್ಟು ವಾಣಿಜ್ಯ ಬ್ರಾಂಡ್ ಗಳ ವಿಡಿಯೋ ಕಾಣ ಸಿಗುತ್ತದೆ. ಶೇಕಡ 50ರಷ್ಟು ವಿಡಿಯೋಗಳನ್ನು ಅಪ್ ಲೋಡ್ ಮಾಡುವವರು ಸಾಮಾನ್ಯ ಟಿಕ್ ಟಾಕ್ ಬಳಕೆದಾರರು.
ಟಿಕ್ ಟಾಕ್ ವಿರುದ್ಧ ಇರುವ ಬಹುದೊಡ್ಡ ಆರೋಪವೆಂದರೆ ವೈಯಕ್ತಿಕ ಸುರಕ್ಷತಾ ಸೆಟ್ಟಿಂಗ್ ನ ಕೊರತೆ. ನೀವೀಗ ಫೇಸ್ ಬುಕ್ಕಲ್ಲಿ ಸ್ನೇಹಿತರಿಗೆ ಮಾತ್ರ ಎಂದು ಸೆಟ್ಟಿಂಗ್ ಮಾಡಿ, ನಿಮ್ಮ ಪೋಸ್ಟುಗಳನ್ನು ಸ್ನೇಹಿತರು ಮಾತ್ರ ನೋಡುವಂತೆ ಮಾಡಬಹುದು. ಆದರೆ, ಟಿಕ್ ಟಾಕ್ ನಲ್ಲಿ ಹಾಗಿಲ್ಲ.
ಟಿಕ್‌ಟಾಕ್ ವಿಡಿಯೋ ಹಂಚಿಕೊಂಡಿದ್ದ ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳಿಗೆ ಪಡ್ಡೆ ಹುಡುಗರು ಕಾಟ ನೀಡಿದ ಘಟನೆ ಇತ್ತೀಚೆಗೆ ವರದಿ ಆಗಿತ್ತು. ತಾನು ವಿಡಿಯೋ ಅಪ್ ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಒಂದೂವರೆ ಲಕ್ಷ ಫಾಲೋವರ್ ಮತ್ತು ಲೈಕ್ ಪಡೆದಿದ್ದ ವಿದ್ಯಾರ್ಥಿನಿಯ ಅಶ್ಲೀಲ ಧ್ವನಿ ವಿಡಿಯೋಗಳನ್ನು ಹಾಕಿ ಸೋಶಿಯಲ್ ಮಿಡಿಯಾದಲ್ಲಿ ಟ್ರಾಲ್ ಮಾಡಲಾಗಿತ್ತು. ಕೊನೆಗೆ ಆಕೆ ಸೈಬರ್ ಪೊಲೀಸರ ಮೊರೆ ಹೋಗ ಬೇಕಾಯಿತು.
ಅಪ್ರಾಪ್ತ ವಯಸ್ಸಿನ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಟಿಕ್ ಟಾಕ್ ಬಳಕೆದಾರರಾಗಿದ್ದು, ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಟಿಕ್ ಟಾಕ್ ರಹದಾರಿ ಆಗಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಸಾಕಷ್ಟು ಸುರಕ್ಷತ ಕ್ರಮಗಳು ಇಲ್ಲದಿರುವುದು ಇವರ ಮೇಲಿರುವ ಬಹುದೊಡ್ಡ ಆರೋಪ. ಚುನಾವಣಾ ಸಂದರ್ಭದಲ್ಲಿ ಟಿಕ್ ಟಾಕ್ ಮಾಧ್ಯಮವನ್ನು ಉಪಯೋಗಿಸಿ ರಾಜಕೀಯ ಪಕ್ಷಗಳು ಪ್ರಚಾರ ಮತ್ತು ಅಪಪ್ರಚಾರ ಮಾಡುತ್ತಿವೆ ಎಂಬ ಆರೋಪ ಕೂಡ ಕೇಳಿಬಂದಿದೆ. ಟಿಕ್ ಟಾಕ್ ಬೇರೆ ಜಾಲತಾಣಗಳ ವಿಡಿಯೋ ಮತ್ತು ಧ್ವನಿಗಳನ್ನು ಬಳಸಿಕೊಳ್ಳುತ್ತಿದೆ ಎಂಬುದು ಇನ್ನೊಂದು ಆರೋಪ.
ಟಿಕ್ ಟಾಕ್ ಹುಚ್ಚು ಹಿಡಿದವರು ಸೆಲ್ಫಿ ಚಾಳಿಯಂತೆ ಇಲ್ಲೂ ಅನಾಹುತ ಮಾಡಿಕೊಳ್ಳುತ್ತಿರುವುದು ಆಗಾಗ ವರದಿ ಆಗುತ್ತಿದೆ. ಒಬ್ಬಾಕೆ ಗೃಹಿಣಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಟಿಕ್ ಟಾಕ್ ವಿಡಿಯೊ ಮಾಡಿದ್ದಳು. ಇತ್ತೀಚೆಗೆ ಬೆಂಗಳೂರು ಜಕ್ಕೂರು ಶ್ರೀರಾಮಪುರ ಬಳಿ ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಸಾಹಸ ಮಾಡುವಾಗ ರೈಲು ಡಿಕ್ಕಿ ಹೊಡೆದು ಯುವಕರು ಸಾವನಪ್ಪಿದ್ದರು.
ಟಿಕ್ ಟಾಕ್ ಮತ್ತು ಇದೇ ರೀತಿಯ ಸೋಶಿಯಲ್ ಮಿಡಿಯಾಗಳನ್ನು ನಿಯಂತ್ರಿಸುವ ಯಾವ ಕಾನೂನೂ ಭಾರತ ದೇಶದಲ್ಲಿ ಇಲ್ಲ. ಮಾತ್ರವಲ್ಲದೆ, ನಮ್ಮ ದೇಶದ ಟೆಕ್ಕಿಗಳು ಇದುವರೆಗೆ ಸುರಕ್ಷತಾ ಕ್ರಮ ಒಳಗೊಂಡ ಇಂತಹದೊಂದು ಜನಪ್ರಿಯ ಅಪ್ಲೀಕೇಶನ್ ಸಿದ್ಧಪಡಿಸಲು ಇಲ್ಲ.