ಕೃಷಿ ಕಾನೂನುಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್, ಕಾನೂನಿನ ವಿರುದ್ಧ ರೈತರ ಪ್ರತಿಭಟನೆ ರಾಜಕೀಯ ಪಿತೂರಿಯ ಭಾಗವಾಗಿದೆಯೆಂದು ಆರೋಪಿಸಿದ್ದಾರೆ.
ಕೆಲವು ರಾಜಕೀಯ ಶಕ್ತಿಗಳು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ಕುರಿತು ತಪ್ಪು ಮಾಹಿತಿ ಹರಡುತ್ತಿದೆ, ಇದು ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಕಾರಣ, ಹಾಗೂ ಆ ಶಕ್ತಿಗಳು ದೇಶದಾದ್ಯಂತ ರೈತರು ತಮ್ಮ ಪರವಾಗಿ ಇರುವಂತೆ ಚಿತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೃಷಿ ಕಾನೂನುಗಳ ಕುರಿತಂತೆ ಟೀಕಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಜಾವೇಡ್ಕರ್, ಕೃಷಿ ಕಾನೂನುಗಳ ಕುರಿತಂತೆ ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೃಷಿ ಕಾನೂನುಗಳ ಕುರಿತು ಹಾಗೂ ಕೇಂದ್ರದ ಇನ್ನಿತರ ಕೃಷಿ ಸಂಬಂಧಿತ ಯೋಜನೆಗಳ ಬಗ್ಗೆ ದೇಶದ ರೈತರು ಸಂತುಷ್ಟರಾಗಿದ್ದಾರೆಂದು ಸಚಿವರು ಹೇಳಿದ್ದಾರೆ.
ಚೆನ್ನೈ ಸಮೀಪ ರೈತರೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಜಾವೇಡ್ಕರ್, ಪಂಜಾಬಿನ ರೈತರು ಯುಪಿಎ ಅವಧಿಗಿಂತಲೂ ಹೆಚ್ಚು ಕನಿಷ್ಟ ಬೆಂಬಲ ಬೆಲೆ ಎನ್ಡಿಎ ಅವಧಿಯಲ್ಲಿ ಪಡೆಯುತ್ತಿದ್ದಾರೆ, ಅವರ ಆದಾಯ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ, ಅದಾಗ್ಯೂ ಅವರ ಹಾದಿ ತಪ್ಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಭಾರತದಾದ್ಯಂತ ತೀವ್ರ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ ಏಕೆಂದರೆ “ಕೆಲವು ರೈತರು ಮತ್ತು ಅವರ ರಾಜಕೀಯ ನಾಯಕರು ನವದೆಹಲಿಯಲ್ಲಿ ತಮ್ಮ ಆಂದೋಲನವನ್ನು ಪ್ರಾರಂಭಿಸಿದ್ದಾರೆ, ಇದು ಅಖಿಲ ಭಾರತದ ವಿದ್ಯಮಾನ ಮತ್ತು ರೈತರ ಹಿತಾಸಕ್ತಿ ಎಂದು ತೋರಿಸುತ್ತದೆ. “
“ಆದರೆ ಎಲ್ಲೆಡೆ ರೈತರು ಹೊಸ ಕಾನೂನುಗಳಿಂದ ಸಂತೋಷವಾಗಿದ್ದಾರೆ ಮತ್ತು ರೈತರ ಕಲ್ಯಾಣ ಯೋಜನೆಗಳು ಮುಂದುವರಿಯುತ್ತವೆ” ಎಂದು ಸಚಿವರು ಹೇಳಿದ್ದಾರೆ.
ಕನಿಷ್ಟ ಬೆಂಬಲ ಬೆಲೆ ಹಾಗೂ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮುಂದುವರೆಯತ್ತದೆ ಎಂದು ಭರವಸೆ ನೀಡಿದ ಅವರು, ಮೋದಿ ಸರ್ಕಾರ ರೈತರ ಬೆನ್ನ ಹಿಂದೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಹೇಳಿದ್ದಾರೆ.