ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್(CDEL) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣದ ಕುರಿತು ತ್ವರಿತವಾಗಿ ತನಿಖೆ ನಡೆಸುವಂತೆ ಸಮಾಜ ಪರಿವರ್ತನಾ ಸಮುದಾಯದ(SPS) ಹಾಗೂ NCPNR ಸಂಸ್ಥಾಪಕ ಎಸ್.ಆರ್. ಹಿರೇಮಠ ಅವರು ವಿವಿಧ ತನಿಖಾ ಸಂಸ್ಥೆಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತು ಮಂಗಳವಾರ ಗಾಂಧೀಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್. ಹಿರೇಮಠ, ‘ಸಾರ್ವಜನಿಕರಿಂದ ಷೇರು ಹಣ ಸಂಗ್ರಹಿಸಿದ್ದ ಕಾಫಿ ಡೇ ಸಂಸ್ಥೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆದಿದೆ. ಈ ಕುರಿತು ತ್ವರಿತವಾಗಿ ತನಿಖೆ ನಡೆಸುವಂತೆ ವಿವಿಧ ಇಲಾಖೆಗಳಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ. ಪ್ರಧಾನಮಂತ್ರಿ ಮತ್ತು ಕೇಂದ್ರ ಹಣಕಾಸು ಸಚಿವರಿಗೂ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ದಿವಂಗತ ಸಿಧ್ದಾರ್ಥ ಅವರ ಕಾಫಿ ಡೇ ಸಂಸ್ಥೆಯಲ್ಲಿ ₹ 3,535 ಕೋಟಿ ಮೊತ್ತದ ಹಗರಣ ನಡೆದಿರುವುದನ್ನು ಕಂಪನಿಯೇ ನಡೆಸಿದ ಆಂತರಿಕ ತನಿಖೆ ಖಚಿತಪಡಿಸಿದೆ. ವಿವಿಧ ಬ್ಯಾಂಕ್‌ಗಳಿಂದ ₹ 3,000 ಕೋಟಿಗೂ ಹೆಚ್ಚು ಸಾಲ ಪಡೆದು ವಂಚಿಸಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ, ನಿತಿನ್ ಭಾಗಮನೆ, ಬಾಲರಾಜ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಅವರ ಕುಟುಂಬದ ಇತರ ಸದಸ್ಯರ ವಿರುದ್ಧವೂ ತನಿಖೆ ನಡೆಸಬೇಕು ಆಗ್ರಹಿಸಿದ ಹಿರೇಮಠ ಅವರು ಈ ಹಗರಣದ ಸಮಗ್ರ ಸಂಗತಿ ಹೊರ ಬರಬೇಕಾದರೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಬೇಕು ಎಂದಿದ್ದಾರೆ.
ಕಂಪೆನಿಯಲ್ಲಿ ಸಾರ್ವಜನಿಕರ ಷೇರೂ ಇರುವ ಹಿನ್ನೆಲೆಯಲ್ಲಿ, ಕಂಪನಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಅಧ್ಯಕ್ಷರಾಗಿರುವ ಎಸ್.ವಿ. ರಂಗನಾಥ್ ಅವರಿಗೂ ಪತ್ರ ಬರೆಯಲಾಗಿದೆ.
Also Read: ಕಾಫಿ ಬೆಳೆಗಾರರಿಗೆ ವಂಚನೆ ಆರೋಪ: ಕೆಫೆ ಕಾಫಿ ಡೇ ಮಾಳವಿಕಾ ಸಿದ್ದಾರ್ಥಗೆ ಬಂಧನ ಭೀತಿ
ಕಾಫಿ ಡೇ ಮುಖ್ಯಸ್ಥರಾಗಿದ್ದ ದಿವಂಗತ ಸಿದ್ಧಾರ್ಥ ಅವರು ಸುಮಾರು ₹ 60,000 ಕೋಟಿ ಮೊತ್ತದ ಷೇರು ಮಾರುಕಟ್ಟೆ ಹಗರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ಈ ಕುರಿತು ಸಿಬಿಐ ತನಿಖೆ ಆರಂಭವಾಗಿದ್ದರೂ ಯಾವುದೇ ಪ್ರಗತಿಯಾಗಿಲ್ಲ. ಈ ಕುರಿತಾದ ತನಿಖೆಯನ್ನು ಕೂಡ ಚುರುಕುಗೊಳಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Also Read: ಸಾಲದ ಬೃಹತ್ ಪಿರಮಿಡ್ ಮೇಲಿತ್ತು ಸಿದ್ಧಾರ್ಥ ಕಟ್ಟಿದ ಕೆಫೇ ಕಾಫಿ ಡೇ
ಸಿಬಿಐ, ಜಾರಿ ನಿರ್ದೇಶನಾಲಯ (ED), ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (SFIO), ಸೆಬಿ (SEBI), ಕಪ್ಪು ಹಣ ಕುರಿತ ವಿಶೇಷ ತನಿಖಾ ತಂಡ (SIT), ಲೋಕಪಾಲ, ಕೇಂದ್ರೀಯ ವಿಚಕ್ಷಣ ದಳ (CVC), ಆದಾಯ ತೆರಿಗೆ ಇಲಾಖೆ (IT)ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ಪತ್ರ ಬರೆಯಲಾಗಿದೆ.
Also Read: ಕೆಫೆ ಕಾಫಿ ಡೇ ಖಾತೆಯಿಂದ 2 ಸಾವಿರ ಕೋಟಿ ರೂಪಾಯಿ ʼನಾಪತ್ತೆʼ!?







