Also Read: ಆದಿವಾಸಿ ಹಕ್ಕುಗಳಿಗಾಗಿ ದನಿ ಎತ್ತಿದರೆ ದೇಶ ದ್ರೋಹಿ ಪಟ್ಟ..!
2019ರ ಜುಲೈಯಿಂದಲೂ ತೆಲಂಗಾಣ ಪೊಲೀಸರು ರಾಜ್ಯದ ಉತ್ತರದ ಜಿಲ್ಲೆಗಳಾದ ಅದಿಲಾಬಾದ್ ಮತ್ತು ಕೋಮರಂ ಭೀಮ್ ಆಸಿಫಾಬಾದ್ ಜಿಲ್ಲೆಗಳಲ್ಲಿ ಆದಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಪೊಲೀಸ್ ಅಧೀಕ್ಷಕರು ಆಗಸ್ಟ್ 29ರಂದು ‘ಮಾವೋವಾದಿ ಬೆಂಬಲಿಗರು’ ಎಂದು ಪಟ್ಟಿ ಬಿಡುಗಡೆ ಮಾಡಿದ ನಂತರ ಈ ಕಿರುಕುಳ ಮತ್ತಷ್ಟು ಹೆಚ್ಚಿದೆ. ಆದಿವಾಸಿಗಳ ಹಕ್ಕಿಗಾಗಿ ಹೋರಾಡುತ್ತಿರುವ ಶಾಲಾ ಶಿಕ್ಷಕ ರಮೇಶ್ “ಪೊಲೀಸರು ಅನವಾಶ್ಯಕವಾಗಿ ಆದಿವಾಸಿ ವಿದ್ಯಾರ್ಥಿಗಳ ಮೇಲೆ ಆರೋಪ ಹೊರಿಸುತ್ತಾರೆ” ಎನ್ನುತ್ತಾರೆ.
ತೆಲಂಗಾಣ ಪೊಲೀಸ್ ನಿರ್ದೇಶಕರಾದ ಎಮ್ ಮಹೇಂದರ್ ರೆಡ್ಡಿ ಜುಲೈ 17ರಂದು ಪತ್ರಿಕಾಗೋಷ್ಠಿ ಕರೆದು “ಶಾಂತಿ ಮತ್ತು ನೆಮ್ಮದಿಗೆ ಹೆಸರಾಗಿರುವ ಆದಿವಾಸಿ ಗ್ರಾಮಗಳಲ್ಲಿ ಮಾವೋವಾದಿಗಳು ಅಶಾಂತಿ ಸೃಷ್ಟಿಸಲು ಶ್ರಮಿಸುತ್ತಿದ್ದಾರೆ” ಎಂದು ಹೇಳಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದೆರಡು ತಿಂಗಳುಗಳಲ್ಲಿ ನಡೆದ ಹಲವು ‘ಗುಂಡಿನ ಚಕಮಕಿ’ಯಲ್ಲಿ ಹತ್ತಕ್ಕೂ ಹೆಚ್ಚು ಎನ್‌ಕೌಂಟರ್‌ಗಳಾಗಿವೆ ಎಂದು ಪೊಲೀಸ್ ವರದಿಗಳೇ ತಿಳಿಸುತ್ತವೆ, ಆದರೆ ಒಂದೇ ಒಂದು ಪೊಲೀಸ್‌ಗೂ ಸಣ್ಣದೊಂದು ಗಾಯವಾಗಿರುವ ಮಾಹಿತಿಯೂ ವರದಿಯಲ್ಲಿ ಇಲ್ಲ. ಜುಲೈ 16ರಂದು ಡೆಕ್ಕನ್ ಕ್ರೋನಿಕಲ್ ಪತ್ರಿಕೆಯ ವರದಿಗಾರ ಪಿಲಾಲಮರ್ರಿ ಶ್ರೀನಿವಾಸ ವರದಿ ಮಾಡಿರುವಂತೆ ಗುಂಡಿನ ಚಕಮಕಿ ನಡೆದಿರುವುದನ್ನು ಸ್ಪಷ್ಟವಾಗಿ ನಿರಾಕರಿಸುವ ಗ್ರಾಮಸ್ಥರು “ಪೊಲೀಸರ ಕಟ್ಟುಕತೆಯು ಗ್ರಾಮಸ್ಥರಲ್ಲಿ ದಿಗಿಲು ಹುಟ್ಟಿಸುವ ಉದ್ದೇಶ ಮಾತ್ರ ಹೊಂದಿದೆ” ಎನ್ನುತ್ತಾರೆ. ಗ್ರಾಮಸ್ಥರ ಪ್ರಕಾರ ಪೊಲೀಸರೇ ಜುಲೈ 14ರ ರಾತ್ರಿ ಗಾಳಿಯಲ್ಲಿ ಗುಂಡು ಹೊಡೆದು ಬೆದರಿಸಲು ಯತ್ನಿಸಿದ್ದಾರೆ. ʼತಪ್ಪಿಸಿಕೊಂಡಿದ್ದಾರೆʼ ಎಂದು ಪೊಲೀಸರು ಆರೋಪಿಸುವ ಕೋವಾ ವಸಂತ್ ರಾವ್ ಎಂಬವರ ಪತ್ನಿ ಕೋವಾ ಸತ್ತುಬಾಯ್, ವರದಿಗಾರ ಶ್ರೀನಿವಾಸ್ ಜೊತೆ ಮಾತಾಡುತ್ತಾ “ಪೊಲೀಸರು ನಮ್ಮ ಪಾತ್ರೆ ಪಗಡಿಗಳನ್ನು ಬಳಸಿ ರಾತ್ರಿ ಊಟ ತಯಾರಿಸಿದ್ದಾರೆ, ಅಷ್ಟೇ ಅಲ್ಲದೆ ಅವರು ಉಂಡು ಉಳಿದಿರುವ ಆಹಾರವನ್ನು ನೀವೇ ಉಣ್ಣಿ ಎಂದಿದ್ದಾರೆ” ಎನ್ನುತ್ತಾರೆ.
ಈ ಇಡೀ ಕಾರ್ಯವಿಧಾನವು ದಂಡಕಾರಣ್ಯ ವಲಯದ ಕೋಂಬಿಂಗ್ ಕಾರ್ಯಾಚರಣೆಯನ್ನು ನೆನಪಿಸುವಂತಿದೆ. ಅಲ್ಲಿ ಪೊಲೀಸರೇ ಆದಿವಾಸಿಗಳಿಂದ ಆಹಾರ ಪಡೆದುಕೊಂಡು ಅಥವಾ ಬೆದರಿಸಿ ಪಡೆದುಕೊಂಡು ನಂತರ ಅವರ ಮೇಲೆಯೇ ನಕ್ಸಲೀಯರಿಗೆ ಆಹಾರ ಒದಗಿಸಿದ ಆರೋಪ ಹೊರಿಸಿದ್ದಾರೆ ಎನ್ನಲಾಗಿತ್ತು.
‘ವಿಷ್ಣು ವಾರಿಯರ್ಸ್’ ಎಂದೇ ಕರೆಯಲ್ಪಡುವ ತೆಲಂಗಾಣದ ಈ ಪೊಲೀಸ್ ತಂಡ ಮಾವೋವಾದಿಗಳ ಬೆಂಬಲಿಗರೆಂದು ಒಂದು ಪಟ್ಟಿ ಬಿಡುಗಡೆ ಮಾಡಿದೆ. ಕೋಮರಂ ಭೀಮ್ ಆಸಿಫಾಬಾದ್ ನಲ್ಲಿ ದೊರೆತ ಮಾವೋವಾದಿ ನಾಯಕ ಭಾಸ್ಕರ್ ರಾವ್ ಅವರ ಡೈರಿ ಒಂದರಲ್ಲಿ ಆ ಹೆಸರುಗಳಿವೆ ಎಂದು ಪೊಲೀಸರು ಪ್ರತಿಪಾದಿಸುತ್ತಾರೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ವಾರಿಯರ್ಸ್ “ಮಾವೋವಾದಿ ಸಾಹಿತ್ಯ, ಯುನಿಫಾರ್ಮ್, ಸ್ಪೋಟಕಗಳು, ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಹೊಂದಿರುವ ಚೀಲಗಳನ್ನು ವಶ ಪಡಿಸಿಕೊಳ್ಳಲಾಗಿದೆ” ಎಂದಿದ್ದಾರೆ. ಆದರೆ ಇದೇ ಪೊಲೀಸರು ಭಾಸ್ಕರ ರಾವ್ ಅವರದ್ದು ಎಂದು ಪದೇ ಪದೇ ಹೇಳುವ ಡೈರಿಯನ್ನು ಮಾಧ್ಯಮಗಳ ಮುಂದೆ ಒಮ್ಮೆಯೂ ಪ್ರಸ್ತುತ ಪಡಿಸಿಲ್ಲ.

ಪೊಲೀಸರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆದಿವಾಸಿಗಳ ಹಕ್ಕಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಮತ್ತು ಹೋರಾಟಗಾರರ ಹೆಸರುಗಳೇ ಹೆಚ್ಚಿದ್ದು ಕಳೆದ ಕೆಲವು ತಿಂಗಳುಗಳಿಂದ ವಿದ್ಯಾರ್ಥಿಗಳ ಮೇಲೆ ಕಣ್ಗಾವಲಿಡಲಾಗಿದೆ ಮತ್ತು ಪದೇ ಪದ ಠಾಣೆಗೆ ಕರೆಸಿ ಕಿರುಕುಳ ನೀಡಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕ ರಮೇಶ್. “ಪೊಲೀಸರು ಹೀಗೆಯೇ ಯುವ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದರೆ ಅವರು ಎಲ್ಲಿಗೆ ಹೋಗಬೇಕು?” ಎಂದೂ ಅವರು ಪ್ರಶ್ನಿಸುತ್ತಾರೆ.
ಪೊಲೀಸರ ಪಟ್ಟಿಯಲ್ಲಿ ಶಿಕ್ಷಕ ರಮೇಶ್, ಡಿಪ್ಲೊಮಾ ವಿದ್ಯಾರ್ಥಿ ಸಿದಾಮ್ ಜಂಗುದೇವ್, ಸೋಯಂ ಚಿನ್ನಯ್ಯಾ, ಆದಿವಾಸಿ ವಕೀಲರಾದ ಸಿದಾಮ್ ವಿವೇಕಾನಂದ ಮುಂತಾದ ಉನ್ನತ ಶಿಕ್ಷಣ ಪಡೆದವರೇ ಇದ್ದು ಅವರೆಲ್ಲರೂ ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದವರೇ ಆಗಿದ್ದಾರೆ.
Also Read: ಆದಿವಾಸಿ ಬುಡಕಟ್ಟು ಸಮುದಾಯಗಳ ಹಕ್ಕು, ಅಧಿಕಾರ, ಅಭಿವೃದ್ಧಿಯ ಒಳನೋಟ
ಸಪ್ಟೆಂಬರ್ ತಿಂಗಳಿನಿಂದ ತೆಲಂಗಾಣ ಪೊಲೀಸರು ಸರಣಿ ಎನ್ಕೌಂಟರ್ ಆರಂಭಿಸಿದ್ದಾರೆ. ಸಪ್ಟೆಂಬರ್ ಮೂರರಂದು ಭದ್ರಾದ್ರಿ ಕೊತಾಗುದೆಮ್‌ನ ಪೊಲೀಸರು ಎನ್ಕೌಂಟರ್‌ನಲ್ಲಿ ಒಬ್ಬ ಮಾವೋವಾದಿಯನ್ನು ಕೊಂದಿದ್ದೇವೆ ಎಂದು ವರದಿ ಕೊಟ್ಟಿದ್ದರು. ಮರುದಿನ ಭದ್ರಾದ್ರಿ- ಪೂರ್ವ ಗೋದಾವರಿಯ ಸಿಪಿಐ (ಮಾವೋವಾದಿ ) ಸತ್ತವರನ್ನು ದುದಿ ದೇವುಲು ಎಂದು ಗುರುತಿಸಿತ್ತು. ಶೇಖರ್ ಎಂದೇ ಕರೆಯಲ್ಪಡುತ್ತಿದ್ದ ದುದಿ ದೇವುಲು ಛತ್ತೀಸ್‌ಗಡದ ಕೋಂಟಾ ಏರಿಯಾದ ನಿವಾಸಿಯಾಗಿದ್ದು ತೆಲಂಗಾಣದ ಮಾವೋವಾದಿಗಳ ಕಮಾಂಡರ್ ಆಗಿದ್ದರು. ಸಪ್ಟೆಂಬರ್ ನಾಲ್ಕರಂದು ಭದ್ರಾದ್ರಿಯ ಮಾವೋವಾದಿ ಸಂಘಟನೆಯ ಘಟಕದ ಕಾರ್ಯದರ್ಶಿಯಾಗಿರುವ ಆಜಾದ್ ‘ದೇವುಲು ಅವರನ್ನು ಹಿಂದಿನನ ದಿನವೇ ಆಸ್ಪತ್ರೆಯಿಂದ ಬಂಧಿಸಲಾಗಿದ್ದು ಪೊಲೀಸರು ಹಿಂಸೆ ನೀಡಿ ಕಾಡಿನಲ್ಲಿ ಕೊಂದು ಹಾಕಿದ್ದಾರೆ’ ಎಂದು ಆರೋಪಿಸಿದ್ದರು.
ಭದ್ರಾದ್ರಿಯ ಪೊಲೀಸರು ಸಪ್ಟೆಂಬರ್ ಏಳರಂದು ಮತ್ತೆ ಪತ್ರಿಕಾಗೋಷ್ಠಿ ಕರೆದು ಗುಂಡಿನ ಚಕಮಕಿಯಲ್ಲಿ ಇನ್ನಿಬ್ಬರು ಮಾವೋವಾದಿಗಳು ಹತರಾಗಿದ್ದಾರೆ ಎಂದಿದ್ದಾರೆ. ಆದರೆ ತೆಲಂಗಾಣ ರಾಜ್ಯ ಕಮಿಟಿಯ ಸಿಪಿಐ(ಮಾವೋವಾದಿ)ಯ ವಕ್ತಾರ “ನಿಶಸ್ತ್ರರಾಗಿದ್ದ ಇಬ್ಬರನ್ನು ಪೊಲೀಸರು ‘ಗುಂಡಿನ ಚಕಮಕಿ’ಯ ಹೆಸರಲ್ಲಿ ಕೊಂದು ಹಾಕಿದ್ದಾರೆ” ಎಂದು ಪತ್ರಿಕಾ ಪ್ರಕಟಣೆ ಕೊಟ್ಟಿದ್ದಾರೆ.
ಸಪ್ಟೆಂಬರ್18ರಂದು ಮತ್ತಿಬ್ಬರು ಮಾವೋವಾದಿಗಳು ‘ಗುಂಡಿನ ಚಕಮಕಿ’ಯಲ್ಲಿ ಹತರಾಗಿದ್ದಾರೆ ಎಂದಿದ್ದಾರೆ ಪೊಲೀಸರು. ಇಬ್ಬರು ಮಹಿಳೆಯರೂ ಸೇರಿದಂತೆ ಮೂವರು ಮಾವೋವಾದಿಗಳು ಮತ್ತೊಂದು ‘ಗುಂಡಿನ ಚಕಮಕಿ’ಯಲ್ಲಿ ಚೆನ್ನಾಪುರಮ್ ಕಾಡಿನಲ್ಲಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 18ರಂದು ಇಬ್ಬರು ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಮುಲುಗು ಪೊಲೀಸರು ವರದಿ ಮಾಡಿದ್ದಾರೆ.
Also Read: ಆದಿವಾಸಿ ಹಕ್ಕುಗಳಿಗಾಗಿ ದನಿ ಎತ್ತಿದರೆ ದೇಶ ದ್ರೋಹಿ ಪಟ್ಟ..!
ತೆಲಂಗಾಣದ ಸಿವಿಲ್ ಲಿಬರ್ಟಿಸ್ ಕಮಿಟಿ (Civil liberties committee- CLC)ಯ ಅಧ್ಯಕ್ಷರಾಗಿರುವ ಗದ್ದಾಮ್ ಲಕ್ಷಣ್ ಅವರು ಈ ಎಲ್ಲಾ ಎನ್ಕೌಂಟರ್‌ಗಳ ಮೇಲೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿದ್ದು ಎನ್ಕೌಂಟರ್ಗಳು ‘ಕಾನೂನು ಬಾಹಿರ’ ಎಂದು ಪ್ರತಿಪಾದಿಸಿದ್ದಾರೆ. ಕೋರ್ಟ್ ಪೊಲೀಸರಿಗೆ ಎಲ್ಲಾ ಎನ್ಕೌಂಟರ್‌ಗಳಲ್ಲಿ ಹತರಾದವರನ್ನು ಮತ್ತೊಮ್ಮೆ ಪೋಸ್ಟ್ ಮಾರ್ಟಂ ಮಾಡಿ ವರದಿ ಸಲ್ಲಿಸಲು ನಿರ್ದೇಶಿಸಿದೆ. ಆದರೆ ಇದುವರೆಗೂ ಸರ್ಕಾರವಾಗಲೀ,ಪೊಲೀಸರಾಗಲೀ ಕೌಂಟರ್ ರಿಪೋರ್ಟ್ ಸಲ್ಲಿಸಲಿಲ್ಲ ಎನ್ನುತ್ತಾರೆ ಲಕ್ಷ್ಮಣ್‌ರ ವಕೀಲರಾದ ರಘುನಾಥ್ .
ಸಪ್ಟೆಂಬರ್ ನಂತರ ಸುಮಾರು ನಾಲ್ಕು ನೂರರಷ್ಟು ಪೊಲೀಸರನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರ ಕೋಮರಂ ಭೀಮ್ ಆಸಿಫಾಬಾದ್‌ನಲ್ಲಿ ಕೋಂಬಿಂಗ್ ಮಾಡಲೆಂದೇ ನಿಯೋಜಿಸಲಾಗಿದೆ. ನಲ್ವತ್ತು ವರ್ಷಗಳ ಹಿಂದೆ ನೂರಕ್ಕೂ ಅಧಿಕ ಅಮಾಯಕ ಆದಿವಾಸಿಗಳು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಆಗಿನ ಮುಖ್ಯಮಂತ್ರಿ ಎನ್.ಟಿ.ರಾಮಾರಾವ್ ಅವರು ಆದಿವಾಸಿಗಳು ಮಾವೋವಾದಿಗಳಾಗದಂತೆ ತಡೆಯಲು ಶಾಲಾ ಶಿಕ್ಷಕರಾಗಿ ನೇಮಿಸಿ ಮುಖ್ಯವಾಹಿನಿಯಲ್ಲಿ ಬದುಕುವಂತೆ ಮಾಡಿದ್ದರು. ದುರಂತವೆಂದರೆ ನಲ್ವತ್ತು ವರ್ಷಗಳ ನಂತರ ಅದೇ ಶಾಲಾ ಶಿಕ್ಷಕರನ್ನು ಸರ್ಕಾರದ ದಮನಕಾರಿ ನೀತಿಯ ವಿರುದ್ಧ ಧ್ವನಿ ಎತ್ತುತ್ತಿರುವುದಕ್ಕಾಗಿ ಮಾವೋವಾದಿಗಳು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಶಿಕ್ಷಕ ರಮೇಶ್ ಅವರು “ಆದಿವಾಸಿಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ನೆನಸಿಕೊಂಡರೆ ಕೆಲವು ರಾತ್ರಿ ನಿದ್ರೆಯೇ ಬರುವುದಿಲ್ಲ. ಬುಡಕಟ್ಟು ಜನರ ಅಸ್ತಿತ್ವವೇ ಈ ದೇಶಕ್ಕೆ ಬೇಕಿಲ್ಲ, ನಾವು ಬದುಕಿರುವುದು ದೇಶದ ಕಣ್ಣಿಗೆ ಕಾಣುವುದೂ ಇಲ್ಲ” ಎನ್ನುವಾಗ ಭಾರತದ ಆತ್ಮಕ್ಕೆ ಚುಚ್ಚಿದಂತಾಗುತ್ತದೆ.
inputs: The Caravan