ರಾಜ್ಯದಲ್ಲೊ ಕರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಇಡೀ ರಾಜ್ಯವನ್ನೇ ಬಂದ್ ಮಾಡಿ ಸರ್ಕಾರ ಆದೇಶ ಮಾಡಿತ್ತು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿ ಆದೇಶ ಮಾಡಿದ್ದರು. ಏಪ್ರಿಲ್ 14ರಂದು 21 ದಿನಗಳ ಲಾಕ್‌ಡೌನ್ ಮುಕ್ತಾಯವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ 2ನೇ ಬಾರಿಗೆ ಲಾಕ್‌ಡೌನ್ ಮುಂದುವರಿಸಿದ್ದರು. ಮೇ 3ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿ ಆದೇಶ ಮಾಡಿದರೂ ಏಪ್ರಿಲ್ 20 ರಿಂದ ಕೆಲವು ವ್ಯವಹಾರಗಳಿಗೆ ಅವಕಾಶ ಕಲ್ಪಿಸಿದ್ದರು. ಈ ನಡುವೆ ಇಷ್ಟೂ ದಿನಗಳ ಕಾಲ ಮದ್ಯ ಮಾರಾಟವನ್ನು ಬಂದ್ ಮಾಡಿ ಸರ್ಕಾರ ಆದೇಶ ಮಾಡಿತ್ತು. ಅದಾದ ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿತ್ತು. ಸ್ವತಃ ಬಾರ್ ಮಾಲೀಕರೇ ಕಳ್ಳತನ ಮಾಡಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಿ ಘಟನೆಗಳೂ ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿವೆ. ಆದರೆ ಇದೀಗ ಅಬಕಾರಿ ಕೇಸ್‌ನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಬಲಾಢ್ಯರು ಕೆಳದರ್ಜೆಯ ಅಧಿಕಾರಿ ಮೇಲೆ ದರ್ಬಾರ್ ಮಾಡಿದರಾ? ಎನ್ನುವ ಅನುಮಾನ ಹುಟ್ಟುವಂತೆ ಘಟನೆ ನಡೆದಿದೆ.
ಖಾಕಿ ಕಚ್ಚಾಟಕ್ಕೆ ಕಾರಣ ಇಷ್ಟೇ!
ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆಟ್ಟದಾಸಪುರದ ಬಳಿ ಸರಕಾರಿ ವಾಹನದಲ್ಲೇ ಮದ್ಯ ಸಾಗಾಟ ನಡೆಯುತ್ತಿತ್ತು. ಈ ಮಾಹಿತಿ ತಿಳಿದ ಎಸಿಪಿ ವಾಸು, ದಾಳಿ ನಡೆಸಿ ವಾಹನ ಹಾಗೂ ಸುಮಾರು 100 ಬಾಟಲ್ ಮದ್ಯವನ್ನು ವಶಕ್ಕೆ ಪಡೆದಿದ್ದರು. ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೋಲೀಸರು ಎಫ್ಐಆರ್ ಕೂಡ ದಾಖಲು ಮಾಡಿಕೊಂಡಿದ್ದರು. ಮದ್ಯ ಕೊಂಡೊಯ್ಯುತ್ತಿದ್ದ ವಿಶೇಷ್ ಗುಪ್ತ ಎಂಬುವನ ಜೊತೆಗೆ ಕಾರು ಚಾಲಕ ಗೋಪಿಯನ್ನು ಬಂಧಿಸಲಾಗಿತ್ತು. ಈ ಘಟನೆ ನಡೆದಿರುವುದು ಏಪ್ರಿಲ್ 11 ರಂದು. ಜಿಎಸ್ಟಿ ಜಾಗೃತ ದಳದ ವಾಹನದಲ್ಲಿ 8 ಬಾಕ್ಸ್ಗಳಲ್ಲಿ ದುಬಾರಿ ಬೆಲೆಯ 100 ಮದ್ಯದ ಬಾಟಲಿ ಸಾಗಿಸುತ್ತಿದ್ದಾಗ ಪತ್ತೆ ಹಚ್ಚಿ ಬಂಧನ ಮಾಡಿ ಕಾನೂನು ಕ್ರಮ ಜರುಗಿಸಲಾಗಿತ್ತು. ಆದರೆ ಕಾನೂನು ಕ್ರಮ ಕೈಗೊಳ್ಳಲು ಮುಂದಾದ ಅಧಿಕಾರಿಗೆ ಸಿಕ್ಕ ಪ್ರಶಂಸೆ ಎಂದರೆ ಅಮಾನತು ಶಿಕ್ಷೆ. ಇದಕ್ಕೆ ಕಾರಣ ಇನ್ನೋರ್ವ ಹಿರಿಯ ಐಪಿಎಸ್ ಅಧಿಕಾರಿ ಎನ್ನುವುದು ಈಗ ಎದುರಾಗಿರುವ ಆರೋಪ.
ಎಸಿಪಿ ವಾಸು ಅವರು ಮದ್ಯದ ಬಾಟಲಿ ಜೊತೆಗೆ ಇಬ್ಬರನ್ನು ಅರೆಸ್ಟ್ ಮಾಡಿದಾಗ, ಆರೋಪಿಗಳು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಕಡೆಯವರು, ಅವರಿಗೂ ಇದರಲ್ಲಿ ಎರಡು ಬಾಕ್ಸ್ ಕಳುಹಿಸಲಾಗುತ್ತದೆ ಎಂದಿದ್ದರಂತೆ. ಆದರೆ, ಯಾರ ಮುಲಾಜಿಗೂ ಒಳಗಾಗದ ಎಸಿಪಿ ವಾಸು, ಆರೋಪಿಗಳೆಲ್ಲಾ ಸಿಕ್ಕಿ ಬಿದ್ದಾಗ ಇದೇ ರೀತಿ ಹಿರಿಯ ಅಧಿಕಾರಿಗಳು ಹೆಸರು ಹೇಳಿ ಎಸ್ಕೇಪ್ ಆಗಲು ಪಯತ್ನ ಮಾಡ್ತೀರಿ ಎಂದು ಹೇಳಿ ಎಫ್ಐಆರ್ ದಾಖಲಾಗುವಂತೆ ಮಾಡಿದ್ದರು. ಆ ಬಳಿಕ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಎಪಿಸಿ ವಾಸು ಅವರಿಗೆ ಕರೆ ಮಾಡಿ ಭೇಟಿ ಮಾಡುವಂತೆ ಸೂಚಿಸಿದ್ದು, ಭೇಟಿ ವೇಳೆ ‘ನನ್ನ ಹೆಸರು ಹೇಳಿದ ಮೇಲೂ ನೀನು ಕೇಸ್ ಬುಕ್ ಮಾಡಿದ್ದು ಯಾಕೆ’? ಎಂದೆಲ್ಲಾ ಕೂಗಾಡಿದ್ದಾರೆ. ಆ ಬಳಿಕ ಸ್ಟೇಷನ್ ಬೇಲ್ ಕೊಡುವಂತಹ ಕೇಸ್ ಆಗಿರುವ ಕಾರಣ ತಕ್ಷಣ ಬಿಟ್ಟು ಕಳುಹಿಸುವಂತೆ ಸೂಚಿಸಿ ಬಿಡುಗಡೆಯನ್ನೂ ಮಾಡಿಸಿದ್ದಾರೆ.
ಮದ್ಯವನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಿಡುಗಡೆ ಮಾಡಿದ ಮೇಲೆ ಕೇಸ್ ಮುಕ್ತಾಯವಾಗಬೇಕಿತ್ತು. ಆದರೆ ನನ್ನ ಹೆಸರನ್ನು ಹೇಳಿದ ಮೇಲೂ ಕೇಸ್ ಬುಕ್ ಮಾಡಿದ್ದಕ್ಕೆ ಕ್ರೋದಗೊಂಡಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಬಿಡುಗಡೆ ಆಗಿದ್ದ ಆರೋಪಿಗಳಿಂದಲೇ ಹೊಸದಾಗಿ ಕೇಸ್ ಹಾಕಿದ್ದರು. ಆರೋಪಿಗಳು ಕೊಟ್ಟ ದೂರಿನ ಆಧಾರದಲ್ಲಿ ತನಿಖೆಗೆ ಆದೇಶ ಮಾಡಿ, ವರದಿ ಪಡೆದು ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಎಸಿಪಿ ವಾಸು 30 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪ ಬಂದ ಬಳಿಕ ಅಧಿಕಾರಿಗಳಾದ ಶ್ರೀಪಾದ್ ಜೋಷಿ ಹಾಗೂ ಶರಣಪ್ಪ ಪ್ರತ್ಯೇಕವಾಗಿ ತಮನಿಖೆ ನಡೆಸಿದ್ದು, ವರದಿಯ ಆಧಾರದಲ್ಲಿ ಎಸಿಪಿ ವಾಸು ದೋಷಿ ಎಂದು ತೀರ್ಮಾನಿಸಿ ಅಮಾನತು ಮಾಡಲಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಸಪ್ತ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.
⦁ ವಾಣಿಜ್ಯ ಇಲಾಖೆಗೆ ಸೇರಿದ GST ಜಾಗೃತಿ ವಾಹನವನ್ನು ವಿಶೇಷ್ ಗುಪ್ತಗೆ ಕೊಟ್ಟಿದ್ದು ಯಾರು?
⦁ 8 ಬಾಕ್ಸ್ನಲ್ಲಿ 100 ಬಾಟೆಲ್ ಮದ್ಯಕ್ಕೆ 30 ಲಕ್ಷ ಲಂಚ ಕೇಳುವುದಕ್ಕೆ ಸಾಧ್ಯಾವೇ?
⦁ ಆರೋಪಿ ಲಂಚ ಕೊಡುವ ಬದಲು ಕೋರ್ಟ್‌ನಲ್ಲಿ ದಂಡ ಕಟ್ಟಬಹುದಿತ್ತಲ್ಲವೇ?
⦁ ಮಡಿವಾಳ ಠಾಣೆಗೆ ಎಸಿಪಿ ವಾಸು ಅವರನ್ನು ಹೆಚ್ಚುವರಿ ಆಯುಕ್ತ ಮುರುಗನ್ ಕರೆಸಿರಲಿಲ್ಲವೇ?
⦁ ಸರ್ಕಾರಿ ಅಧಿಕಾರಿಗಳಿಗೆ ಮದ್ಯ ರವಾನೆ ಆಗುತ್ತಿತ್ತು ಎನ್ನುವ ಆರೋಪ ಇದೆ. ಇದು ನಿಜವೇ?
⦁ ಇಷ್ಟೊಂದು ದುಬಾರಿ ಬೆಲೆ ಮದ್ಯ ವಾಹನಕ್ಕೆ ಬಂದಿದ್ದಾದರೂ ಎಲ್ಲಿಂದ?
⦁ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ಅಮಾನತು ಏಕಪಕ್ಷೀಯ ಅಲ್ಲವೇ?
ಒಟ್ಟಾರೆ ಅಬಕಾರಿ ಪ್ರಕರಣದಲ್ಲಿ ಆರಕ್ಷಕರು ಬೀದಿಗೆ ಬಿದ್ದಿದ್ದಾಗಿದೆ. ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ, ಸರ್ಕಾರಿ ವಾಹನಗಳಲ್ಲೇ ಮದ್ಯ ಸಾಗಾಟ. ಕಳ್ಳಭಟ್ಟಿ ದಂದೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಉತ್ತರಿಸಬೇಕಾದ ಅಬಕಾರಿ ಮಂತ್ರಿ ನಾಗೇಶ್ ಮಾತ್ರ ಲೋಕದ ಚಿಂತೆ ನನಗ್ಯಾಕೆ ಎನ್ನುವಂತಿದ್ದಾರೆ. ಇನ್ನಾದರೂ ಈ ಮದ್ಯ ಎಲ್ಲಿಂದ ಬಂತು? ಯಾರಿಗಾಗಿ ಹೋಗ್ತಿತ್ತು? ಎಸಿಪಿ ವಾಸು ಅವರನ್ನು ಅಮಾನತಿನ ಉದ್ದೇಶವೇನು ಎನ್ನುವ ಎಲ್ಲಾ ಗುಪ್ತ ಮಾಹಿತಿಗಳು ಹೊರಬೀಳಬೇಕಿದೆ. ಎಸಿಪಿ ವಾಸು ಅವರ ಮೇಲೆ ಓರ್ವ ಆರೋಪಿ ದೂರು ನೀಡಿದ್ದಾನೆ. ಪರಿಶೀಲನೆ ಮಾಡಿ ತಪ್ಪಿತಸ್ತರಾಗಿದ್ದಾರೆ ಶಿಕ್ಷೆ ನೀಡುವುದು ಸಮಂಜಸ. ಆದರೆ ದ್ವೇಷಪೂರಿತ ಉದ್ದೇಶ ಸಫಲ ಆಗದಿರಲಿ ಅಲ್ಲವೇ?