ಉತ್ತರಾಖಂಡ್ನ ಬಿಜೆಪಿ ಕಾರ್ಯಕರ್ತರು ಮೋದಿಯನ್ನು ಹಾಡಿಹೊಗಳಲು ಮೇ 22ರಂದು ಮೋದಿ ಆರತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಲಾಕ್ ಡೌನ್ ಎಲ್ಲ ತೆರವಾದ ಬಳಿಕ ಮೋದಿಗಾಗಿ ದೇವಸ್ಥಾನ ನಿರ್ಮಿಸುವ ಉದ್ದೇಶ ಹೊಂದಿದೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇದು ಈಗ ಉತ್ತರಾಖಂಡ್ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಕಿತ್ತಾಟಕ್ಕೆ ಕಾರಣವಾಗಿದೆ.
ಉತ್ತರಾಖಂಡ್ನ ಬಿಜೆಪಿ ಶಾಸಕ ಗಣೇಶ್ ಜೋಶಿ ಎಂಬವರು ನಡೆಸಿದ ಕಾರ್ಯಕ್ರಮದಲ್ಲಿ ʻಮೋದಿ ಆರತಿʼಯನ್ನು ನಡೆಸಿದ್ದಾರೆ. ಈ ವೇಳೆ ಉತ್ತರಖಂಡ್ ಉನ್ನತ ಶಿಕ್ಷಣ ಸಚಿವ ಧಾನ್ ಸಿಂಗ್ ರಾವತ್ ಕೂಡ ಉಪಸ್ಥಿತರಿದ್ದರು. ಆದರೆ ಬಿಜೆಪಿಯ ಈ ನಡೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಬಿಜೆಪಿ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಗಣೇಶ್ ಜೋಶಿ, “ನನ್ನ ಪಾಲಿಗೆ ನರೇಂದ್ರ ಮೋದಿಯವರು ದೇವರಿದ್ದಂತೆ. ನಾನು ಮೋದಿಯವರನ್ನ ಪೂಜಿಸುತ್ತೇನೆ. ಅದರಿಂದ ನನಗೆ ಸುಖ, ಶಾಂತಿ, ನೆಮ್ಮದಿ ದೊರಕುತ್ತಿದೆ. ಅಂಥಾ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮೋದಿಯವರು ಅಂದ್ರೆ ಭಯ ಬೀಳುತ್ತಾರೆ. ಹೀಗಾಗಿ ಮೋದಿಯವರನ್ನು ಪೂಜೆ ಮಾಡುವುದರಲ್ಲಿ ತಪ್ಪೇನಿದೆ.? ಈ ಲಾಕ್ ಡೌನ್ ಎಲ್ಲ ಮುಗಿದ ಮೇಲೆ ಮೋದಿ ಮೂರ್ತಿ ಪ್ರತಿಷ್ಠಾಪಿಸಿ ದೇವಸ್ಥಾನವನ್ನು ಕಟ್ಟಲಿದ್ದೇವೆ” ಎಂದು ಹೇಳಿದ್ದಾರೆ.
“ಅಲ್ಲದೆ ಪ್ರಧಾನಿ ಮೋದಿಯವರು ದಿನಕ್ಕೆ 18 ತಾಸು ಕೆಲಸ ಮಾಡುತ್ತಿದ್ದಾರೆ. ಇದು ಮೋದಿಯವರಲ್ಲಿ ಏನೋ ಒಂದು ದೈವಿಕ ಶಕ್ತಿ ಅಡಗಿದೆ ಎಂಬುದಕ್ಕಿರುವ ಸಾಕ್ಷಿ. ಹೀಗಾಗಿ ಮೋದಿಯವರಿಗೆ ಗೌರವ ಸಲ್ಲಿಸಲು ಅವರ ಹೆಸರಲ್ಲೊಂದು ದೇವಸ್ಥಾನ ನಿರ್ಮಿಸಿ, ಅವರ ಮೂರ್ತಿಯನ್ನು ಅಲ್ಲಿ ಸ್ಥಾಪಿಸಿ, ಅವರ ಪೂಜೆ ನಡೆಸಲಿದ್ದೇವೆ” ಎಂದು ಜೋಶಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಇನ್ನು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಉತ್ತರಾಖಂಡ್ ಕಾಂಗ್ರೆಸ್ ನಾಯಕ ಸೂರ್ಯಕಾಂತ್ ಧಸ್ಮಾನ ಬಿಜೆಪಿ ಎಂದರೆ ಅಂಧ ಭಕ್ತರ ಕಾರ್ಖಾನೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿಗರ ಈ ನಡೆಯನ್ನ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಈಗಾಗಲೇ ಕಾಂಗ್ರೆಸ್ ನಾಯಕರು ದೂರು ನೀಡಿದ್ದು, ಬಿಜೆಪಿ ಶಾಸಕ ಜೋಶಿ ಅವರನ್ನ ಬಂಧಿಸಲು ಆಗ್ರಹಿಸಿದ್ದಾರೆ.







