ಕರೋನಾ ಸೋಂಕು ದೇಶ ವಿದೇಶಗಳಲ್ಲಿ ನರ್ತನ ಮಾಡುತ್ತಿದೆ. ರಾಜ್ಯದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಸಾಗಿದೆ. ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಮೇಲೆ ಅಲ್ಲಲ್ಲಿ ಹಲ್ಲೆ ನಡೆದಿರುವ ಘಟನೆಗಳು ವರದಿಯಾಗುತ್ತಿವೆ. ಬೆಂಗಳೂರಿನ ಸರಾಯಿ ಪಾಳ್ಯ ಹಾಗೂ ಪಾದರಾಯನಪುರ ವಾರ್ಡ್ ಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರ ಮೇಲಿನ ದಾಳಿ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಕಾನೂನುನನ್ನೇ ರೂಪಿಸಿತು. ಕರೋನಾ ಸೋಂಕಿನ ನಡುವೆ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ ಸೇರಿದಂತೆ ಕರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿದರೆ ಜೈಲು ಹಾಗೂ ದಂಡ ಎರಡನ್ನೂ ವಿಧಿಸಬಹುದಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಹಲ್ಲೆ ಮಾಡಿದವರಿಗೆ ಶಿಕ್ಷೆ ಕೊಡಬೇಕು ಸರಿಯಾದ ನಿರ್ಧಾರ ಸರಿ. ಆದರೆ ಆರೋಗ್ಯ ಇಲಾಖೆ ತಪ್ಪು ಮಾಡಿದಾಗ ಶಿಕ್ಷೆ ಕೊಡುವುದು ಯಾರಿಗೆ ಅಲ್ಲವೇ..?
ಮೊದಲೇ ಹೇಳಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಹಾನ್ ಎಡವಟ್ಟು ಮಾಡಿದ್ದಾರೆ. ಬೇಗೂರು ಠಾಣೆ ಪೋಲೀಸ್ ಪೇದೆಗೆ ಕರೋನಾ ಪಾಸಿಟಿವ್ ಬಂದಿದೆ ಎಂದು ದೊಡ್ಡ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಪೊಲೀಸ್ ಪೇದೆ ಟ್ರಾವೆಲ್ ಹಿಸ್ಟರಿ. ಪೊಲೀಸ್ ಪೇದೆ ಟೆಸ್ಟ್ ಗೆ ಕೊಟ್ಟು ಚಾಮರಾಜನಗರಕ್ಕೆ ಬಂದಿದ್ದು. ಚಾಮರಾಜನಗರ ಹಸಿರು ವಲಯವಾಗಿತ್ತು ಪೇದೆ ಬಂದಿದ್ದರಿಂದ 24 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಆತಂಕದ ಪರಿಸ್ಥಿತಿ ಎದುರಾಗಿತ್ತು. ಆದರೆ ರಿಸಲ್ಟ್ ನೆಗೆಟಿವ್ ಬಂದಿದೆ. ಹಾಗಾಗಿ ಆಸ್ಪತ್ರೆಯಿಂದ ಪೊಲೀಸ್ ಪೇದೆಯನ್ನು ಹೋಟೆಲ್ ನಿಂದ ಕ್ವಾರಂಟೈನ್ ಗೆ ಶಿಫ್ಟ್ ಮಾಡಲಾಗಿದೆ. ಯಾರದ್ದೋ ಬದಲಿಗೆ ಮತ್ಯಾರನ್ನೋ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಘೋಷಿಸಿ ಎಡವಟ್ಟು ಮಾಡಿದೆ ಎನ್ನುವುದು ಗೊತ್ತಾಗಿದೆ. ಎರಡನೇ ಬಾರಿ ರಕ್ತ ಪರೀಕ್ಷೆ ರಿಸಲ್ಟ್ ನಲ್ಲಿ ನೆಗೆಟಿವ್ ಎಂದು ಬಂದಿದೆ. ಸೋಂಕು ಇಲ್ಲದಿದ್ರೂ ಬೇಗೂರು ಪೋಲಿಸ್ ಕಾನ್ಸ್ಟೇಬಲ್ ಒಂದು ರಾತ್ರಿ ಕರೋನಾ ಸೋಂಕಿತರ ಜೊತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆಯುವಂತಾಗಿದೆ. ಪೇಷೆಂಟ್ ನಂಬರ್ 650 ಎಂದು ಸೋಂಕಿತ ಪೇದೆಯನ್ನು ಗುರುತಿಸಲಾಗಿತ್ತು. ಆದರೆ ಈಗ ಬೇರೆ ಪೇದೆಗಳ ರಿಸಲ್ಟ್ ಕೂಡಾ ನೆಗೆಟಿವ್. ಆದರೂ ಆರೋಗ್ಯ ಇಲಾಖೆ ಪಾಸಿಟಿವ್ ಎಂದು ವರದಿ ಕೊಟ್ಟಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡಿಸಿದೆ.
ಪೊಲೀಸ್ ಪೇದೆ ವಿಚಾರ ಮಾತ್ರವಲ್ಲ. ತುಂಬು ಗರ್ಭಿಣಿ ರಿಸಲ್ಟ್ ಕೂಡಾ ನೆಗೆಟಿವ್ ಎಂದು ಬಂದಿದೆ. ಖಾಸಗಿ ಲ್ಯಾಬ್ ನಲ್ಲಿ ಮಾಡಿದ್ದ ಪರೀಕ್ಷೆ ಸಂಪೂರ್ಣ ತಪ್ಪು ಎಂದು ಗೊತ್ತಾಗಿದೆ. ಎಲ್ಲಾ ಪ್ಯಾರಾಮೀಟರ್ಸ್ ನನ್ನೂ ಕರೋನಾ ಸೋಂಕು ಫುಲ್ ನೆಗೆಟಿವ್ ಬಂದಿದೆ. ಮತ್ತೊಮ್ಮೆ ಪರೀಕ್ಷಿಸಿ ದೃಢಪಡಿಸಿ ಎಂದರೂ ರಿಸಲ್ಟ್ ಬರುವ ಮುನ್ನವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಬಹು ದೊಡ್ಡ ತಪ್ಪು ಮಾಡಿದ್ದಾರೆ. ರಿಸಲ್ಟ್ ಬರುವವರಗೆ ಬೇರೆ ಕಡೆ ಐಸೊಲೇಶನ್ ಮಾಡಬೇಕಿತ್ತು. ಆದರೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ತಾಳ್ಮೆಯಿಂದ ವರ್ತಿಸದೆ ಎಡವಟ್ಟು ಮಾಡಿದೆ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ತುಂಬು ಗರ್ಭಿಣಿ ಒಂದು ರಾತ್ರಿ ಆತಂಕದಲ್ಲೇ ಕಳೆಯುವಂತಾಗಿದೆ.
ಒಂದು ಕಡೆ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿಕೊಳ್ಳಬಹುದು ಎಂದು ಭಾರತ ಸರ್ಕಾರವೇ ಅನುಮತಿ ಕೊಟ್ಟಿದೆ. ಆದರೆ ಮಾಡುತ್ತಿರುವ ಟೆಸ್ಟ್ ಮೇಲೆ ಜನರು ನಂಬಿಕೆ ಇಟ್ಟುಕೊಳ್ಳಬಹುದಾ..? ಎನ್ನುವ ಸಾಮಾನ್ಯ ಪ್ರಶ್ನೆ ಉದ್ಭವ ಆಗುವಂತೆ ಮಾಡಿದೆ. ಕರೋನಾ ರೋಗಿ ಎಂದು ನಿರ್ಧರಿಸುವ ಮುನ್ನ ಎರಡೆರಡು ಬಾರಿ ಪರೀಕ್ಷಿಸಬೇಕು ಆರೋಗ್ಯ ಇಲಾಖೆ ಸಿಬ್ಬಂದಿಯೇ ಹೇಳುತ್ತಾರೆ. ಆದರೆ ಪೋಲೀಸ್ ಪೇದೆ ಮತ್ತು ಗರ್ಭಿಣಿ ಇಬ್ಬರ ವಿಚಾರದಲ್ಲೂ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಮಹಾನ್ ಎಡವಟ್ಟು ಮಾಡಿದ್ದಾರೆ. ಈ ಅಧಿಕಾರಿಗಳ ಮಹಾ ಎಡವಟ್ಟಿನಿಂದ ಇಬ್ಬರು ರೋಗಿಗಳು ಅಲ್ಲದವರು ಪರಿತಪಿಸುತ್ತಿದ್ದಾರೆ. ಮಡಿವಾಳದ ಗರ್ಭಿಣಿ ಪೇಷೆಂಟ್ ನಂಬರ್ 652 ಎಂದು ಗುರುತಿಸಲಾಗಿದೆ. ಆದರೆ ಈ ಇಬ್ಬರು ರೋಗಿಗಳಿಗೂ ಈಗ ಸೋಂಕು ಬರುವ ಸಾಧ್ಯತೆ ಹೆಚ್ಚಾಗಿದೆ.
ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೇ ದೂರವಾಣಿ ಸಂಖ್ಯೆ ನೀಡಿ ಎರಡು ಅರ್ಜಿಗಳಿದ್ದವು. ಇದರಿಂದ ಗೊಂದಲ ಉಂಟಾಯಿತು. ಈಗ ಇಬ್ಬರೂ ಪೇದೆಗಳನ್ನು ಐಸೊಲೇಶನ್ ನಲ್ಲಿ ಇಡಲಾಗಿದೆ. ತಪ್ಪು ಎಸಗಿದ ಅಧಿಕಾರಿಗಳನ್ನು ಗುರುತಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸಮರ್ಥನೆ ಜೊತೆಗೆ ಶಿಕ್ಷೆ ಮಾತನಾಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿಗೆ ಶಿಕ್ಷೆಯೂ ಆಗಬಹುದು. ಆದರೆ ಒಂದು ದಿನಗಳ ಕಾಲ ಆ ತುಂಬು ಗರ್ಭಿಣಿ ಅನುಭವಿಸಿರುವ ಯಾತನೆಯನ್ನು ಊಹೆ ಮಾಡಲಾದಿತೇ..? ಆ ಪೊಲೀಸ್ ಪೇದೆ ಸಂಪರ್ಕಕ್ಕೆ ಬಂದಿದ್ದರು ಎಂದು ಕ್ವಾರಂಟೈನ್ಗೆ ಒಳಗಾಗಿದ್ದ ಅಮಾಯಕ ಜನರು ಯಾವ ತಪ್ಪು ಮಾಡಿದ್ದರು..? ಒಂದು ವೇಳೆ ಪಾಸಿಟೀವ್ ರೋಗಿಗಳ ಜೊತೆಗೆ ಒಂದು ದಿನ ಕಾಲ ಕಳೆದ ಕಾರಣ ಪೊಲೀಸ್ ಪೇದೆ ಹಾಗೂ ಗರ್ಭಿಣಿಗೆ ಒಂದೊಮ್ಮೆ ಇದೀಗ ಸೋಂಕು ಬಂದರೆ ಯಾರು ಜವಾಬ್ದಾರಿ..? ಶಿಕ್ಷೆ ಕೊಟ್ಟ ಮಾತ್ರಕ್ಕೆ ಇದೆಲ್ಲಾ ಸರಿಯಾಗುತ್ತಾ..? ಇದಕ್ಕೆಲ್ಲಾ ಸಂಬಂಧಪಟ್ಟವರೇ ಉತ್ತರ ಕೊಡಬೇಕಿದೆ.