-ನಾ ದಿವಾಕರ
ವಿಕಸಿತ ಆಗಲು ಮುಂದಡಿಯಿಡುತ್ತಿರುವ ನವ ಭಾರತದಲ್ಲಿ ಡಿಜಿಟಲ್ ಯುಗ ಸೃಷ್ಟಿಸಿರುವ ತಲ್ಲಣಗಳು ಜನಸಂಖ್ಯೆಯ ಯಾವ ವಲಯವನ್ನೂ ಬಿಡದೆ ಪ್ರಭಾವಿಸಿವೆ ಪ್ರಭುತ್ವದ ಆಡಳಿತ ನೀತಿಗಳು ಮತ್ತು ಸಮಾಜದ ಮೆಲ್ಪದರದ ಸಮಾಜಗಳ (Elite societies) ನಿರ್ಲಿಪ್ತ-ನಿಷ್ಕ್ರಿಯ ಮನೋಭಾವ, ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲೂ ಉಂಟಾಗಿರುವ ಆತಂಕ-ತಳಮಳಗಳನ್ನು ತೆರೆಮರೆಗೆ ಸರಿಸಿಬಿಟ್ಟಿದೆ. ಈ ಪ್ರಕ್ರಿಯೆಗೆ ನೆರವಾಗಿರುವ ಆಧುನಿಕ ವಿದ್ಯುನ್ಮಾನ ಡಿಜಿಟಲ್ ಮಾಧ್ಯಮ, ಕೊಂಚ ಮಟ್ಟಿಗೆ ಮುದ್ರಣ ಮಾಧ್ಯಮ. ಮಡಿಲ ಮಾಧ್ಯಮ (Godi Media) ಎಂದೇ ಕರೆಯಲ್ಪಡುವ ಮುಖ್ಯವಾಹಿನಿಯ ಸುದ್ದಿವಾಹಿನಿಗಳು ಈ ಮೇಲ್ಪದರ ಸಮಾಜಗಳ ಪ್ರತಿನಿಧಿಗಳಾಗಿದ್ದು, ತಳಸಮಾಜದ ನೋವು-ಯಾತನೆಗಳನ್ನು ವಿಶಾಲ ಜನಸಂಖ್ಯೆಯ (Broader Populace) ದೃಷ್ಟಿಯಿಂದ ದೂರ ಇರಿಸಿವೆ.
ಇಂತಹ ವಿಷಮ ಸನ್ನಿವೇಶದಲ್ಲಿ ಮಾಧ್ಯಮಗಳಿಗೆ ಮಾರುಕಟ್ಟೆಯಲ್ಲಿ ಉಳಿಯವುದೇ ಒಂದು ಸವಾಲಾಗಿರುತ್ತದೆ. ಮುದ್ರಣ ಮಾಧ್ಯಮಗಳೂ ಸಹ ಸರ್ಕಾರಿ-ಖಾಸಗಿ-ಔದ್ಯಮಿಕ ಜಾಹೀರಾತುಗಳನ್ನೇ ಅವಲಂಬಿಸಿ ತಮ್ಮ ಅಸ್ತಿತ್ವವನ್ನು, ಪ್ರಸರಣದ ವ್ಯಾಪ್ತಿಯನ್ನು ಉಳಿಸಿಕೊಳ್ಳಬೇಕಿದೆ. ತತ್ಪರಿಣಾಮವಾಗಿ, ತಳಸಮಾಜವನ್ನು ಮತ್ತು ಅಲ್ಲಿನ ಜನರ ಸಂಕಟಗಳನ್ನು ಸಾಮಾನ್ಯ ಜನತೆಗೆ ತಲುಪಿಸುವ ಹೊಣೆಗಾರಿಕೆಯಿಂದ ಮುದ್ರಣ ಮಾಧ್ಯಮಗಳು ನಿಧಾನವಾಗಿ ಜಾರಿಕೊಳ್ಳುತ್ತಿವೆ. ತಳಸಮಾಜದ ಶೋಷಿತರು, ಕಾರ್ಮಿಕರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಅಂಚಿನಲ್ಲಿರುವ ಜನರು ಎದುರಿಸುವ ಸಮಸ್ಯೆಗಳನ್ನು ಕುರಿತ ವಿಶ್ಲೇಷಣಾತ್ಮಕ (Analytical) ಬರಹಗಳಿಗೆ ಮುಖ್ಯವಾಹಿನಿಗಳಲ್ಲಿ ಅವಕಾಶ (Space) ಕಡಿಮೆಯಾಗುತ್ತಲೇ ಇದೆ.ಈ ಕಾರಣಕ್ಕಾಗಿಯೇ ʼ ಪದಮಿತಿ ʼ ಎಂಬ ಬ್ರಹ್ಮರಾಕ್ಷಸನನ್ನು ಸೃಷ್ಟಿಸಲಾಗಿದೆ. (ಅರುಣಾ ರಾಯ್ ತಮ್ಮ ಪರ್ಸನಲ್ ಈಸ್ ಪೊಲಿಟಿಕಲ್ ಕೃತಿಯಲ್ಲಿ ಪದಮಿತಿಯನ್ನು ಸೂಪರ್ ಮಾನ್ಸ್ಟರ್ ಎಂದು ಕರೆಯುತ್ತಾರೆ ).
ಮಾಧ್ಯಮಗಳು ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದಲೇ, ವರ್ತಮಾನದ ಯುವ ಜನಾಂಗ ದೀರ್ಘ ಬರಹಗಳನ್ನು ಓದುವುದಿಲ್ಲ, ಅವರಲ್ಲಿ ಆ ತಾಳ್ಮೆ ಇಲ್ಲ ಎಂಬ ಅರ್ಧಸತ್ಯವನ್ನು ಸೃಷ್ಟಿಸಿವೆ. ಇದು ಬಹುಮಟ್ಟಿಗೆ ಮಿಥ್ಯೆಯಾಗಿ ಸಾಮಾನ್ಯೀಕರಣಗೊಂಡಿದೆ. ವಿಚಿತ್ರ ಎಂದರೆ ಈ ವ್ಯಾಖ್ಯಾನ ಮಾಡುವಾಗ ಹಿರಿಯ ತಲೆಮಾರಿನ ಓದುಗರು ಅಪ್ರಸ್ತುವಾಗಿಬಿಟ್ಟಿದ್ದಾರೆ. ಮಾಧ್ಯಮಗಳು ಇರುವುದೇ ಮಿಲೆನಿಯಂ ಜಗತ್ತಿಗಾಗಿ ಎಂಬ ಭ್ರಮೆಯನ್ನು ಹುಟ್ಟಿಸಲಾಗಿದೆ. ಕೆಲವು ಡಿಜಿಟಲ್ ಮಾಧ್ಯಮಗಳೂ ಇದೇ ಭ್ರಮೆಯಿಂದ ಆವೃತವಾಗಿವೆ. ವಾಸ್ತವ ಎಂದರೆ ಭಾಷಾತೀತವಾಗಿ ನೋಡಿದರೂ ಸಹ ಸುದೀರ್ಘ ಲೇಖನಗಳನ್ನು ಓದುವವರು ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಧ್ವನಿಸುತ್ತಲೇ ಇರುವ ಪ್ರತಿಧ್ವನಿ
ಈ ವೈಪರೀತ್ಯಗಳ ನಡುವೆ ಕನ್ನಡದಲ್ಲಿ ಡಿಜಿಟಲ್ ಸುದ್ದಿ ವಾಹಿನಿಯೊಂದನ್ನು ಆರಂಭಿಸಿ, ಯಶಸ್ವಿಯಾಗಿ ನಡೆದು ಏಳು ವರ್ಷಗಳನ್ನು ಪೂರೈಸಿರುವ ʼ ಪ್ರತಿಧ್ವನಿ ʼ ಕನ್ನಡದ ಹೆಮ್ಮೆಯ ವಾಹಿನಿಗಳಲ್ಲೊಂದಾಗಿದೆ. 2019ರಲ್ಲಿ ಆರಂಭವಾದ ʼ ಪ್ರತಿಧ್ವನಿ ʼ ಸಮಾಜದ ತಲ್ಲಣಗಳನ್ನು ಧ್ವನಿಸುತ್ತಿರುವುದೇ ಅಲ್ಲದೆ, ತಳಸಮಾಜದ ತುಮುಲಗಳನ್ನು, ಶೋಷಿತರ ಸಂಕಟಗಳನ್ನು ಗಮನಿಸುತ್ತಾ ಈ ವ್ಯತ್ಯಯಗಳಿಗೆ ಸ್ಪಂದಿಸುವ ಮೂಲಕ, ಅವಕಾಶವಂಚಿತ ಜನರ ಆತಂಕಗಳ ದನಿಯನ್ನು ಪ್ರತಿಧ್ವನಿಸುತ್ತಾ ಬಂದಿದೆ. ಬಹುಶಃ ಆರಂಭದ ದಿನಗಳಿಂದಲೂ ಪ್ರತಿಧ್ವನಿಯೊಡನೆ ನನ್ನ ಅಕ್ಷರದ ಒಡನಾಟವೂ ಇದೆ. ಕಳೆದ ಏಳು ವರ್ಷಗಳಲ್ಲಿ ನನ್ನ ಸಾವಿರಕ್ಕೂ ಹೆಚ್ಚು ಲೇಖನಗಳಿಗೆ ಜಾಗ ಕಲ್ಪಿಸುವ ಮೂಲಕ ಪ್ರತಿಧ್ವನಿ ನನ್ನ ಬರಹಲೋಕದ ವಿಸ್ತಾರಕ್ಕೆ ನೆರವಾಗಿದೆ.
ಇತ್ತೀಚಿನ ಒಳಮೀಸಲಾತಿ-ದಲಿತ ಚಳುವಳಿಯ ಸುತ್ತಲಿನ ಲೇಖನವನ್ನೂ ಒಳಗೊಂಡಂತೆ ಹತ್ತಾರು ಸರಣಿ ಲೇಖನಗಳನ್ನು ಪ್ರಕಟಿಸುವ ಮೂಲಕ ಪ್ರತಿಧ್ವನಿಯ ಸಂಪಾದಕರಾದ ಶಿವಕುಮಾರ್ ಮತ್ತು ಅವರ ಬಳಗ ಹೆಚ್ಚು ಜನರಿಗೆ ನನ್ನ ಸಂದೇಶವನ್ನು ರವಾನಿಸಲು ನೆರವಾಗಿದ್ದಾರೆ. ಈ ಆತ್ಮರತಿಯ ಮಾತುಗಳಿಂದಾಚೆ ನೋಡಿದಾಗಲೂ, ಪ್ರತಿಧ್ವನಿ ಎಲ್ಲ
ಆಯಾಮಗಳ ಬರಹಗಳಿಗೂ ಅವಕಾಶ ಕಲ್ಪಿಸುತ್ತಲೇ ಬಂದಿದೆ. ತತ್ವ, ಸಿದ್ದಾಂತ ಅಥವಾ ವ್ಯಕ್ತಿ ಕೇಂದ್ರಿತ, ಪಕ್ಷ ಕೇಂದ್ರಿತ ಬದ್ಧತೆಗಳಿಗೆ ಮಣಿಯದೆ, ಸಮಾಜದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಅನ್ಯಾಯಗಳ ವಿರುದ್ಧ ದನಿ ಎತ್ತುತ್ತಾ ಬಂದಿದೆ. ಹಾಗೆಯೇ ಸಾಮಾಜಿಕ ಹೋರಾಟದ ದನಿಗಳಿಗೆ ದನಿಗೂಡಿಸುತ್ತಾ ಬಂದಿದೆ.ಫೇಸ್‌ಬುಕ್, ಇನ್ಸ್‌ಟಾಗ್ರಾಂ, ಯು ಟ್ಯೂಬ್, ಪಾಡ್‌ಕಾಸ್ಟ್ ಮೊದಲಾದ ಡಿಜಿಟಲ್ ಸೇತುವೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ʼ ಪ್ರತಿಧ್ವನಿ ʼ, ವಾಟ್ಸಾಪ್ ವಿಶ್ವವಿದ್ಯಾಲಯದ ಪುಂಡರ ಗುಂಪಿನಿಂದ ಟೀಕಾಸ್ತ್ರಗಳನ್ನು ಎದುರಿಸುತ್ತಿದ್ದರೂ, ಎದೆಗುಂದದೆ ಸತ್ಯ-ವಾಸ್ತವದ ಪರ ನಿಂತಿರುವುದು ಮೆಚ್ಚುವಂತಹುದು.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ನಡೆಯುವ ಬೆಳವಣಿಗೆಗಳನ್ನು ವ್ಯಾಖ್ಯಾನಿಸುವಾಗ, ನಿಷ್ಪಕ್ಷಪಾತತೆಯಿಂದ, ಸಮಾಜಮುಖಿ ಧೋರಣೆಯೊಂದಿಗೆ ಪ್ರಸ್ತುತಪಡಿಸುವ ಒಂದು ಔದಾತ್ಯವನ್ನು ಸಹ ಪ್ರತಿಧ್ವನಿ ಕಾಪಾಡಿಕೊಂಡು ಬಂದಿದೆ. ಎಲ್ಲ ಆಯಾಮಗಳ ವಿಶ್ಲೇಷಣಾತ್ಮಕ ಬರಹಗಳಿಗೂ ಮುಕ್ತ ಅವಕಾಶವನ್ನು ಕಲ್ಪಿಸಿರುವ ಪ್ರತಿಧ್ವನಿ, ಕೋವಿದ್ ಸಂದರ್ಭದಲ್ಲಿ ಇಂತಹ ಹಲವಾರು ಬರಹಗಳ ಮೂಲಕ ಜನರ ಆತಂಕಗಳನ್ನು ದೂರ ಮಾಡಲು ಶ್ರಮಿಸಿದೆ.
ಮುದ್ರಣ ಮಾಧ್ಯಮ ಎದುರಿಸುತ್ತಿರುವ ಮಾರುಕಟ್ಟೆ ಒತ್ತಡಗಳು, ಮಾಧ್ಯಮ ವಲಯದ ಬಲಾಢ್ಯ ಸಮೂಹಗಳ ಪೈಪೋಟಿ ಮತ್ತು ಸರ್ಕಾರಗಳ ನಿರ್ಬಂಧಗಳನ್ನು ಎದುರಿಸುತ್ತಲೇ, ಪ್ರತಿಧ್ವನಿ ತನ್ನ ಧ್ವನಿಯನ್ನು ನಿರ್ಭಿಡೆಯಿಂದ ದಾಖಲಿಸುತ್ತಾ ಏಳು ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಚಾರ. ಸಂವೇದನಾಶೀಲ ಬಳಗವನ್ನು, ಸೂಕ್ಷ್ಮಗ್ರಾಹಿ ಸಂಪಾದಕ ಮಂಡಲಿಯನ್ನು ಹೊಂದಿರುವ ಪ್ರತಿಧ್ವನಿ ಸಮಾಜಕ್ಕೆ ಅತ್ಯವಶ್ಯವಾದ ಎಲ್ಲ ರೀತಿಯ ವಿಚಾರಗಳಿಗೂ ಮುಕ್ತ ಅವಕಾಶವನ್ನು ಕಲ್ಪಿಸುತ್ತಾ ಬಂದಿದೆ. ಈಗಲೂ ಮುಕ್ತವಾಗಿದೆ.
ಕನ್ನಡದ ಬರಹಗಾರರು, ಚಿಂತಕರು, ವಿದ್ವಾಂಸರು ಪ್ರತಿಧ್ವನಿಯನ್ನು ತಮ್ಮ ಅಕ್ಷರ ಸೇತುವೆಯಾಗಿ ಬಳಸಿಕೊಳ್ಳುವ ಮೂಲಕ, ದಿಕ್ಕುತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರುವ ಸಾಧನವಾಗಿಬಹುದು. ಮುದ್ರಿತ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವ ವರ್ತಮಾನದ ಸನ್ನಿವೇಶದಲ್ಲಿ ಡಿಜಿಟಲ್ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತಿದೆ.
ಕನ್ನಡದಲ್ಲಿ ಕೆಲವೇ ಮಾಧ್ಯಮಗಳು ಈ ಜವಾಬ್ದಾರಿಯನ್ನು ಸಮರ್ಪಕವಾಗಿ, ನ್ಯಾಯಯುತವಾಗಿ, ಜನಪರ ಕಾಳಜಿಯೊಂದಿಗೆ ನಿಭಾಯಿಸುತ್ತಿವೆ. ಅಂತಹ ಮಾಧ್ಯಮಗಳ ಪೈಕಿ ʼ ಪ್ರತಿಧ್ವನಿ ʼ ತನ್ನ ಪಯಣವನ್ನು ಯಶಸ್ವಿಯಾಗಿ ಮುಂದುವರೆಸಿದ್ದು, ಏಳು ವಸಂತಗಳನ್ನು ಪೂರೈಸಿದೆ.
ಪ್ರತಿಧ್ವನಿಯ ಅಂಕಣಕಾರನಾಗಿ ಹಾಗೂ ಸಾರ್ವಜನಿಕ ವ್ಯಕ್ತಿಯಾಗಿ ಶ್ರೀಯುತ ಶಿವಕುಮಾರ್ ಮತ್ತು ಅವರ ಸಮಸ್ತ ಬಳಗವನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಪ್ರತಿಧ್ವನಿ ಇನ್ನೂ ಜೋರಾಗಿ ಧ್ವನಿಸಲಿ, ತಳಸಮಾಜದ ದನಿಗೆ ದನಿಯಾಗಲಿ, ಮಾಧ್ಯಮ ಲೋಕದ ಔನ್ನತ್ಯವನ್ನು ಎತ್ತಿಹಿಡಿಯಲಿ ಎಂದು ಆಶಿಸುತ್ತೇನೆ. ದೀರ್ಘ ಕಾಲ ಕನ್ನಡದ ಜನತೆಯ ನೋವು ತಲ್ಲಣಗಳಿಗೆ ದನಿಗೂಡಿಸುತ್ತಾ ಮುಂದುವರೆಸಲಿ ಎಂದು ಹಾರೈಸುತ್ತೇನೆ.






