ಬಿಜೆಪಿ ತನ್ನ ಮೊದಲ ಶತ್ರು ಎಂದು ಹೇಳುವ ಎಸ್‌ಡಿಪಿಐ ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಅದರಲ್ಲಿ ತೀವ್ರ ಕುತೂಹಲ ಹುಟ್ಟಿಸಿರುವುದು ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಯುಟಿ ಖಾದರ್ ವಿರುದ್ಧ ಎಸ್‌ಡಿಪಿಐ ರಿಯಾಝ್ ಫರಂಗಿಪೇಟೆ ಕಣಕ್ಕಿಳಿದಿರುವುದು. ಇದೇ ರಿಯಾಝ್ ಫರಂಗಿಪೇಟೆ 2018ರ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ ರಮಾನಾಥ ರೈ ವಿರುದ್ಧ ಸ್ಪರ್ಧಿಸುವುದಾಗಿ ನಾಮಪತ್ರ ಸಲ್ಲಿಸಿ, ಕೊನೆ ಕ್ಷಣದಲ್ಲಿ ಹಿಂಪಡೆದಿದ್ದರು.
ಸ್ಥಳೀಯ ರಾಜಕೀಯ ಲೆಕ್ಕಾಚಾರದ ಪ್ರಕಾರ, ಯುಟಿ ಖಾದರ್ ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಿರುವ ರಿಯಾಝ್ ಫರಂಗಿಪೇಟೆಗೆ ಕ್ಷೇತ್ರದ ಮುಸ್ಲಿಮರ ನಿರ್ಣಾಯಕ ಮತಗಳೇನು ಬೀಳುವುದಿಲ್ಲ. ಹಾಗಾಗಿ, ರಿಯಾಝ್ ಫರಂಗಿಪೇಟೆ ಸ್ಪರ್ಧೆಯಿಂದ ಯುಟಿ ಖಾದರ್ ಕಳೆದುಕೊಳ್ಳುವುದು ಏನಿಲ್ಲ. ಹಾಗಾಗಿ ಎಸ್‌ಡಿಪಿಐ ಸ್ಪರ್ಧೆಯನ್ನು ಯುಟಿಕೆ ಗಂಭೀರವಾಗಿ ಪರಿಗಣಿಸಿಲ್ಲ, ಬದಲಾಗಿ ಎಸ್‌ಡಿಪಿಐ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಭಯ ಕಾಡುತ್ತಿದೆ ಎನ್ನಲಾಗಿದೆ.

2018 ರ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ ಮಾಜಿ ಸಚಿವ ರಮಾನಾಥ ರೈ ವಿರುದ್ಧ ಎಸ್‌ಡಿಪಿಐ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ರಿಯಾಝ್ ಫರಂಗಿಪೇಟೆ, ಕೊನೆ ಕ್ಷಣದಲ್ಲಿ ತನ್ನ ನಾಮಪತ್ರವನ್ನು ಹಿಂಪಡೆದಿದ್ದರು. ಇದನ್ನು ಬಿಜೆಪಿ ಸರಿಯಾಗಿ ಬಳಸಿಕೊಂಡಿತ್ತು. ರಮಾನಾಥ್ ರೈ ಅವರು ಎಸ್‌ಡಿಪಿಐಗೆ ಕೋಟಿ ವರದಕ್ಷಿಣೆ ನೀಡಿ ಎಸ್‌ಡಿಪಿಐಯನ್ನು ನಿಖಾ ಮಾಡಿಕೊಂಡಿದೆ ಎಂದು ಆಗಿನ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲೂ ಕಾಂಗ್ರೆಸ್ ಎಸ್‌ಡಿಪಿಐ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹುಯಿಲೆಬ್ಬಿಸಲಾಗಿತ್ತು. ಪರಿಣಾಮ ರಮನಾಥ್ ರೈ ಸೋಲು ಅನುಭವಿಸಬೇಕಾಯಿತು.
ಇದೇ ಯೋಜನೆಯನ್ನು ಉಳ್ಳಾಲ ಮತಕ್ಷೇತ್ರದಲ್ಲೂ ಪ್ರಯೋಗಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಕಾಂಗ್ರೆಸಿಗರಿಗೆ ಪ್ರಕಾರ ಎಸ್‌ಡಿಪಿಐ ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿಗೆ ಅನುಕೂಲ ಮಾಡಲಿದ್ದಾರೆ ಎನ್ನುವ ಆತಂಕವಿದೆ. ಒಂದು ವೇಳೆ ಎಸ್‌ಡಿಪಿಐ ಅಭ್ಯರ್ಥಿ ನಾಮಪತ್ರ ಹಿಂಪಡೆದರೆ, ಅದನ್ನು ಕಾಂಗ್ರೆಸ್-ಎಸ್‌ಡಿಪಿಐ ಮೈತ್ರಿ ಎಂದೇ ಪ್ರಚಾರ ಮಾಡುತ್ತದೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ವಾದ.

ಈಗಾಗಲೇ, ಪಿಎಫ್‌ಐಗೆ ಕಾಂಗ್ರೆಸ್ ಸಹಾಯ ಮಾಡಿತ್ತು ಎಂದು ಪ್ರಚಾರ ಮಾಡುವ ಬಿಜೆಪಿಗೆ ಎಸ್‌ಡಿಪಿಐ ಯ ಈ ನಡೆಯು ವರದಾನವಾಗಲಿದೆ. ಒಂದು ನಿಷೇಧಿತ ಸಂಘಟನೆಯ ಬೆಂಬಲವನ್ನು ಕಾಂಗ್ರೆಸ್ ಪಡೆದುಕೊಂಡಿದೆ ಎಂದು ಬಿಜೆಪಿ ಕೊನೆ ಕ್ಷಣದಲ್ಲಿ ಪ್ರಚಾರ ಮಾಡಿದರೆ, ಅದಕ್ಕೆ ಉತ್ತರ ಕೊಡುವ ಮುನ್ನವೇ ಮತದಾನದ ದಿನಾಂಕ ಬಂದಿರುತ್ತದೆ. ಯುಟಿ ಖಾದರ್ ಆಗಲಿ ಯಾರೇ ಕಾಂಗ್ರೆಸ್ ಅಭ್ಯರ್ಥಿಗಳಾಗಲಿ ನ್ಯೂಟ್ರಲ್ ಆಗಿರುವ ಬಹುಸಂಖ್ಯಾತ ಹಿಂದೂಗಳ ಮತವನ್ನು ಸುಲಭದಲ್ಲಿ ಕಳೆದುಕೊಳ್ಳುತ್ತಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ಅಲ್ಲದೆ, “ತಾಂಟ್ ರೇ ಬಾ ತಾಂಟ್” ಎಂದು ಬಹಿರಂಗ ಸಭೆಯಲ್ಲಿ ಸವಾಲು ಹಾಕಿ ಆತಂಕದ ವಾತಾವರಣ ಸೃಷ್ಟಿಸಿದಂತಹ ರಿಯಾಝ್ ಫರಂಗಿಪೇಟೆ ಅಂತಹ ವ್ಯಕ್ತಿ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿದೆ ಎಂದರೆ ಸಹಜವಾಗಿ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ಆತಂವೂ ಯುಟಿಕೆ ಬೆಂಬಲಿಗರಿಗೆ ಕಾಡುತ್ತಿದೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲೂ ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಾರ್ಯಕರ್ತರ ಹೆಸರು ಕೇಳಿಬಂದಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಹಾಗಾಗಿ, ಎಸ್‌ಡಿಪಿಐ ಸ್ಪರ್ಧಿಸುವುದಕ್ಕಿಂತ ಸ್ಪರ್ಧೆಯಿಂದ ಹಿಂದೆ ಜಾರುವುದೇ ಬಿಜೆಪಿಗೆ ಬೇಕಿದೆ ಎನ್ನಲಾಗಿದೆ. ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಜಾರಿದ ತಕ್ಷಣ ಒಳ ಒಪ್ಪಂದದ ಬಗ್ಗೆ ಪ್ರಚಾರ ಮಾಡುತ್ತದೆ, ಆ ಮೂಲಕ 2018 ರಲ್ಲಿ ರಮಾನಾಥ ರೈ ವಿರುದ್ಧ ಪ್ರಯೋಗಿಸಿದ ಅದೇ ಪ್ಲ್ಯಾನ್ ಅನ್ನು ಈ ಬಾರಿ ಉಲ್ಲಾಳ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಾಡಿಕೊಳ್ಳಲು ಬಿಜೆಪಿ ಚಿಂತಿಸುತ್ತಿದೆ ಎನ್ನಲಾಗಿದೆ.
ಆದರೆ, ಯಾವುದೇ ಕಾರಣದಿಂದಲೂ ಎಸ್‌ಡಿಪಿಐ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳುತ್ತಿದೆ. ಕೊನೆ ಕ್ಷಣದಲ್ಲಿ ಬಿಜೆಪಿಗೆ ಸಹಾಯವಾಗುವಂತೆ ಎಸ್‌ಡಿಪಿಐ ಹಿಂದೆ ಸರಿಯಲಿದೆಯೇ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.
