ರಾಜ್ಯದಲ್ಲಿ ಹೆಚ್ಚುತ್ತಿರು ಕರೋನ ಹಿನ್ನೆಲೆಯಲ್ಲಿ ಮತ್ತು ಜನರ ಆರೋಗ್ಯ ಹಿತದೃಷ್ಟಿಯಿಂದ ನಾವು ನಮ್ಮ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳುತ್ತಿದ್ದೇವೆ, ಕರೋನಾ 3ನೇ ಅಲೆ ತಗ್ಗಿದ ನಂತರ ಪಾದಯಾತ್ರೆ ಮುಂದುವರಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುತಿತಿ ಇಂದು ರಾಮನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರತಿದಿನ ದಿನಕ್ಕೆ ಸಾವಿರಾರು ಜನರಿಗೆ ಕೋವಿಡ್-19 ಸೋಂಕು ತಗುಲುತ್ತಿದೆ. ಜನರ ಆರೋಗ್ಯ ಹಿತದೃಷ್ಟಿಯಿಂದ ಮತ್ತು ಜವಾಬ್ದಾರಿಯುತ ರಾಷ್ಟ್ರಪಕ್ಷವಾಗಿ ಇವತ್ತು ರಾಮನಗರದಿಂದ ನಡೆಯಬೇಕಿದ್ದ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದೆ ಎಂದು ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಕರೋನಾ 3ನೇ ಅಲೆ ಹೆಚ್ಚಾಗಿದ್ದಕ್ಕೆ ಬಿಜೆಪಿ ಸರ್ಕಾರದ ಬೇಜವಾಬ್ದಾರಿಯೇ ಕಾರಣ, ಮುಖ್ಯಮಂತ್ರಿಗಳು ಸೇರಿದಂತೆ ಹಲವರು ಕರೋನಾ ಮೂರನೇ ಅಲೆ ಬರುವ ಮಾಹಿತಿ ಇದ್ದರೂ ಅನೇಕ ಕಾರ್ಯಕ್ರಮದಲ್ಲಿ ಬ್ಯೂಸಿ ಇದ್ದರು. ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ವಿಧಾನಸೌಧದಲ್ಲಿ ಸಾವಿರಾರು ಜನರು ಸೇರಿದ್ದರು. ಕೇಸ್ ಹೆಚ್ಚಾಗಿದ್ದರೂ ಸಿಎಂ ಸಭೆ ಮಾಡುವುದನ್ನು ನಿಲ್ಲಿಸಿರಲಿಲ್ಲ. ಕರೋನ ಹೆಚ್ಚಾದ ಮೇಲೆ ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಆದರೆ, ರಾಜ್ಯದ ಜನರ ಆರೋಗ್ಯದ ಬಗ್ಗೆ ನಮಗೆ ಕಾಳಜಿಯಿದೆ. ನಮ್ಮ ಪಾದಯಾತ್ರೆಯಿಂದ ಕರೋನಾ ಉಲ್ಭಣ ಆಗಬಾರದು ಎಂಬ ದೂರದೃಷ್ಟಿಯಿಂದ ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ನಾಯಕರೂ ಚರ್ಚೆ ಮಾಡಿ ಪಾದಯಾತ್ರೆ ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ. ಕೋವಿಡ್ ಕಡಿಮೆಯಾದ ಮೇಲೆ ಮತ್ತೆ 6 ದಿನಗಳ ಪಾದಯಾತ್ರೆ ರಾಮನಗರದಿಂದಲೇ ಮುಂದುವರಿಸುತ್ತೇವೆ. ಬೆಂಗಳೂರಿನಲ್ಲಿಯೇ ಕೊನೆಯಾಗಲಿದೆ. ನಮ್ಮ ಪಾದಯಾತ್ರೆಗೆ ಕಾರ್ಯಕರ್ತರು, ಜನರು ಉತ್ಸಾಹ, ಪ್ರೋತ್ಸಾಹ ತೋರಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.






