ಟಾಲಿವುಡ್ನ ಜನಪ್ರಿಯ ನಟರಾದ ವಿಜಯ್ ದೇವರಕೊಂಡ (Vijay Deverakonda) ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೇ ತಿಂಗಳು 26ರಂದು ಉದಯಪುರದಲ್ಲಿ ವಿವಾಹ ನಡೆಯಲಿದ್ದು, ಈಗಾಗಲೇ ಭರ್ಜರಿ ಸಿದ್ಧತೆ ಆರಂಭವಾಗಿದೆ ಎನ್ನಲಾಗಿದೆ.

ಇದೀಗ ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಯ ವೀಡಿಯೊ ಸ್ಟ್ರೀಮಿಂಗ್ ಹಕ್ಕುಗಳ ಕುರಿತು ಹೊಸ ವಿಚಾರ ಹೊರಬಿದ್ದಿದೆ. ಪ್ರಮುಖ ಅಂತಾರಾಷ್ಟ್ರೀಯ ಒಟಿಟಿ ಕಂಪನಿ ನೆಟ್ಫ್ಲಿಕ್ಸ್ (Netflix) ಮದುವೆಯ ವಿಡಿಯೋ ಹಕ್ಕುಗಳಿಗಾಗಿ ಸುಮಾರು 60 ಕೋಟಿ ರೂಪಾಯಿ ನೀಡಲು ಮುಂದಾಗಿತ್ತು ಎನ್ನಲಾಗಿದೆ. ಆದರೆ, ವಿಜಯ್ ದೇವರಕೊಂಡ ಈ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ವಿವಾಹವು ಖಾಸಗಿ ವಿಷಯವಾಗಿರುವುದರಿಂದ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಆಸಕ್ತಿ ಇಲ್ಲವೆಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಒಟಿಟಿಗೆ ಹಕ್ಕು ನೀಡಿದರೆ ಹಲವು ಷರತ್ತುಗಳು ಬರುತ್ತವೆ. ಇದರಿಂದ ಅತಿಥಿಗಳಿಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಹಿಂದೆ ನಟಿ ನಯನಾ ತಾರಾ ದಂಪತಿ ವಿವಾಹದ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿತ್ತು. ಬಳಿಕ ಅದನ್ನು ಸಾಕ್ಷ್ಯಚಿತ್ರವಾಗಿ ಬಿಡುಗಡೆ ಮಾಡಲಾಗಿತ್ತು.







