ಗ್ಲೋಬಲ್ ಟ್ರಸ್ಟ್ ಬ್ಯಾಂಕಿನ ಹಳೆಯ ಪ್ರಕರಣದಿಂದ ಹಿಡಿದು ಇತ್ತೀಚಿನ ಯೆಸ್ ಬ್ಯಾಂಕ್ ಹಗರಣದ ವರೆಗೆ ಮುಳುಗುವ ಹಂತದಲ್ಲಿದ್ದ ಅನೇಕ ಖಾಸಗಿ ಬ್ಯಾಂಕುಗಳು ಮತ್ತು ಅವುಗಳ ಗ್ರಾಹಕರನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ಮಾತ್ರ ರಕ್ಷಿಸಿವೆ. ಖಾಸಗಿ ವಲಯದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ಮೋಸˌ ಹಾಗು ವಂಚನೆ ಪ್ರಕರಣಗಳು ಟಿವಿ ಮೇಘಾ ಧಾರವಾಹಿಗಳಂತೆ ಮುಂದುವರೆದಿವೆ. ಖಾಸಗಿ ಬ್ಯಾಂಕುಗಳನ್ನು ಡೀಫಾಲ್ಟ್ ಮಾಡುವ ಮೂಲಕ ಲೂಟಿ ಹೊಡೆದವರೇ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಖರೀದಿ ಪ್ರಕ್ರೀಯೆಯ ಮುಂಚೂಣಿಯಲ್ಲಿದ್ದಾರೆ. ಇದು ಕಳ್ಳನ ಕೈಯಲ್ಲಿ ಖಜಾನೆಯ ಕೀಲಿಕೈ ಕೊಟ್ಟಂತೆ ಆಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಸಮರ್ಥ, ಪರಿಣಾಮಕಾರಿಯಲ್ಲದ, ಅಪ್ರಾಮಾಣಿಕ ಮತ್ತು ಭ್ರಷ್ಟ ಎನ್ನುವುದಾದಲ್ಲಿ, ಅವನ್ನು ನಿರ್ವಹಿಸಿˌ ಮುನ್ನೆಡೆಸುವ ಸರಕಾರವೇ ಸ್ವತಃ ಅಸಮರ್ಥ, ಅಪ್ರಾಮಾಣಿಕ ಮತ್ತು ಭ್ರಷ್ಟ ಎನ್ನಲೆಬೇಕಾಗುತ್ತದೆ.

ವರ್ಷಗಳ ಹಿಂದೆ ನಮ್ಮ ಪ್ರಧಾನಿಗಳು Government has no business to do the business ಎಂದು ಯಾವ ಅಳುಕೂ ಇಲ್ಲದೆ ಹೇಳಿಕೆ ನೀಡಿದ್ದರು. ಹಾಗಾದರೆ ಸರ್ಕಾರಕ್ಕೆ ಯಾವುದೇ ವ್ಯವಹಾರ ಮಾಡುವ ಇಚ್ಛೆ ಇಲ್ಲ ಅಂತಾದರೆ ವ್ಯವಹಾರ/ಉದ್ಯೋಗಗಳಿಗೆ ಸರ್ಕಾರವನ್ನು ನಡೆಸುವ ಮತ್ತು ನಿಯಂತ್ರಿಸುವ ಇಚ್ಛೆ ಏಕೆ ಎಂದು ಪ್ರಶ್ನಿಸಬೇಕಾಗುತ್ತದೆ. ದೇಶದ ರಸ್ತೆಗಳು, ಸಾರಿಗೆ ವ್ಯವಸ್ಥೆ, ರೈಲ್ವೆ, ವಿಮಾನ ನಿಲ್ದಾಣಗಳು, ಅಣೆಕಟ್ಟುಗಳು, ಕಾಲುವೆಗಳು, ವಿದ್ಯುತ್ ಸರಬರಾಜು, ನೀರು ಸರಬರಾಜು, ಸಂಪರ್ಕ ಹಾಗು ಸಂವಹನ ವ್ಯವಸ್ಥೆಗಳು ಮತ್ತು ಸೌಲಭ್ಯಗಳು, ಐಐಟಿಗಳು ಮತ್ತು ಐಐಎಂಗಳು ಮೂಲಸೌಕರ್ಯ ಅಭಿವೃದ್ಧಿಗಳು ಹೀಗೆ ಒಂದೆರಡು ಯೋಜನೆಗಳಲ್ಲದೆ ದೇಶದ ಸಮಗ್ರ ಮೂಲಸೌಕರ್ಯ ವ್ಯವಸ್ಥೆಗಳು ನಿರ್ಮಾಣಗೊಂಡಿದ್ದೇ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಎನ್ನುವುದನ್ನು ನಾವು ಮರೆಯಬಾರದು.

ಈಗ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳನ್ನು ಸರಕಾರ ಇಂದು ವ್ಯವಹಾರವೆಂದು ಪರಿಗಣಿಸುತ್ತಿದೆ. ಆ ಕಾರಣದಿಂದಲೇ ಪ್ರಧಾನಿಗಳು ಸರಕಾರ ವ್ಯವಹಾರ ಉದ್ಯಮಗಳನ್ನು ನಡೆಸುವುದಕ್ಕಲ್ಲ ಎಂದು ರಾಜಾರೋಷದಿಂದ ಘೋಷಿಸಿದ್ದಾರೆ. ಸಾರ್ವಜನಿಕ ಸೇವೆಯನ್ನು ಹಿಂದಿನ ಸರಕಾರಗಳು ಸೇವೆ ಎಂದು ಪರಿಗಣಿಸಿದ್ದರಿಂದಲೇ ದೇಶ ಇಷ್ಟೊಂದು ಮುಂದುವರೆಯಲು ಸಾಧ್ಯವಾಗಿದೆ. ಆ ಎಲ್ಲಾ ಸಾರ್ವಜನಿಕ ಸೇವೆಗಳನ್ನು ಬಳಸಿ ದೊಡ್ಡವರಾದ ಪ್ರಧಾನಿಗಳು ಸಾರ್ವಜನಿಕ ಸೇವೆಗಳನ್ನು ವ್ಯವಹಾರ ಅಥವಾ ಉದ್ಯಮಗಳೆಂದು ಪರಿಗಣಿಸಿ ಅವುಗಳನ್ನು ಮುನ್ನೆಡೆಸುವುದು ಸರಕಾರದ ಕೆಲಸವಲ್ಲ ಎಂದು ಜಾಣ ಹೇಳಿಕೆ ನೀಡಿದ್ದಾರೆ. ಹಾಗೆ ಹೇಳಿಕೆ ನೀಡಿ ಸುಮ್ಮನಿರದ ಪ್ರಧಾನಿಗಳು ಸರಕಾರಿ ಸ್ವಾಮ್ಯದ ಉದ್ಯಮಗಳನ್ನೆಲ್ಲ ಒಂದೊಂದಾಗಿ ಕೃತಕ ನಷ್ಟ ತೋರಿಸಿ ತಮ್ಮ ಪರಮಾಪ್ತ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಸ್ವಾತಂತ್ರ್ಯ ನಂತರದ ಆರಂಭಿಕ ದಿನಗಳಿಂದ ಮತ್ತು ಮೊದಲನೇ ಪಂಚವಾರ್ಷಿಕ ಯೋಜನೆಯಿಂದ ಸಾರ್ವಜನಿಕ ಸೇವೆಗಳನ್ನು ಅಂದಿನ ಸರಕಾರ ವ್ಯವಹಾರವೆಂದು ಪರಿಗಣಿಸಿದ್ದರೆ ದೇಶ ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಅಂದಿನ ಸಹಕಾರಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿರದಿದ್ದರೆ ದೇಶ ಈ ಬಗೆಯ ಗಮನಾರ್ಹ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರಲಿಲ್ಲ. ಅಂದಿನ ಸರಕಾರ ಮಾಡಬೇಕಾದ ಕೆಲಸಗಳನ್ನು ಖಾಸಗಿಯವರಿಗೆ ವಹಿಸಿದ್ದರೆ ಇಂದು ದೇಶ ಖಾಸಗಿ ಕಾರ್ಪೋರೇಟಗಳ ಪಾಲಾಗಿರುತ್ತಿತ್ತು. ಅದಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಕಾರ್ಪೋರೇಟ್ ಕಳ್ಳರು ಇಂದು ತಮ್ಮ ಕಾರ್ಯವನ್ನು ಜಾಣ್ಮೆಯಿಂದ ಸಾಧಿಸುತ್ತಿದ್ದಾರೆ. ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದಿಂದ ಸ್ಥಾಪಿಸಲ್ಪಟ್ಟ ಬ್ಯಾಂಕಿಂಗ್ ಸೇರಿದಂತೆ ಮೇಲೆ ಪ್ರಸ್ತಾಪಿಸಲಾಗಿರುವ ಎಲ್ಲಾ ಬಗೆಯ ಮೂಲಸೌಕರ್ಯಗಳ ಸೇವೆಗಳನ್ನು ಬಳಸಿಕೊಂಡು ಕೆಲವು ಉದ್ಯಮಿಗಳು ಆರ್ಥಿಕವಾಗಿ ಬೆಳೆದಿದ್ದಾರೆ.

ಇಂತಹ ಉದ್ಯಮಿಗಳು ತಮ್ಮ ಸ್ವಂತ ಲಾಭಕ್ಕಾಗಿˌ ಕೋಟ್ಯಂತರ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಲಾಭದಲ್ಲಿರುವ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳ ಮೇಲೆ ವಕ್ರದೃಷ್ಟಿ ನೆಟ್ಟಿದ್ದಾರೆ. ಇಂದಿನ ಸರಕಾರ ಈ ಕಳ್ಳೋದ್ಯಮಿಗಳ ಹಿತಾಸಕ್ತಿಗಾಗಿ ದುಡಿಯುತ್ತಿದೆ. ಕಳೆದ ಎಪ್ಪತ್ತು ವರ್ಷಗಳ ಹಿಂಥೆ ನಮ್ಮ ಹಿರಿಯರು ದೂರದೃಷ್ಟಿಯಿಂದ ಸ್ಥಾಪಿಸಿರುವ ಲಾಭದಲ್ಲಿರುವ ಸರಕಾರಿ ಉದ್ಯಮಗಳು ಕೃತಕ ನಷ್ಟ ತೋರಿಸಿ ಆಡಳಿತ ಪಕ್ಷಕ್ಕೆ ಆಪ್ತರಾಗಿರುವ ಕಾರ್ಪೋರೇಟ್ ಕಳ್ಳೋದ್ಯಮಿಗಳಿಗೆ ಮಾರಾಟ ಮಾಡುವ ಸರಕಾರದ ಖಾಸಗೀಕರಣ ನೀತಿಯು ದೇಶದ ಜನರ ಭವಿಷ್ಯಕ್ಕೆ ಮಾರಕವಾಗಿದೆ. ಈ ಕಾರಣದಿಂದ ನಾವೆಲ್ಲರು ಈ ಅರ್ಬನ್ ನಾಜಿ ಮತ್ತು ಅಗ್ರಹಾರ ನಾಜಿ ಸಂತತಿಗಳು ದೇಶದ ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಳ್ಳೋದ್ಯಮಿಗಳಿಗೆ ಮಾರುತ್ತಿರುವುದರ ವಿರುದ್ಧ ಸಮರ ಸಾರಬೇಕಿದೆ. ಆ ಹೋರಾಟವು ಮತದಾನದ ಮೂಲಕ ಮಾಡಬೇಕಾಗಿದೆ.
~ ಡಾ. ಜೆ ಎಸ್ ಪಾಟೀಲ.






