ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಕೇಸ್ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ತಿದ್ದು, ಒಂದಲ್ಲಾ ಎರಡಲ್ಲ 700 ಜನ ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆಯಲಾಗಿದೆ.

ವಿವಿಧ ಮಹಿಳಾ ಒಕ್ಕೂಟಗಳು, ಮಹಿಳಾ ಸಂಘಟನೆಗಳಿಂದ 700 ಮಂದಿ ಮಹಿಳೆಯರು ಪತ್ರ ಬರೆದಿದ್ದು, ಹೆಚ್.ಡಿ ರೇವಣ್ಣ ಅವರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಮನವಿ ಮಾಡಿಕೊಂಡಿದ್ದಾರೆ. ಅಖಿಲ ಭಾರತ ಸ್ತ್ರೀ ವಾದಿ ಒಕ್ಕೂಟ, ವುಮೆನ್ ಓಅರ್ ಡೆಮಾಕ್ರಸಿ ಸೇರಿ ಹಲವು ಸಂಘಟನೆಗಳು ಒಗ್ಗೂಡಿ ಪತ್ರ ಬರೆದಿವೆ.
ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ ರೇವಣ್ಣ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ರಾಜಕೀಯ ಅಧಿಕಾರ ಬಳಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸೆಗಲಾಗಿದೆ. ತಮ್ಮ ಹುದ್ದೆ ಮತ್ತು ಪ್ರಭಾವ ಬಳಸಿಕೊಂಡು ದೌರ್ಜನ್ಯ ಮಾಡಿದ್ದಾರೆ ಎಂದು ದೂರಿದ್ದಾರೆ.

ಮಹಿಳೆಯರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನ ನೋಡಿ ಆಶ್ಚರ್ಯ ಆಗಿದೆ. ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಈ ರೀತಿ ಹಲವು ಹೈ ಪ್ರೊಫೈಲ್ ಕೇಸ್ಗಳು ನಡೆದಿವೆ. ಎಸ್ಡಿಎ, ಬಿಜೆಪಿ ಮತ್ತು ಇತರ ಮೈತ್ರಿ ಪಕ್ಷಗಳ ಸದಸ್ಯರ ವಿರುದ್ಧ ಅನೇಕ ಕೇಸ್ಗಳು ಇವೆ. ಆದರೆ ರಾಷ್ಟ್ರೀಯ ಮಹಿಳಾ ಆಯೋಗ ದುರ್ಬಲ ಕ್ರಮ ತೆಗೆದುಕೊಂಡಿದೆ ಎಂದು ದೂರಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಆರೋಪಗಳಿವೆ, ಸುಮಾರು 2,976 ವಿಡಿಯೋಗಳಿವೆ ಎನ್ನಲಾಗ್ತಿದೆ. ಸಾಕಷ್ಟು ಪೆನ್ ಡ್ರೈವ್ಗಳ ಬಗ್ಗೆ ವಿಚಾರ ಹರಿದಾಡ್ತಿದೆ. ಇಷ್ಟೆಲ್ಲಾ ಆಗ್ತಿದ್ರೂ ರಾಷ್ಟ್ರೀಯ ಮಹಿಳಾ ಆಯೋಗ ಮೌನವೇಕೆ..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಈ ರೀತಿಯ ಆರೋಪ ಇರುವವರ ಪರವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಪ್ರಚಾರ ಮಾಡುವ ಮೂಲಕ ಯಾವ ಸಂದೇಶ ನೀಡಿದ್ದಾರೆ..? ಇವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. 700 ಜನ ಮಹಿಳೆಯರು ಸಹಿ ಹಾಕಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ರವಾನಿಸಿದ್ದಾರೆ.






