ಈ ದೇವಿ ಜಾತ್ರೆ ನಡೆಯಬೇಕಾದರೆ ಮೊದಲು ಐದು ದಿನ ಜನರು ಮನೆ ಖಾಲಿ ಮಾಡಬೇಕು. ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಸರ್ವ ಧರ್ಮದವರು ಈ ಆಚರಣೆಯನ್ನು ಪಾಲನೆ ಮಾಡಬೇಕು. ಈ ಆಚರಣೆ ಇರುವುದು ಎಲ್ಲಿ ಗೊತ್ತೆ ? ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ!

ಮೂರು ವರ್ಷಗಳಿಗೊಮ್ಮೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಗ್ರಾಮದೇವಿಯ ಜಾತ್ರೆ ನಡೆಯುತ್ತೆ. ಈ ಬಾರಿ ಇದೇ ಫೆಬ್ರವರಿ 25ರಿಂದ ಜಾತ್ರೆ ಆರಂಭವಾಗಲಿದೆ. ಹಾಗಾಗಿ ಈ ವರ್ಷದ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿಯನ್ನು ಸಹ ಆಚರಿಸುವುದಿಲ್ಲ.

ಜಾತ್ರೆ ಮೊದಲು ಕಲಘಟಗಿ ಹಾಗೂ ಸುತ್ತಲಿನ ಐದು ಹಳ್ಳಿಗಳ ಜನರು ಈ ಹೊರಬೀಡು ಪದ್ಧತಿಯನ್ನು ಆಚರಿಸುತ್ತಾರೆ. ಜನರು ಬೆಳಗ್ಗೆಯಿಂದ ಸಂಜೆಯವರೆಗೆ ಕುಟುಂಬ ಸಮೇತ ತಮ್ಮ ಮನೆಗಳಿಗೆ ಬೀಗ ಹಾಕಿ ಪಟ್ಟಣದಿಂದ ಹೊರ ಹೋಗುತ್ತಾರೆ.

ಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ ಹೊರವಾರ ಪದ್ಧತಿಯನ್ನು ಆಚರಿಸುತ್ತಾರೆ. ಜನರು ಮೂರು ಮಂಗಳವಾರ, ಎರಡು ಶುಕ್ರವಾರ ಸೇರಿ ಐದು ದಿನಗಳ ಕಾಲ ಮನೆಗಳನ್ನು ಖಾಲಿ ಮಾಡುತ್ತಾರೆ. ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಮನೆಯಿಂದ ದೂರವಿರುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಆಚರಣೆ ನಡೆಯುತ್ತೆ. ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನೂ ಮಾಡುವುದಿಲ್ಲ.

ಈ ಐದು ದಿನ ಅಂಗಡಿಗಳು ಸಹ ಮುಚ್ಚಿರುತ್ತೆ. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ. ಅವಳು ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂಬುದು ಜನರ ನಂಬಿಕೆ. ಹೊರವಾರದ ದಿನ ಮನೆಯಲ್ಲಿದ್ದರೆ ಕೆಟ್ಟದ್ದಾಗುತ್ತದೆ ಅನ್ನುವ ನಂಬಿಕೆ ಜನರಲ್ಲಿದ್ದು, ಎಲ್ಲಾ ಧರ್ಮೀಯರು ಈ ಆಚರಣೆಯನ್ನು ಕಟ್ಟುನಿಟ್ಟಾಗಿ ಮಾಡುತ್ತಾರೆ. ಹೊರವಾರ ಆಚರಣೆ ಮಾಡುವ ದಿನ ಮುಂಜಾನೆ ಹತ್ತು ಗಂಟೆಗೆ ಮನೆಯ ಹೊರಗಡೆ ಒಂದು ಚೊಂಬು ನೀರು ತುಂಬಿ ಇಟ್ಟು ಹೊರಡುತ್ತಾರೆ, ಸಂಜೆ ಮನೆಗೆ ಹೋಗಿ ನೀರನ್ನು ಪೂಜೆ ಮಾಡಿ ಮನೆಯೊಳಗೆ ಇಡುತ್ತಾರೆ. ದೇವಸ್ಥಾನ ನಿಗದಿ ಮಾಡಿದ ಒಟ್ಟು ಐದು ದಿನಗಳ ಕಾಲ ಇಂತಹದೊಂದು ಸಂಪ್ರದಾಯವನ್ನು ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.






