ಕೋಲಾರ: ಮೇ.18: ರಾಜ್ಯದ ಜನತೆ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ, ಬಲಿಷ್ಠವಾದ ಸರ್ಕಾರ ರಚನೆ ಮಾಡೋಕೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಹಾಗಾಗಿ ಈ ಬಾರಿ ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನಾನು ಮೂಲತಃ ಕಾಂಗ್ರೆಸ್ ಪಕ್ಷದವನೇ ಹಾಗಾಗಿ ನನಗೂ ಸಚಿವ ಸ್ಥಾನ ನೀಡಿ ಎಂದು ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಮನವಿ ಮಾಡಿದ್ದೇನೆ ಎಂದು ಮಾಲೂರು ಕ್ಷೇತ್ರದ ಶಾಸಕ ಕೆವೈ ನಂಜೇಗೌಡ ಹೇಳಿದರು.
ಕಳೆದ ಬಾರಿಯೇ ಬಿಜೆಪಿಗೆ ಹೋಗುತ್ತಿದ್ದೆವು, ಆದ್ರೆ ಕಾಂಗ್ರೆಸ್ ಸಿದ್ದಾಂತಕ್ಕೆ ಬದ್ಧರಾಗಿದ್ದೇವೆ: ಮಾಲೂರು ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಎರಡನೇ ಬಾರಿ ಕಾಂಗ್ರೆಸ್ ಗೆಲ್ಲಿಸಿದ್ದೇನೆ. ಎಷ್ಟೇ ಕಷ್ಟವಿದ್ದರೂ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದಿದ್ದೇನೆ. ಹಾಗಾಗಿ ಜನರ ಸೇವೆ ಮಾಡಲು ಮಂತ್ರಿ ಸ್ಥಾನ ನೀಡಿ ಎಂದು ರಿಕ್ವೆಸ್ಟ್ ಮಾಡಿದ್ದೇನೆ. ಮುಂದಿನದ್ದು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಪಕ್ಷದ ನಿಷ್ಠೆ ಮತ್ತು ಸಿದ್ಧಾಂತವನ್ನು ನಂಬಿಕೊಂಡು ಬಂದಂತಹವರು ನಾವು. ಇಲ್ಲದಿದ್ರೆ ಕಳೆದ ಬಾರಿಯೇ ನಾವೆಲ್ಲಾ ಬಿಜೆಪಿಗೆ ಹೋಗಿಬಿಡುತ್ತಿದ್ದೆವು. ಈಗಲೂ ಅಷ್ಟೇ ಸಚಿವ ಸ್ಥಾನಕ್ಕಾಗಿ ಒತ್ತಾಯ ಮಾಡುತ್ತಿದ್ದೇನೆ. ಆದ್ರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ ಎಂದರು.

ಒಂದು ಕ್ಷೇತ್ರದಲ್ಲಾದರು ಬಿಜೆಪಿ ಗೆಲ್ಲಿಸು ಎಂದು ಸಂಸದರಿಗೆ ಚಾಲೆಂಜ್ ಹಾಕಿದ್ದೆ: ಇನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಮೊದಲ ಕ್ಯಾಬಿನೆಟ್ ನಲ್ಲಿಯೇ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಷ್ಟು ದಿನ ಬಿಜೆಪಿ ಸರ್ಕಾರದ ವಿರುದ್ಧ ಜನರು ರೊಚ್ಚಿಹೋಗಿದ್ದರು. ಈಗ ಕರ್ನಾಟಕದಿಂದ ಪ್ರಾರಂಭವಾಗಿ ದೇಶದಲ್ಲಿ ಬಿಜೆಪಿ ಸರ್ವನಾಶವಾಗುತ್ತದೆ. ಇನ್ನು ಸಂಸದ ಮುನಿಸ್ವಾಮಿ ಅವರು ನನ್ನ ಮೇಲೆ ಹಗುರವಾಗಿ ಮಾತನಾಡುತ್ತಿದ್ದಾಗ ನಾನು ಒಂದು ಚಾಲೆಂಜ್ ಮಾಡಿದ್ದೆ. ಮಿಸ್ಟರ್ ಸಂಸದ ಮುನಿಸ್ವಾಮಿ ಅವರೇ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸು ನೋಡೋಣ ಎಂದು ಚಾಲೆಂಜ್ ಹಾಕಿದ್ದೆ. ಒಂದೇ ಒಂದು ಕ್ಷೇತ್ರದಲ್ಲೂ ಬಿಜೆಪಿಯನ್ನು ಗೆಲ್ಲಿಸಲು ಆಗಲಿಲ್ಲ.

ಸಂಸದರಿಗೆ ನಮ್ಮ ನೋವೇ ಶಾಪವಾಗಿ ತಟ್ಟಿದೆ: ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಬಗ್ಗೆಯೂ ಸಂಸದ ಮುನಿಸ್ವಾಮಿ ಕೇವಲವಾಗಿ ಮಾತನಾಡುತ್ತಿದ್ದರು. ಈಗ ಕ್ಷೇತ್ರದಲ್ಲಿ ಬಿಜೆಪಿ ಒಂದು ಕ್ಷೇತ್ರವೂ ಇಲ್ಲದೆ ರಾಜ್ಯದಲ್ಲಿ ಸರ್ವನಾಶವಾಗಿದೆ. ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ, ಶಿಡ್ಲಘಟ್ಟ ಸೇರಿದಂತೆ ಹಲವು ಕಡೆ ಬಿಜೆಪಿಗೆ ಡೆಪಾಜಿಟ್ ಬಂದಿಲ್ಲ. ಹಾಗಾದ್ರೆ ಎಲ್ಲಿ ಹೋಯ್ತು ನಿಮ್ಮ ಎಂಪಿಗಿರಿ. ನಮಗೆಲ್ಲಾ ವೈಯಕ್ತಿಕವಾಗಿ ತೊಂದರೆ ಕೊಡುತ್ತಿದ್ದರು. ನಮ್ಮ ನೋವೇ ಅವರಿಗೆ ಶಾಪವಾಗಿದೆ. ಸಂಸದರು ನಮ್ಮ ಮೇಲೆ ವೈಯಕ್ತಿಕವಾಗಿ ದ್ವೇಷ ಮಾಡಿದ್ರು. ಆದ್ರೆ ನಾವು ಮಾಡಲ್ಲ. ನಾನೂ ಸಹ ಕೆಳಹಂತದಿಂದ ಬಂದಿದ್ದು ವಿರೋಧ ಪಕ್ಷಗಳ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿಲ್ಲ. ಆದ್ರೆ ಎಂಪಿ ಮುನಿಸ್ವಾಮಿ ಒಬ್ಬರ ವಿರುದ್ಧ ಮಾತ್ರ ಮಾತನಾಡ್ತಿದ್ದೇನೆ. ಸಂಸದರು ಬೇಕಾದಂತೆಲ್ಲಾ ಮಾತನಾಡಿ ಈಗ ಅನುಭವಿಸುತ್ತಿದ್ದಾರೆ ಎಂದರು.