ಸಂಭಾಲ್ (ಉತ್ತರ ಪ್ರದೇಶ ; 46 ವರ್ಷಗಳಿಂದ ಬಂದ್ ಆಗಿದ್ದ ಮಂದಿರವನ್ನು ಜಿಲ್ಲಾಡಳಿತ ಇದೀಗ ಮತ್ತೆ ತೆರೆಯಿದ್ದು, ಹಿಂದೂ ಸಮುದಾಯದಲ್ಲಿ ಸಂತಸ ಮನೆಮಾಡಿದೆ. ಈಗ ದರ್ಶನಕ್ಕೆ ತೆರೆಯಲಾಗಿರುವ ಶಿವ ದೇವಾಲಯಕ್ಕೆ ದೂರದಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಎಸ್ಪಿ ಸಂಸದ ಜಿಯಾವುರ್ ರೆಹಮಾನ್ ಬರ್ಕ್ ಅವರಿಗೆ ಸೇರಿದ ಖಗ್ಗು ಸರೈ ಪ್ರದೇಶದಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ವಿದ್ಯುತ್ ಕಳವು ತಪಾಸಣೆ ನಡೆಸುತ್ತಿದ್ದಾಗ ಈ ಶಿವ ದೇವಾಲಯ ಪತ್ತೆಯಾಗಿದೆ. ಮುಚ್ಚಿ ಬೀಗ ಹಾಕಿದ್ದ ಈ ದೇವಸ್ಥಾನದ ಬಾಗಿಲು ಈಗ 46 ವರ್ಷಗಳ ನಂತರ ತೆರೆಯಲಾಗಿದೆ. ದೇವಾಲಯದಲ್ಲಿ ಶಿವಲಿಂಗ ಮತ್ತು ಹನುಮಾನ್ ವಿಗ್ರಹಗಳನ್ನು ಕಾಣುವ ಸಾಧ್ಯವಾಗಿದೆ.
ದುಡ್ಡಿದ ದಶಕಗಳ ನಂತರ ದೇವಾಲಯ ತೆರೆದಿರುವುದರ ಸುದ್ದಿ ಕೇಳಿ ಹಿಂದೂ ಧರ್ಮೀಯರು ದೌಡಾಯಿಸಿದ್ದಾರೆ. ಪುರೋಹಿತರನ್ನು ಕರೆಸಿಕೊಂಡು ದೇವಸ್ಥಾನವನ್ನು ಶುದ್ಧೀಕರಿಸಲಾಯಿತು, ನಂತರ ಪೂಜೆ ಪ್ರಾರಂಭವಾಯಿತು. ದೇವಾಲಯದ ಸುರಕ್ಷತೆಯನ್ನು ದೃಢಪಡಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾನುವಾರ, ದೇವಾಲಯ ತೆರೆದ ಎರಡನೇ ದಿನವೇ ಬೆಳಗ್ಗೆ ಭಕ್ತರು ಪೂಜೆಗಾಗಿ ಆಗಮಿಸತೊಡಗಿದರು.
ಸ್ಥಳೀಯರ ಪ್ರಕಾರ, 1978ರಲ್ಲಿ ನಡೆದ ಕೋಮು ಗಲಭೆಯ ನಂತರ ಸ್ಥಳೀಯ ಹಿಂದೂ ಸಮುದಾಯ ಈ ಪ್ರದೇಶವನ್ನು ತ್ಯಜಿಸಿತ್ತು, ಇದರಿಂದ ಭಸ್ಮ ಶಂಕರ್ ದೇವಾಲಯ ಮುಚ್ಚಲ್ಪಟ್ಟಿತ್ತು.
ವಿದ್ಯುತ್ ಕಳ್ಳತನದ ತಪಾಸಣೆ ನಡೆಸುತ್ತಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ವಂದನಾ ಮಿಶ್ರಾ, ತಪಾಸಣೆ ವೇಳೆ ಮಂದಿರ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದರು. “ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತಂದೆ. ಅದಾದ ನಂತರ ದೇವಾಲಯವನ್ನು ತೆರೆಯುವ ನಿರ್ಧಾರ ಕೈಗೊಳ್ಳಲಾಯಿತು,” ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನದ ಹತ್ತಿರ ಇರುವ ಬಾವಿಯನ್ನು ಪುನಶ್ಚೇತನಗೊಳಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.