ಈಗ ಚುನಾವಣೆಗೆ ಹೋದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಹೀಗಿರುವಾಗ ಆಪರೇಷನ್ ಹಸ್ತದ ಅನಿವಾರ್ಯತೆ ಏನಿದೆ ಎಂದು ಹಿರಿಯ ನಾಯಕರು ಮರುಪ್ರಶ್ನೆ ಕೇಳಿದ್ದಾರೆ.
2023 ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮೆಗಾ ಆಪರೇಷನ್ ಹಸ್ತಕ್ಕೆ ಮುಂದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟಿ ರೆಡಿ ಮಾಡಿಕೊಂಡು ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಆಪರೇಷನ್ ಮಾಡಲು ಸಜ್ಜಾಗಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಿಂದ ಬರೋಬ್ಬರಿ 20ಕ್ಕೂ ಹೆಚ್ಚು ಜೆಡಿಎಸ್ ಮತ್ತು ಬಿಜೆಪಿ ಹಾಲಿ-ಮಾಜಿ ಶಾಸಕರಿಗೆ ಗಾಳ ಹಾಕಿದ್ದಾರೆ. ಸದ್ಯದಲ್ಲೇ ಎರಡು ಪಕ್ಷಗಳಿಂದ ಹಲವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಹೀಗಿರುವಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡೆಗೆ ಹಿರಿಯ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಡಿ.ಕೆ ಶಿವಕುಮಾರ್ ಮೆಗಾ ಆಪರೇಷನ್ ಹಸ್ತಕ್ಕೆ ಕೈ ಪಾಳಯದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನ ಹೆಚ್ಚಿನ ಸಂಖ್ಯೆಯಲ್ಲಿ ಏಕೆ ಕರೆದುಕೊಂಡು ಬರುತ್ತಿದ್ದೀರಿ ಎಂದು ಹಿರಿಯ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಸದ್ದಿಲ್ಲದೇ ಆಪರೇಷನ್ ಹಸ್ತಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೈ ಹಾಕಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿದ್ದಾರೆ. ಜೆಡಿಎಸ್ನಿಂದಲೇ ಬರೋಬ್ಬರಿ ಎರಡು ಡಜನ್ ನಾಯಕರಿಗೆ ಗಾಳ ಹಾಕಲು ರಹಸ್ಯ ಕಾರ್ಯತಂತ್ರ ನಡೆಸಿದ್ದಾರೆ. ಇದರ ಹಿಂದಿನ ಉದ್ದೇಶವೇನು, ನಮ್ಮಲ್ಲಿ ಮುಂದಿನ ಚುನಾವಣೆಗೆ ನಿಲ್ಲಲು ನಾಯಕರು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮೆಗಾ ಆಪರೇಷನ್ ಹಸ್ತಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ಕೆ.ಹೆಚ್ ಮುನಿಯಪ್ಪ ಸೇರಿದಂತೆ ಹಲವರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಕೆಲ ನಾಯಕರನ್ನೂ ಸೆಳೆಯಲು ತೆರೆಮರೆ ಕಸರತ್ತು ಮಾಡುತ್ತಿದ್ದೀರಿ. 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನ ಗೆಲ್ಲಲು ಈ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಿದ್ದೀರಿ. ಏಕೆ ಚುನಾವಣೆಯಲ್ಲಿ ನಿಲ್ಲಲು ಕಾಂಗ್ರೆಸ್ ನಾಯಕರು ಇಲ್ಲವೇ? ಎಲ್ಲರನ್ನು ಕರೆದುಕೊಂಡು ಬಂದು ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ತಪ್ಪಿಸುವ ಯೋಚನೆಯಾ? ಎಂದು ಕಿಡಿಕಾರಿದ್ದಾರೆ.
ಮಾಜಿ ಸಿಎಂ ಬಂಗಾರಪ್ಪ ಪುತ್ರ ಮತ್ತು ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದಾರೆ. ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ನಾಯಕ ಜಿ.ಟಿ ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡ ಕೂಡ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ. ಮುಂದಿನ ಚುನಾವಣೆ ಹೊತ್ತಿಗೆ ಇನ್ನಷ್ಟು ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ಗಾಳ ಹಾಕು ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನು, ಕಾಂಗ್ರೆಸ್ಗೆ ಆಪರೇಷನ್ ಹಸ್ತದ ಅಗತ್ಯವೇ ಇಲ್ಲ. ಈಗ ಚುನಾವಣೆಗೆ ಹೋದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಹೀಗಿರುವಾಗ ಆಪರೇಷನ್ ಹಸ್ತದ ಅನಿವಾರ್ಯತೆ ಏನಿದೆ ಎಂದು ಹಿರಿಯ ನಾಯಕರು ಮರುಪ್ರಶ್ನೆ ಕೇಳಿದ್ದಾರೆ.
ಕಾಂಗ್ರೆಸ್ ತತ್ವ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬೇಕಾದರೆ ಬರಲಿ, ಇಲ್ಲದೇ ಹೋದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವ ಒಪ್ಪಿಕೊಂಡು ಬರಲಿ. ಹೀಗೆ ಪಕ್ಷ ತತ್ವ ಸಿದ್ಧಾಂತ ಒಪ್ಪಿಕೊಂಡು ಬರುವ ಎಲ್ಲರಿಗೂ ಕಾಂಗ್ರೆಸ್ನಲ್ಲಿ ಅವಕಾಶ ಇದೆ. ನಾವು ಇದಕ್ಕೆ ಕೈ ಜೋಡಿಸುತ್ತೇನೆ. ಯಾವುದೇ ಅಭ್ಯಂತರ ಇಲ್ಲದೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಸ್ವಹಿತಾಸಕ್ತಿಗಾಗಿ ಜೆಡಿಎಸ್, ಬಿಜೆಪಿ ನಾಯಕರನ್ನ ಪಕ್ಷಕ್ಕೆ ಕರೆತರುವುದು ಸರಿಯಲ್ಲ. ನಮ್ಮಲ್ಲೇ ದೊಡ್ಡ ಸಂಖ್ಯೆಯಲ್ಲಿ ನಾಯಕರ ದಂಡು ಇದೆ. ಬೇರೆ ಪಕ್ಷಗಳಿಂದ ಕರೆತರುವ ಅಗತ್ಯ ಇಲ್ಲ. ನಾವೇ ಮುಂದೆ ನಿಂತು ಚುನಾವಣೆ ಗೆಲ್ಲಿಸುತ್ತೇವೆ. ಆಪರೇಷನ್ ಹಸ್ತ ಮಾಡುವ ಬದಲಿಗೆ ಪಕ್ಷ ಸಂಘಟನೆಗೆ ಒತ್ತು ನೀಡೋಣ. ಬೇರೆ ಪಕ್ಷದಿಂದ ಬರುವ ಯಾರೇ ಆಗಲೀ ಒಂದಲ್ಲ ಒಂದು ಬೇಡಿಕೆ ಇಟ್ಟುಕೊಂಡು ಬರುತ್ತಾರೆ. ಯಾರಿಗೂ ಸ್ವಾಯತ್ತತೆ ಎಂಬುದೇ ಇರೋದಿಲ್ಲ ಎಂದು ಹೇಳಿದ್ದಾರೆ.
ಹೀಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನಡೆಗೆ ಅಸಮಾಧಾನ ಹೊರಹಾಕಿರುವ ಹಿರಿಯ ಕಾಂಗ್ರೆಸ್ಸಿಗರು, ಆಪರೇಷನ್ ಹಸ್ತದಿಂದ ಬರುವ ಎಲ್ಲರಿಗೂ ಟಿಕೆಟ್ ನೀಡಲಾಗುವುದಿಲ್ಲ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತಾ ಗೆಲ್ಲಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.