ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ಹೊಸ ಟೀಸರ್ ಇಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರದ ನಂತರ ತೀವ್ರ ಕುತೂಹಲ ಮೂಡಿಸಿದ್ದ ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಧೂಳೆಬ್ಬಿಸುವುದು ಗ್ಯಾರಂಟಿ ಎನ್ನುವುದು ಟೀಸರ್ ಸಾಬೀತು ಮಾಡಿದೆ. ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಈ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುಳಿವು ಟೀಸರ್ ಮೂಲಕ ಸಿಕ್ಕಿದೆ. ಮೊದಲು ಬಿಡುಗಡೆಯಾಗಿದ್ದ ಟೀಸರ್ ಹಾಗೂ ಈಗಿನ ಟೀಸರ್‌ನಲ್ಲಿ ಮಾಸ್ ಲುಕ್‌ನಲ್ಲಿ ಅಬ್ಬರಿಸಿದ್ದ ಯಶ್, ಈ ಬಾರಿ ಯಂಗ್ ಲುಕ್‌ನಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಇದು ಕಥೆಯಲ್ಲೊಂದು ಮಹತ್ವದ ತಿರುವು ಇರಬಹುದೆಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಟೀಸರ್‌ನಲ್ಲಿ ಯಶ್ ರಾ ಮತ್ತು ವೈಲೆಂಟ್ ಎರಡೂ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಸಾಕಷ್ಟು ಆಕ್ಷನ್ ಹಾಗೂ ರಕ್ತದ ಸನ್ನಿವೇಶಗಳು ಟೀಸರ್‌ನಲ್ಲಿ ಕಾಣಿಸುತ್ತವೆ.

‘ಈ ಸಲ ಯುದ್ಧನೇ ಬೇರೆ’ ಹಾಗೂ ‘ಹಠ ಬಿಡೋ ಮಾತೇ ಇಲ್ಲ’ ಎಂಬ ಡೈಲಾಗ್‌ಗಳು ಟೀಸರ್‌ನ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಿಂದೆ ಬಿಡುಗಡೆಯಾದ ಟೀಸರ್‌ಗಿಂತ ಹೊಸ ಟೀಸರ್ ಸಂಪೂರ್ಣ ಭಿನ್ನವಾಗಿದ್ದು, ಹೆಚ್ಚು ಆಕ್ಷನ್‌ಗೆ ಒತ್ತು ನೀಡಲಾಗಿದೆ.

ಈಗಾಗಲೇ ಬಹಳ ಕುತೂಹಲ ಮೂಡಿಸಿರುವ ಟಾಕ್ಸಿಕ್ ಸಿನಿಮಾಗೆ ಗೀತು ಮೋಹನದಾಸ್( Geetu Mohandas) ಆಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಯಶ್ ಕೂಡ ನಿರ್ಮಾಪಕರಲ್ಲಿ ಒಬ್ಬರು. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.






